ಪಾಕಿಸ್ತಾನ| ಪಂಜಾಬ್‌ ಪ್ರಾಂತ್ಯದಲ್ಲಿ ಭೀಕರ ಅಪಘಾತ; ಸುಟ್ಟು ಕರಕಲಾದ 20 ಮಂದಿ

  • ವಾರದಲ್ಲಿ ಸಂಭವಿಸಿದ ಎರಡನೇ ಭೀಕರ ರಸ್ತೆ ಅಪಘಾತ
  • ಸುಟ್ಟ ಗಾಯಗಳಿಂದ ಬಳಲುತ್ತಿರುವ ಆರು ಪ್ರಯಾಣಿಕರು

ಅತಿವೇಗದಿಂದಾಗಿ ಮಂಗಳವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಯಾಣಿಕರ ಬಸ್ ಮತ್ತು ತೈಲ ಟ್ಯಾಂಕರ್ ನಡುವಿನ ಭೀಕರ ಅಪಘಾತದಲ್ಲಿ ಕನಿಷ್ಟ 20 ಮಂದಿ ಸಜೀವವಾಗಿ ದಹನವಾಗಿದ್ದಾರೆ.

ಕಳೆದ ಮೂರು ದಿನದಲ್ಲಿ ಈ ಪ್ರಾಂತ್ಯದಲ್ಲಿ ನಡೆದ ಎರಡನೇ ಭೀಕರ ರಸ್ತೆ ಅಪಘಾತ ಇದಾಗಿದ್ದು. ಲಾಹೋರ್‌ನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮುಲ್ತಾನ್‌ನ ಮೋಟಾರ್ ಮಾರ್ಗದಲ್ಲಿ‌ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

“ಲಾಹೋರ್‌ನಿಂದ ಕರಾಚಿಗೆ ತೆರಳುತ್ತಿದ್ದ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿಯಾದ ಪರಿಣಾಮ ಬಸ್ ಮತ್ತು ಟ್ಯಾಂಕರ್ ಎರಡೂ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಪ್ರಯಾಣಿಕರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆರು ಪ್ರಯಾಣಿಕರನ್ನು ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಸಹ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ತಾಲಿಬಾನ್‌ 01 | ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಮರೆದ ತಾಲಿಬಾನ್‌; ನರಕಯಾತನೆಯಲ್ಲಿ ನಾಗರಿಕರು

"ಸಾವಿಗೀಡಾದ ಪ್ರಯಾಣಿಕರ ದೇಹಗಳು ಸಂಪೂರ್ಣವಾಗಿ ಗುರುತಿಸಲಾಗದಷ್ಟು ಸುಟ್ಟುಹೋಗಿವೆ. ಈ ದೇಹಗಳನ್ನು ಡಿಎನ್‌ಎ ಪರೀಕ್ಷೆಯ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು'' ಪೊಲೀಸರು ಹೇಳಿದ್ದಾರೆ.

"ಅಪಘಾತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು. ಇದರ ಕುರಿತಾಗಿ ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ" ಎಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಸಂತಾಪ ವ್ಯಕ್ತಪಡಿಸಿದ್ದಾರೆ. 

ಮೃತರ ಕುಟುಂಬದವರನ್ನು ಗುರುತಿಸಲು ಸಹಕರಿಸುವಂತೆ ಆಡಳಿತ ಮಂಡಳಿಗೂ ಸಹ ಸೂಚಿಸಿದ್ದಾರೆ.

ಕಳೆದ ಶನಿವಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್‌ಗೆ ಲೋಡ್ ಟ್ರಕ್ ಡಿಕ್ಕಿ ಹೊಡೆದು ಕನಿಷ್ಠ 13 ಜನರು ಸಾವನ್ನಪ್ಪಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್