
- ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ತೀವ್ರ ವಿರೋಧ
- ಪ್ರತಿಭಟನಾಕಾರರನ್ನು ಬೂಟು ಕಾಲಿನಿಂದ ಒದ್ದ ಪೊಲೀಸರು
ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಸಿಲ್ವರ್ಲೈನ್ ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ವಿರುದ್ಧ ಪ್ರತಿಭಟನೆ ಮತ್ತೆ ತೀವ್ರಗೊಂಡಿದೆ. ರಾಜಧಾನಿ ತಿರುವನಂತಪುರಂನ ಕಣಿಯಾಪುರಂ ಎಂಬಲ್ಲಿ ಯೋಜನೆಯ ಗುರುತು (ಸರ್ವೆ) ಕಲ್ಲುಗಳನ್ನು ಹಾಕುವ ಸಂದರ್ಭದಲ್ಲಿ ಸ್ಥಳೀಯರು ಮತ್ತು ಪೊಲೀಸರ ನಡುವೆ ತೀವ್ರ ಜಟಾಪಟಿ ನಡೆದಿದೆ.
ಪ್ರತಿಭಟನೆಗೆ ಕಾರಣ
ಕೆ-ರೈಲು ಎಂದೇ ಕರೆಯಲಾಗುವ ಸಿಲ್ವರ್ಲೈನ್ ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಅಧಿಕಾರಿಗಳು ಸ್ಥಳ ಗುರುತು ಕಾರ್ಯ ನಡೆಸಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಸ್ಥಳೀಯರು ಅವರನ್ನು ತಡೆದಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯರ ಜೊತೆಗೂಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಬಲ ಪ್ರಯೋಗಿಸಿದ್ದು, ಬೂಟು ಕಾಲಿನಿಂದ ಒದೆಯುವ ವಿಡಿಯೋಗಳನ್ನು ಸ್ಥಳೀಯ ದೃಶ್ಯ ಮಾಧ್ಯಮಗಳು ಪ್ರಸಾರ ಮಾಡಿವೆ.
#WATCH | A clash broke out between Congress workers & police while the political party's members were protesting against the Silver Line project in Kerala's Thiruvananthapuram pic.twitter.com/p5hB0uSojY
— ANI (@ANI) April 21, 2022
ಗುರುತು ಕಲ್ಲು ಕಿತ್ತೆಸೆದ ಕಾಂಗ್ರೆಸ್
ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ಭಾಗವಾಗಿ ಕೇರಳದಲ್ಲಿ ಹಾಕಲಾಗಿರುವ ಎಲ್ಲಾ ಗುರುತು ಕಲ್ಲುಗಳನ್ನು ಕಿತ್ತೆಸೆಯಲಾಗುವುದು ಎಂದು ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಗುಡುಗಿದ್ದಾರೆ. ಸರ್ಕಾರಕ್ಕೆ ಸಾಮರ್ಥ್ಯವಿದ್ದರೆ ನಮ್ಮ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಿ. ಸಾರ್ವಜನಿಕರ ನೆಮ್ಮದಿಗಾಗಿ ನಾವು ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಸತೀಶನ್ ಹೇಳಿದ್ದಾರೆ.
ಮಾರ್ಚ್ 24ರಂದು ನಡೆದಿದ್ದ ಸಿಪಿಎಂ ಪಕ್ಷದ ಕಾರ್ಯಕಾರಿಣಿ ಸಭೆಯ ಬಳಿಕ ಗುರುತು ಕಲ್ಲುಗಳನ್ನು ಹಾಕುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಗುರುವಾರ ಅಧಿಕಾರಿಗಳು ಮತ್ತೆ ಕಾಮಗಾರಿ ಆರಂಭಿಸಿದ ಕಾರಣ, ಹಲವೆಡೆ ಸ್ಥಳೀಯರ ಜೊತೆ ಜಟಾಪಟಿ ನಡೆದಿದೆ.
ಸಿಲ್ವರ್ಲೈನ್ ರೈಲು ಯೋಜನೆ ವಿವರ
ಕೆ-ರೈಲು ಅಥವಾ ಸಿಲ್ವರ್ಲೈನ್ ಸೆಮಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆ ಕೇರಳ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ರಾಜಧಾನಿ ತಿರುವನಂತಪುರದಿಂದ ದಕ್ಷಿಣ ತುದಿಯಾದ ಕಾಸರಗೋಡು ನಡುವಿನ 10-12 ಗಂಟೆಗಳ ಪ್ರಯಾಣದ ಅವಧಿಯನ್ನು ಕೆ-ರೈಲು ಮೂರರಿಂದ ನಾಲ್ಕು ಗಂಟೆಗೆ ಇಳಿಸಲಿದೆ. ಎರಡು ನಗರಗಳ ನಡುವೆ ಗಂಟೆಗೆ 200 ಕಿ.ಮೀ. ವೇಗದಲ್ಲಿ ಕೆ-ರೈಲು ಸಂಚರಿಸಲಿದೆ.
ಕೆ-ರೈಲು ವಿವಾದವೇಕೆ?
ಕೆ-ರೈಲು ಯೋಜನೆಯು ಕೇರಳದಲ್ಲಿ ಭಾರೀ ವಿವಾದ ಹುಟ್ಟುಹಾಕಿದೆ. ಸೆಮಿ ಹೈಸ್ಪೀಡ್ ರೈಲಿಗಾಗಿ ಸಾವಿರಾರು ಕುಟುಂಬಗಳು ತಮ್ಮ ಜಮೀನನ್ನು ಕಳೆದುಕೊಳ್ಳಲಿವೆ. ಪರಿಸರ ತಜ್ಞರೂ ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ಬೃಹತ್ ಯೋಜನೆಯು ರಾಜ್ಯಕ್ಕೆ ಭಾರೀ ಆರ್ಥಿಕ ಹೊರೆಯಾಗಲಿದೆ ಮತ್ತು ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗುವುದಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಆರೋಪಿಸಿದ್ದಾರೆ.
ಯೋಜನೆಗಾಗಿ 20,000ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಬೇಕಾಗಿದೆ ಮತ್ತು ಅದರ ಅನುಷ್ಠಾನಕ್ಕಾಗಿ ರಾಜ್ಯವು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ ವ್ಯಯಿಸಬೇಕಿದೆ.
ಈಗಾಗಲೇ ಹಾಕಲಾಗಿರುವ ಗುರುತು ಕಲ್ಲುಗಳನ್ನು ಹಲವು ಸ್ಥಳಗಳಲ್ಲಿ ಸ್ಥಳೀಯರು, ಕಾಂಗ್ರೆಸ್ ಕಾರ್ಯಕರ್ತರು ಕಿತ್ತೆಸೆದಿದ್ದಾರೆ. ಆದರೆ ಪ್ರತಿಭಟನೆಗಳ ಮೂಲಕ ಯೋಜನೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಕೇರಳ ಸರ್ಕಾರ ವಾದಿಸುತ್ತಿದೆ. ಯೋಜನೆಗಾಗಿ ಜಮೀನು ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಲವು ಬಾರಿ ಹೇಳಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಭೂಮಿಯ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಮತ್ತು ನಗರ ಪ್ರದೇಶಗಳಲ್ಲಿ ಎರಡು ಪಟ್ಟು ಹೆಚ್ಚು ಪರಿಹಾರ ನೀಡುವುದಾಗಿ ಕೇರಳ ಸರ್ಕಾರ ಹೇಳಿದೆ.