ಹಿಂದಿ ಕಡ್ಡಾಯಗೊಳಿಸುವ ಕೇಂದ್ರದ ನಿರ್ಧಾರಕ್ಕೆ ಈಶಾನ್ಯ ರಾಜ್ಯಗಳ ವಿರೋಧ

  • ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ
  • ಹಿಂದಿ ಕಡ್ಡಾಯಗೊಳಿವುದರ ವಿರುದ್ಧ ಈಶಾನ್ಯ ರಾಜ್ಯಗಳನ್ನು ಒಗ್ಗೂಡಿಸುತ್ತೇವೆ

ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಯನ್ನು ನಾವು ವಿರೋಧಿಸುತ್ತೇವೆ. ಹಿಂದಿ ಐಚ್ಛಿಕ ವಿಷಯವಾಗಿರಬಹುದು. ಆದರೆ, ಅದನ್ನು ಕಡ್ಡಾಯಗೊಳಿಸುವುದು ಸರಿಯಲ್ಲ ಎಂದು ಈಶಾನ್ಯ ವಿದ್ಯಾರ್ಥಿ ಸಂಘಟನೆ (ಎನ್‌ಇಎಸ್‌ಒ) ಅಧ್ಯಕ್ಷ ಸ್ಯಾಮ್ಯುವೆಲ್‌ ಬಿ ಜಿರ್ವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆಯ ವಿರುದ್ಧ ದಕ್ಷಿಣ ರಾಜ್ಯಗಳು ನಿರಂತವಾಗಿ ಹೋರಾಟ ನಡೆಸುತ್ತಲೇ ಇವೆ. ಇದೀಗ, ಈಶಾನ್ಯ ರಾಜ್ಯಗಳು ಕೂಡ ಹಿಂದಿ ಹೇರಿಕೆ ವಿರುದ್ದ ಧ್ವನಿಗೂಡಿಸಿವೆ. 

ಈಶಾನ್ಯ ರಾಜ್ಯಗಳಲ್ಲಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವುದನ್ನು ಜಿರ್ವಾ ವಿರೋಧಿಸಿದ್ದಾರೆ. ಹಿಂದಿಯನ್ನು ಕಡ್ಡಾಯಗೊಳಿವುದರ ವಿರುದ್ಧ ನಮ್ಮ ಸಂಘಟನೆಯು ಈಶಾನ್ಯ ರಾಜ್ಯಗಳನ್ನು ಒಗ್ಗೂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. 

ʼಸಂವಿಧಾನದ ಆರನೇ ಭಾಗದ (ಶೆಡ್ಯೂಲ್) ಪ್ರಕಾರ, ಕೇಂದ್ರ ಸರ್ಕಾರವು ರಾಜ್ಯಗಳ ಮೇಲೆ ಹಿಂದಿಯನ್ನು ಹೇರಲು ಸಾಧ್ಯವಿಲ್ಲ. ಖಾಸಿ ಮತ್ತು ಗಾರೊ ನಮ್ಮ ರಾಜ್ಯದ ಎರಡು ಪ್ರಮುಖ ಭಾಷೆಗಳು. ಆದ್ದರಿಂದ, ನಮ್ಮ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಅನುಮತಿ ಇಲ್ಲʼ ಎಂದು ಮೇಘಾಲಯದ ಕಾಂಗ್ರೆಸ್‌ ಶಾಸಕ ಅಂಪಾರೀನ್‌ ಲಿಂಗ್ಡೋಹ್‌ ಹೇಳಿದ್ದಾರೆ. 

ಅಸ್ಸಾಂನ ಕೃಶಕ್ ಮುಕ್ತಿ ಸಂಗ್ರಾಮ್ ಸಮಿತಿ (ಕೆಎಂಎಸ್ಎಸ್) ಕೂಡ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಕ್ರಮವನ್ನು ವಿರೋಧಿಸಿದೆ. ''ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು "ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ" ಎಂದು ಕೆಎಂಎಸ್ಎಸ್ ಕಿಡಿಕಾರಿದೆ.

“ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ರಚಿಸಿದ ನಂತರ, ಅದು ಅಸ್ಸಾಮಿ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಹಿಂದಿ ಭಾಷಿಕ ಶಿಕ್ಷಕರನ್ನು ನೇಮಿಸಿದೆ" ಎಂದು ಅಸ್ಸಾಮಿಗರು ಆರೋಪಿಸಿದ್ದಾರೆ. 

ಶುಕ್ರವಾರವಷ್ಟೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹಿಂದಿ "ಭಾರತದ ಭಾಷೆ". ಎಂಟು ಈಶಾನ್ಯ ರಾಜ್ಯಗಳಲ್ಲಿ 10ನೇ ತರಗತಿವರೆಗೆ ಹಿಂದಿಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದರು.

ಅಮಿತ್‌ ಶಾ ಅವರ ಈ ಹೇಳಿಕೆಗೆ ಹಲವು ಈಶಾನ್ಯ ರಾಜ್ಯಗಳ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್