ಹಿಂದೂಗಳಿಗೆ ಮೀಸಲಿಟ್ಟ ನೀರು ಕುಡಿಯಲು ನನ್ನ ತಂದೆಗೂ ನಿಷೇಧವಿತ್ತು: ಮಾಜಿ ಸ್ಪೀಕರ್ ಮೀರಾ ಕುಮಾರ್

  • ರಾಜಸ್ಥಾನದಲ್ಲಿ ದಲಿತ ಬಾಲಕನ ಕೊಂದಿರುವ ಘಟನೆಗೆ ಮೀರಾ ಕುಮಾರ್ ಪ್ರತಿಕ್ರೀಯೆ
  • ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತಿ ವ್ಯವಸ್ಥೆ ನಮ್ಮ ದೊಡ್ಡ ಶತ್ರುವಾಗಿ ಉಳಿದಿದೆ

ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ಶಿಕ್ಷಕನೊಬ್ಬ ಒಂಬತ್ತು ವರ್ಷದ ದಲಿತ ಬಾಲಕನ್ನು ಕೊಂದಿರುವ ಅಮಾನವೀಯ ಘಟನೆಗೆ ಲೋಕಸಭಾ ಮಾಜಿ ಸಭಾಪತಿ ಮೀರಾ ಕುಮಾರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ರಾಜಸ್ಥಾನದ ದಲಿತ ವಿದ್ಯಾರ್ಥಿ ಇಂದ್ರ ಮೇಘವಾಲ್ ಎಂಬ ಪುಟ್ಟ ಮಗುವಿನ ಹತ್ಯೆಯನ್ನು ಖಂಡಿಸಿರುವ ಮೀರಾ ಕುಮಾರ್, ಈ ಹಿಂದೆ ತಮ್ಮ ತಂದೆಗೆ ಕುಡಿಯಲು ನೀರು ಕೊಡದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

“100 ವರ್ಷಗಳ ಹಿಂದೆ ನನ್ನ ತಂದೆ ಬಾಬು ಜಗಜೀವನ್ ರಾಮ್ ಅವರ ಶಾಲೆಯಲ್ಲಿ ಸವರ್ಣೀಯ ಹಿಂದೂಗಳಿಗೆ ಮೀಸಲಾದ ಹೂಜಿಯ ನೀರನ್ನು ಕುಡಿಯುವುದನ್ನು ನಿಷೇಧಿಸಿದ್ದರು. ಬಾಯಾರಿಕೆಯಿಂದ ಎಷ್ಟೇ ಬಳಲಿದರೂ ದಲಿತರು ಆ ಹೂಜಿಯ ನೀರು ಕುಡಿಯುವ ಅವಕಾಶವೇ ಇರಲಿಲ್ಲ. ಹಾಗೆ ಒಮ್ಮೆ ನೀರಡಿಕೆಯಿಂದ ಬಳಲಿದ ತಂದೆಯವರ ಪ್ರಾಣ ಉಳಿದಿದ್ದೇ ದೊಡ್ಡ ಪವಾಡ” ಎಂದು ಟ್ವೀಟ್ ಮಾಡಿದ್ದಾರೆ.

“ಇಂದು, ಕುಡಿಯುವ ನೀರಿನ ಕಾರಣಕ್ಕೆ ಒಂಬತ್ತು ವರ್ಷದ ದಲಿತ ಬಾಲಕನನ್ನು ಹತ್ಯೆ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತಿ ವ್ಯವಸ್ಥೆ ನಮ್ಮ ದೊಡ್ಡ ಶತ್ರುವಾಗಿ ಉಳಿದಿದೆ” ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನೆಲೆ

ಜುಲೈ 20ರಂದು ಜಾಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿ ಇಂದ್ರ ಮೇಘವಾಲ್ ಎಂಬ ದಲಿತ ಬಾಲಕ ಮಡಿಕೆಯನ್ನು ಮುಟ್ಟಿ ನೀರು ಕುಡಿದ ಕಾರಣಕ್ಕೆ ಅದೇ ಶಾಲೆಯ ಶಿಕ್ಷಕ ಚೈಲ್ ಸಿಂಗ್ ಬಾಲಕನನ್ನು ಮಾರಣಾಂತಿಕವಾಗಿ ಥಳಿಸಿದ್ದ. ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. 

ಆರೋಪಿ ಶಿಕ್ಷಕ ಚೈಲ್ ಸಿಂಗ್ (40) ಎಂಬಾತನನ್ನು ಬಂಧಿಸಲಾಗಿದ್ದು, ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ. ರಾಜಸ್ಥಾನ ರಾಜ್ಯ ಶಿಕ್ಷಣ ಇಲಾಖೆಯು ಈ ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ| ಕುಡಿಯುವ ನೀರಿನ ಕೊಡ ಮುಟ್ಟಿದ್ದಕ್ಕೆ ಶಿಕ್ಷಕನಿಂದ ಹಲ್ಲೆ; ದಲಿತ ವಿದ್ಯಾರ್ಥಿ ಸಾವು

5 ಲಕ್ಷ ಸಹಾಯಧನ

ದಲಿತ ಬಾಲಕನ ಸಾವಿಗೆ ಸಂಬಂಧಿಸಿದಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯಿಸಿ, “ದಲಿತ ಬಾಲಕನ ಹತ್ಯೆ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಘಟನೆಯಲ್ಲಿ ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಾನೂನು ಕ್ರಮ ಜರುಗಿಸಿ ಬಂಧಿಸಲಾಗಿದೆ. ಪ್ರತಿಯೊಂದು ರಾಜ್ಯದಲ್ಲಿಯೂ ಇಂಥ ಘಟನೆಗಳು ನಡೆಯುತ್ತಿವೆ. ನೀವು ಟಿವಿ ನೋಡುತ್ತಿದ್ದರೆ ಅಥವಾ ಪತ್ರಿಕೆಗಳನ್ನು ಓದುತ್ತಿದ್ದರೆ ಈ ಘಟನೆಗಳು ಎಲ್ಲೆಡೆ ನಡೆಯುತ್ತವೆ ಎಂದು ನಿಮಗೆ ತಿಳಿದಿರುತ್ತದೆ” ಎಂದು ಪ್ರತಿಕ್ರೀಯೆ ನೀಡಿದ್ದರು. ಬಳಿಕ ದಲಿತ ಬಾಲಕನ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ. ಸಹಾಯಧನ ಘೋಷಿಸಿದ್ದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75| ಮಹಾಡ್‌ ಸತ್ಯಾಗ್ರಹದಿಂದ ಮೇಘವಾಲ್‌ ಸಾವಿನವರೆಗೆ ದಲಿತರ ದಾಹ ನೀಗಿಸದ ಸ್ವಾತಂತ್ರ್ಯ ಜೀವಜಲ!

ಶಾಸಕ ರಾಜೀನಾಮೆ

ರಾಜಸ್ಥಾನದ ತಮ್ಮ ಬರನ್-ಅತ್ರು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ವಿದ್ಯಾರ್ಥಿಯೊಬ್ಬ ಶಾಲಾ ಶಿಕ್ಷಕರ ಥಳಿತದಿಂದ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಪಾನ್ ಚಂದ್ ಮೇಘವಾಲ್ ಎಂಬುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಪಾನ್ ಚಂದ್ ಅವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ವಿಧಾನಸಭೆ ಸ್ಪೀಕರ್ ಸಿ.ಪಿ ಜೋಶಿ ಅವರಿಗೆ ರವಾನಿಸಿದ್ದಾರೆ.

“ದಲಿತ ವಿದ್ಯಾರ್ಥಿಯ ಸಾವಿನಿಂದ ನೋವಾಗಿದೆ. ಆದ್ದರಿಂದ ವಿಧಾನಸಭೆ ಸದಸ್ಯತ್ವವನ್ನು ತೊರೆಯುತ್ತಿದ್ದೇನೆ” ಎಂದು ಮೇಘವಾಲ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ 50 ಲಕ್ಷ ರೂ. ಆರ್ಥಿಕ ನೆರವು ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡುವಂತೆ ಪಾನ್ ಚಂದ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್