ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಪ್ರಧಾನಿ ದ್ವೇಷ ರಾಜಕಾರಣದತ್ತ ಕಿವುಡಾಗಿದ್ದಾರೆ: ಮೋದಿಗೆ ಮಾಜಿ ಅಧಿಕಾರಿಗಳ ಪತ್ರ

  • ಬಲಪಂಥೀಯ ಗುಂಪುಗಳಿಗೆ ರಾಜ್ಯ ಸರ್ಕಾರಗಳಿಂದ ಮುಕ್ತ ಅಧಿಕಾರ
  • ನೂರಕ್ಕೂ ಅಧಿಕ ಮಾಜಿ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ 

"ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯ, ಅದರಲ್ಲೂ ವಿಶೇಷವಾಗಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ಸರ್ಕಾರಿ ಪ್ರಾಯೋಜಿತ ದ್ವೇಷ ಹಿಂಸಾಚಾರವು, ನಮ್ಮ ಸಂವಿಧಾನದ ಮೂಲಭೂತ ತತ್ವಗಳು ಮತ್ತು ಕಾನೂನು, ಬಹುಸಂಖ್ಯಾತ ಶಕ್ತಿಗಳಿಗೆ ಅಧೀನವಾಗಿರುವುದನ್ನು ಬಿಂಬಿಸುತ್ತಿದೆ" ಎಂದು ನೂರಕ್ಕೂ ಅಧಿಕ ಮಾಜಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ. 

ಮುಸ್ಲಿಮರನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ಆಕ್ರಮಣಗಳು ಕಳೆದ ಕೆಲವು ತಿಂಗಳಿನಿಂದ ಭಯಾನಕ ಸ್ವರೂಪವನ್ನು ಪಡೆದುಕೊ೦ಡಿದೆ. ಈ ಬೆಳವಣಿಗೆಗಳಲ್ಲಿ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಅಕ್ರಮಿಗಳಿಗೆ ಸಾಥ್ ನೀಡುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ, ಒಂದು ಸಮುದಾಯದ ವಿರುದ್ಧ ನಡೆಯುತ್ತಿರುವ ದ್ವೇಷ ಕಾರ್ಯಗಳ ವಿಚಾರದಲ್ಲಿ ʻಕಿವುಡಾಗಿದ್ದಾರೆʼ ಎಂದು ಮಾಜಿ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 

ʻಸಾಂವಿಧಾನಿಕ ನಡವಳಿಕೆ ಗುಂಪುʼ ಒಕ್ಕೂಟದ ಹೆಸರಿನಲ್ಲಿ ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಝೀರ್ ಜಂಗ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹಾಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪ್ರಧಾನ ಕಾರ್ಯದರ್ಶಿ ಟಿ ಕೆ ಎ ನಾಯರ್ ಮುಂತಾದ ಪ್ರಮುಖರು ಸೇರಿದಂತೆ ಸುಮಾರು 108 ಮಾಜಿ ಅಧಿಕಾರಿಗಳ ಸಹಿ ಇರುವ ಪತ್ರದ ಮೂಲಕ ಪ್ರಧಾನಿಗೆ ಮನವಿ ಮಾಡಲಾಗಿದೆ.

ʻದ್ವೇಷ ತುಂಬಿದ ವಿನಾಶದ ಉನ್ಮಾದದ ರಾಜಕಾರಣಕ್ಕೆ ದೇಶವು ಸಾಕ್ಷಿಯಾಗುತ್ತಿದೆ. ಇದು ಕೇವಲ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿಲ್ಲ, ಬದಲಾಗಿ ಸಂವಿಧಾನವನ್ನೇ ಗುರಿಯಾಗಿರಿಸಿಕೊಂಡಿದೆ. ಈ ಬೆಳವಣಿಗೆಗಳ ಕುರಿತು ಪ್ರಧಾನಿಯವರು ಮೌನ ವಹಿಸಿರುವುದು ಜಾಣ ಕಿವುಡತನವಾಗಿದೆ' ಎಂದು ಪತ್ರದಲ್ಲಿ ಟೀಕಿಸಲಾಗಿದೆ. 'ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ದ್ವೇಷದ ರಾಜಕೀಯವನ್ನು ಕೊನೆಗೊಳಿಸಲು ಪ್ರಧಾನಿಯವರು ಮಧ್ಯಪ್ರವೇಶಿಸುವ ಆಶಾಭಾವನೆ ಇದೆ' ಎಂದು ಬರೆದಿದ್ದಾರೆ.

ʻಮಾಜಿ ನಾಗರಿಕ ಸೇವಾ ಅಧಿಕಾರಿಗಳಾಗಿರುವ ನಾವು, ಇಂಥ ಸಂದರ್ಭದಲ್ಲಿ ನಮ್ಮ ಅನಿಸಿಕೆ ತಿಳಿಸುವುದು ಸೂಕ್ತ ಮತ್ತು ಅಗತ್ಯವೆನಿಸುತ್ತಿದೆ. ಬಿಜೆಪಿ ಆಡಳಿತ ನಡೆಸುತ್ತಿರುವ ಕರ್ನಾಟಕ, ಉತ್ತರಪ್ರದೇಶ, ಅಸ್ಸಾಂ, ಗುಜರಾತ್, ಹರಿಯಾಣ, ಮಧ್ಯಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಅಲ್ಪಸಂಖ್ಯಾತರ ಮೇಲೆ, ಅದರಲ್ಲೂ ಮುಸ್ಲಿಮರ ಮೇಲೆ ದ್ವೇಷ ಸಾಧಿಸಲಾಗುತ್ತಿದೆ.ʼ

ʻಗಲಭೆಯ ಹೆಸರಿನಲ್ಲಿ ಬಡವರ ಮನೆಗಳ ಮೇಲೆ ಬುಲ್ಡೋಝರ್‌ಗಳನ್ನು ಹಾಯಿಸಲಾಗುತ್ತದೆ. ಹಿಜಾಬ್ ವಿಷಯವನ್ನು ಅನಗತ್ಯವಾಗಿ ಬೆಳೆಸಲಾಗಿದೆ. ಹಿಂಸಾಚಾರವು ಕೇವಲ ಹಿಂದುತ್ವ ಕಾರ್ಯಸೂಚಿಯ ಭಾಗವಾಗಿ ಮತ್ತು ಕೋಮು ದಳ್ಳುರಿಯ ಕಾರ್ಯಸೂಚಿಯಾಗಿ ಉಳಿದಿಲ್ಲ. ಕಳೆದ ಕೆಲವು ದಶಕಗಳಿಂದ ದ್ವೇಷ ಹರಡುವುದು ಸಾಮಾನ್ಯ ವಿಷಯ ಎಂಬಂತಾಗಿದೆ. ಕಾನೂನು ಸುವ್ಯವಸ್ಥೆಯ ಜವಾಬ್ಧಾರಿ ಹೊತ್ತಿರುವ ಸರ್ಕಾರಗಳೇ ಹಿಂಸಾಚಾರಗಳಿಗೆ ನೇತೃತ್ವ ನೀಡುತ್ತಿದೆ.' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಸಂವಿಧಾನವು ಪ್ರತಿಯೊಬ್ಬರಿಗೂ ಅವರವರ ನಂಬಿಕೆಯನ್ನು ಪಾಲಿಸಿಕೊಂಡು ಹೋಗಲು, ವಸ್ತ್ರಧಾರಣೆ, ಆಹಾರ ಪದ್ಧತಿ, ವೈಯಕ್ತಿಕ ವಿಚಾರಗಳನ್ನು ಅನುಸರಿಸಿ ನೆಲದ ಕಾನೂನನ್ನು ಗೌರವಿಸಿ, ಬದುಕುವ ಹಕ್ಕನ್ನು ನೀಡಿದೆ. ಆದರೆ ಆಡಳಿತ ವರ್ಗವು ಕೆಲ ಬಲಪಂಥೀಯ ಗುಂಪುಗಳಿಗೆ ಹಿಂಸಾಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ, ಅಲ್ಪಸಂಖ್ಯಾತರು ಶಾಶ್ವತ ಭಯದ ವಾತಾವರಣದಲ್ಲಿ ಬದುಕು ನಡೆಸುವಂತಾಗಿದೆ. ಕಾನೂನನ್ನು ತಿರುಚುವ ಮೂಲಕ ಅವರ ಆಯ್ಕೆಯ ಸ್ವಾತಂತ್ರ್ಯವನ್ನು ಮಿತಿಗೊಳಿಸಿ ಮತ್ತು ಪೂರ್ವಾಗ್ರಹ ಪೀಡಿತ, ಕೋಮುವಾದಿ ಸಂಘಟನೆಗಳಿಗೆ ರಾಜ್ಯದ ಅಧಿಕಾರವನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಮಾಡಲಾಗಿದೆʼ ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಅಧಿಕಾರಿಗಳು ಗಂಭೀರ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

"ನಮ್ಮ ಶ್ರೇಷ್ಠ ನಾಗರಿಕ ಪರಂಪರೆ ಮತ್ತು ನಮ್ಮ ಸಂವಿಧಾನವು ಛಿದ್ರವಾಗುವ ಮುನ್ನ ʻಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ʼ ಎಂಬ ನಿಮ್ಮ ಭರವಸೆಯ ಮಾತುಗಳನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್