ಮೀಸಲಾತಿಗೆ ಸಂಚಕಾರ| ಸುಪ್ರೀಂಕೋರ್ಟ್‌ ಹೇಳಿದ್ದೇನು? ರಾಜ್ಯದ ಮುಂದಿರುವ ಆಯ್ಕೆಗಳಾವು?

ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಅವಕಾಶಗಳನ್ನು ತೆರೆದ ರಾಜಕೀಯ ಮೀಸಲಾತಿಯ ಮೇಲೆಯೇ ತೂಗುಗತ್ತಿಯಾಗಿರುವ ಸುಪ್ರೀಂಕೋರ್ಟ್‌ನ ತೀರ್ಪು ಏನು? ಮೂರು ಹಂತದ ಪರಿಶೀಲನೆಯ ಬಳಿಕವೇ ಮೀಸಲಾತಿ ನಿಗದಿ ಮಾಡಬೇಕು ಎಂದು ಕೋರ್ಟ್‌ ಹೇಳಿರುವುದರ ಅರ್ಥವೇನು? ಎಂಬುದೂ ಸೇರಿದಂತೆ ಹಲವು ಗೊಂದಲಗಳು ಈಗ ಹಲವರ ಮನಸ್ಸಿನಲ್ಲಿವೆ. ಆ ಗೊಂದಲಗಳಿಗೆ ಇಲ್ಲಿದೆ ಪರಿಹಾರ..
politcal reservation

ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಕುರಿತ ಇತ್ತೀಚಿನ ಸುಪ್ರೀಂಕೋರ್ಟ್‌ತೀರ್ಪು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಮೂರು ಹಂತದ ಪರಿಶೀಲನೆ ಇಲ್ಲದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳ ಚುನಾಯಿತ ಮಂಡಳಿಯ ಅಧಿಕಾರವಧಿ ಮುಗಿದ ಬಳಿಕ ನಿರ್ವಾತ ಸೃಷ್ಟಿಯಾಗಲು ಬಿಡುವಂತಿಲ್ಲ. ಹಾಗಾಗಿ ಮೂರು ಹಂತದ ಮೀಸಲಾತಿ ಪರಿಶೀಲನೆಯವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾದ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ನೀಡಿ ಚುನಾವಣಾ ಅಧಿಸೂಚನೆ ಹೊರಡಿಸಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿತ್ತು.

ಸುಪ್ರೀಂಕೋರ್ಟಿನ ಆ ಆದೇಶ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಲಿದೆ ಮತ್ತು ರಾಜ್ಯದಲ್ಲಿ ಒಂದು ಕಡೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮತ್ತು ಬೃಹತ್‌ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗಳನ್ನು ವರ್ಷಗಳಿಂದ ಮುಂದೂಡಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ತತಕ್ಷಣವೇ ಚುನಾವಣೆ ನಡೆಸುವ ಅನಿವಾರ್ಯತೆಗೆ ಸಿಲುಕಿತ್ತು. ಹಾಗಾಗಿ ಅಲ್ಪ ಅವಧಿಯಲ್ಲಿ ಮೀಸಲಾತಿ ಕುರಿತು ಮೂರು ಹಂತದ ಪರಿಶೀಲನೆ ನಡೆಸುವುದಾಗಲೀ, ಮೀಸಲಾತಿ ನಿಗದಿ ಮಾಡುವುದಾಗಲೀ ಸಾಧ್ಯವಿಲ್ಲ. ಹಾಗಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕೈಬಿಟ್ಟು ಸಾಮಾನ್ಯ ವರ್ಗದ ಮೀಸಲಾತಿಯಲ್ಲೇ ಚುನಾವಣೆ ನಡೆಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿತ್ತು.

ಆದರೆ, ಇದೀಗ ಬುಧವಾರ ಮಧ್ಯಪ್ರದೇಶದ ತೀರ್ಪು ಪುನರ್‌ ಪರಿಶೀಲನೆ ಅರ್ಜಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌, ಆ ರಾಜ್ಯ ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಿದ್ಧಪಡಿಸಿರುವ ಸಮೀಕ್ಷೆಯನ್ನು ಆಧಾರವಾಗಿಟ್ಟುಕೊಂಡು ರಾಜಕೀಯ ಮೀಸಲಾತಿ ನಿಗದಿ ಮಾಡಿ ಚುನಾವಣೆ ನಡೆಸಲು ಹಸಿರು ನಿಶಾನೆ ತೋರಿಸಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಕೋರ್ಟ್‌ ಈ ಹಿಂದೆ ಹೇಳಿದ್ದ ಮೂರು ಹಂತದ ಪರಿಶೀಲನೆ(ಟ್ರಿಪಲ್‌ ಟೆಸ್ಟ್)‌ ಮೂಲಕವೇ ಹಿಂದುಳಿದ ವರ್ಗಗಳ ರಾಜಕೀಯ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಕುರಿತು ಅಂಕಿಅಂಶಸಹಿತ ಸಮೀಕ್ಷೆ ನಡೆಸಿದೆ. ಹಾಗಾಗಿ ಆ ವರದಿಯ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡಿ ಚುನಾವಣೆ ನಡೆಸಲು ಅವಕಾಶಕೊಡಬೇಕು ಎಂದು ಮಧ್ಯಪ್ರದೇಶ ಸರ್ಕಾರ, ಪುನರ್‌ ಪರಿಶೀಲನೆ ಅರ್ಜಿಯಲ್ಲಿ ಕೋರಿತ್ತು.

ಆ ಹಿನ್ನೆಲೆಯಲ್ಲಿ ಕಳೆದ ವಾರದ ಸುಪ್ರೀಂಕೋರ್ಟ್‌ ತೀರ್ಪಿನ ಅಂಶಗಳೇನು? ಮತ್ತು ಇದೀಗ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡಿರುವ ನ್ಯಾಯಾಲಯದ ಆದೇಶದ ಪರಿಣಾಮವೇನು? ಎಂಬ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ಮತ್ತು ಅದು ಸೂಚಿಸಿರುವ ಪ್ರಕ್ರಿಯೆಗಳ ಕುರಿತ ಪ್ರಶ್ನಾವಳಿ ಇಲ್ಲಿದೆ..

ಹಿಂದುಳಿದ ವರ್ಗಗಳ ಮೀಸಲಾತಿ ಕುರಿತು ಕಳೆದ ವಾರ ನ್ಯಾಯಾಲಯ ಹೇಳಿದ್ದೇನು?
ಕಳೆದ ವಾರ ಮಧ್ಯಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತ ಪ್ರಕರಣದ ವಿಷಯದಲ್ಲಿ ಸುಪ್ರೀಂಕೋರ್ಟ್‌, ಈ ಹಿಂದೆ ತಾನು ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ರಾಜಕೀಯ ಮೀಸಲಾತಿ ವಿಷಯದಲ್ಲಿ ನೀಡಿದ್ದ ಆದೇಶದಂತೆ ಮೂರು ಹಂತದ ಪರಿಶೀಲನೆ ನಡೆಸದೇ, ನಿಗದಿ ಮಾಡುವ ಯಾವುದೇ ರಾಜಕೀಯ ಮೀಸಲಾತಿಯನ್ನು ಒಪ್ಪಲಾಗದು. ಹಾಗಾಗಿ ಮೂರು ಹಂತದ ಪರಿಶೀಲನೆ ನಡೆಸದೆ ನಿಗದಿ ಮಾಡುವ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ರದ್ದು ಮಾಡಿ, ಸಾಮಾನ್ಯ ಮೀಸಲಾತಿ ಎಂದೇ ಹಿಂದುಳಿದ ವರ್ಗ ಮೀಸಲು ಕ್ಷೇತ್ರಗಳನ್ನು ಪರಿಗಣಿಸಿ ಮುಂದಿನ ಎರಡು ವಾರದ ಒಳಗೆ ಚುನಾವಣಾ ವೇಳಾಪಟ್ಟಿ ಘೋಷಿಸಿ ಎಂದಿತ್ತು.

ಆ ಆದೇಶ ಮಧ್ಯಪ್ರದೇಶಕ್ಕೆ ಮಾತ್ರ ಸೀಮಿತವೇ? ಕೋರ್ಟ್‌ ಹೇಳಿದ್ದೇನು?
ಇಲ್ಲ; ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಆ ಆದೇಶ ನೀಡಿದ್ದರೂ, ತನ್ನ ಆದೇಶ ಇಡೀ ದೇಶವ್ಯಾಪಿ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಅನ್ವಯವಾಗಲಿದೆ ಮತ್ತು ಯಾವುದೇ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿಗದಿ ಗೊಂದಲದಂತಹ ಕಾರಣಕ್ಕೆ ಆಡಳಿತ ಮಂಡಳಿ ಇಲ್ಲದ ನಿರ್ವಾತ ನಿರ್ಮಾಣವಾಗಬಾರದು ಎಂದೂ ಹೇಳಿತ್ತು. ಜೊತೆಗೆ, ಸದ್ಯ ಚುನಾವಣೆ ಬಾಕಿ ಇರುವ ಸ್ಥಾನಗಳಿಗೆ ಹಿಂದುಳಿದ ವರ್ಗಗಳ ಮೀಸಲಾತಿರಹಿತವಾಗಿ ಆ ಸ್ಥಾನಗಳನ್ನೂ ಸಾಮಾನ್ಯ ವರ್ಗದ ಮೀಸಲು ಎಂದೇ ಪರಿಗಣಿಸಿ ಕೂಡಲೇ ಚುನಾವಣೆ ಘೋಷಿಸಿ ಎಂದು ರಾಜ್ಯಗಳಿಗೆ ತಾಕೀತು ಮಾಡಿತ್ತು.

Image
supreme court

ಮೀಸಲಾತಿ ನೀಡುವುದಕ್ಕೆ ನಿರ್ಬಂಧವೇ? ಅಥವಾ ಮೀಸಲಾತಿ ನಿಗದಿ ಮಾನದಂಡದ ಬಗ್ಗೆಯೇ?
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಮೀಸಲಾತಿ ನಿಗದಿ ಮಾಡಿದ ಬಗ್ಗೆ ನ್ಯಾಯಾಲಯ ಈ ಆದೇಶ ಹೊರಡಿಸಿದ್ದರೂ, ನಿರ್ದಿಷ್ಟವಾಗಿ ಮೀಸಲಾತಿ ನೀಡುವುದು ತಪ್ಪು ಎಂದಿಲ್ಲ. ಬದಲಾಗಿ ಆ ಮೀಸಲಾತಿ ನಿಗದಿ ಮಾಡಲು ಆ ರಾಜ್ಯಗಳು ಯಾವ ಮಾನದಂಡ ಅನುಸರಿಸಿವೆ? ಯಾವ ವೈಜ್ಞಾನಿಕ ತಳಹದಿ, ಅಧ್ಯಯನದ ಆಧಾರದ ಬಲವಿಲ್ಲದೆ ಹೇಗೆ ಯಾವ ಜಾತಿಗೆ ಎಷ್ಟು ಸ್ಥಾನ ಎಂಬುದನ್ನು ನಿಗದಿ ಮಾಡಲಾಗಿದೆ? ಆ ಸಮುದಾಯಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿವೆ ಎಂಬುದಕ್ಕೆ ಪುರಾವೆ ಏನು? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮೀಸಲಾತಿ ನಿಗದಿಯ ಮಾನದಂಡಗಳನ್ನು ತಳ್ಳಿಹಾಕಿದೆ. ಅದಕ್ಕಾಗಿಯೇ ಮೂರು ಹಂತಗಳ ಪರಿಶೀಲನೆ(ಟ್ರಿಪಲ್‌ ಟೆಸ್ಟ್) ಮಾನದಂಡ ಅನುಸರಿಸುವಂತೆ ಹೇಳಿದೆ.

ಮೂರು ಹಂತದ ಪರಿಶೀಲನೆ(ಟ್ರಿಪಲ್‌ ಟೆಸ್ಟ್) ಎಂದರೇನು?
ವಿಲಾಸ್‌ ಕೃಷ್ಣರಾವ್‌ ಗೌಳಿ ವರ್ಸಸ್‌ ಮಹಾರಾಷ್ಟ್ರ ರಾಜ್ಯ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮೂರು ಹಂತದ ಪರಿಶೀಲನೆ ಅಥವಾ ಟ್ರಿಪಲ್‌ ಟೆಸ್ಟ್‌ ಎಂದರೆ ಏನು ಎಂಬುದನ್ನು ಸ್ಪಷ್ಟಪಡಿಸಿದೆ. ಆ ಪ್ರಕಾರ, ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕವೂ ಹಿಂದುಳಿದ ವರ್ಗಗಳು ಸ್ಥಳೀಯ ಸಂಸ್ಥೆಗಳಲ್ಲಿ ಎಷ್ಟು ಮೀಸಲಾತಿಗೆ ಅರ್ಹರು? ಯಾವ ಜಾತಿಯವರಿಗೆ ಎಷ್ಟು ಮೀಸಲಾತಿ ನೀಡಬೇಕು? ಯಾವ ಕ್ಷೇತ್ರದಲ್ಲಿ ಯಾವ ಸಮುದಾಯಕ್ಕೆ ಮೀಸಲಾತಿ ನೀಡಬೇಕು? ಎಂಬುದನ್ನು ನಿರ್ಧರಿಸಬೇಕು.

ಮೊದಲ ಹಂತ; ಪ್ರತ್ಯೇಕ ಆಯೋಗದ ಮೂಲಕ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಹಿಂದುಳಿದಿರುವಿಕೆ ಸ್ವರೂಪ ಮತ್ತು ಅದರಿಂದಾಗಿ ಸ್ಥಳೀಯ ಸಂಸ್ಥೆಗಳ ಆಡಳಿತದ ಮೇಲಾಗುವ ಪರಿಣಾಮಗಳ ಕುರಿತ ಅಂಕಿಅಂಶ ಆಧಾರಿತ ಸಮೀಕ್ಷೆ ಮಾಡಬೇಕು. ಎರಡನೇ ಹಂತ; ಆ ಸಮೀಕ್ಷೆಯ ಅಂಕಿಅಂಶಗಳ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳಲ್ಲಿ ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ ನೀಡಬೇಕು ಎಂಬುದನ್ನು ನಿರ್ಧರಿಸಬೇಕು. ಆ ಮೂಲಕ ಮೀಸಲಾತಿ ನಿಗದಿಯಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಬೇಕು. ಮೂರನೇ ಹಂತ; ಹಾಗೆ ಮೀಸಲಾತಿ ನಿಗದಿ ಮಾಡುವಾಗ, ಹಿಂದುಳಿದ ಸಮುದಾಯ(ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪಂಗಡ(ಎಸ್ಸಿ/ಎಸ್ಟಿ) ಸಮುದಾಯಗಳಿಗೆ ಒಟ್ಟಾರೆ ನಿಗದಿಮಾಡಿರುವ ಶೇ.50 ಮೀಸಲಾತಿಯ ಮಿತಿ ಮೀರದಂತೆ ಎಚ್ಚರಿಕೆ ಎಚ್ಚರಿಕೆ ವಹಿಸಬೇಕು.

ಮೀಸಲಾತಿ ನಿಗದಿಗೆ ಜನಗಣತಿ ಅಂಕಿಅಂಶ ಆಧಾರಿಸಬಹುದೆ?
ಇಲ್ಲ. ನ್ಯಾಯಾಲಯ ಈ ವಿಷಯದಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದ್ದು, ಒಬಿಸಿ ರಾಜಕೀಯ ಮೀಸಲಾತಿ  ನಿಗದಿ ಮಾಡಲು ರಾಜ್ಯ ಸರ್ಕಾರಗಳು ಯಾವುದೇ ಕಾರಣಕ್ಕೂ ಜನಗಣತಿ ಮಾಹಿತಿ ಮತ್ತು ಅಂಕಿಅಂಶಗಳನ್ನು ಅವಲಂಬಿಸುವಂತಿಲ್ಲ. ಕೇಂದ್ರ ಸರ್ಕಾರ ನಡೆಸಿರುವ ಜನಗಣತಿ ಮಾಹಿತಿಯ ಆಧಾರದ ಮೇಲೆ ಯಾವುದೇ ಮೀಸಲಾತಿ ನಿಗದಿ ಮಾಡಲಾಗದು ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ?ಮೀಸಲಾತಿಗೆ ಸಂಚಕಾರ: ಹಿಂದುಳಿದ ವರ್ಗಗಳ ರಾಜಕೀಯ ಅವಕಾಶಕ್ಕೆ ಕೊಡಲಿಪೆಟ್ಟು!

ಸಂವಿಧಾನದ 342ಎ(3) ವಿಧಿಯ ಪ್ರಕಾರ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ಸಮುದಾಯಗಳ(ಎಸ್‌ ಇಬಿಸಿ) ಪಟ್ಟಿ ತಯಾರಿಸಿದ ಬಳಿಕವಷ್ಟೇ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ರಾಜಕೀಯ ಮೀಸಲಾತಿ ನಿಗದಿ ಮಾಡಬೇಕಾಗುತ್ತದೆ. ಆದರೆ, ಆ ಪಟ್ಟಿ ಜನಗಣತಿ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಅವಲಂಬಿಸಿರಬಾರದು.

ರಾಜ್ಯದ ಮೇಲೆ ಆ ತೀರ್ಪಿನ ಪರಿಣಾಮ ಏನು?
ಮೂರು ಹಂತದ ಪರಿಶೀಲನೆ ನಡೆಸದೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ನಿಗದಿ ಮಾಡುವಂತಿಲ್ಲ ಎಂಬ ತನ್ನ ಆದೇಶ ಅರ್ಜಿದಾರ ರಾಜ್ಯಗಳು ಮಾತ್ರವಲ್ಲದೆ, ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಏಕಪ್ರಕಾರವಾಗಿ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಹಾಗಾಗಿ, ಮೀಸಲಾತಿ ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ಗೊಂದಲಗಳ ಕಾರಣಕ್ಕಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳನ್ನು ಒಂದು ವರ್ಷದಿಂದ ಮುಂದೂಡಿರುವ ಕರ್ನಾಟಕಕ್ಕೂ ಆ ಆದೇಶ ನೂರಕ್ಕೆ ನೂರು ಅನ್ವಯವಾಗಲಿದೆ.

ಆದರೆ, ಬುಧವಾರ ಸುಪ್ರೀಂಕೋರ್ಟ್‌ ಮಧ್ಯಪ್ರದೇಶ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯನ್ನು ಆಧರಿಸಿ ಮೀಸಲಾತಿ ನಿಗದಿ ಮಾಡಿ ಚುನಾವಣೆ ನಡೆಸಲು ಅನುಮತಿ ನೀಡಿದೆ.

ಹಾಗಾದರೆ ರಾಜ್ಯ ಸರ್ಕಾರದ ಮುಂದಿರುವ ಆಯ್ಕೆಗಳೇನು?
ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹಿಂದುಳಿದ ವರ್ಗಗಳ ಮೀಸಲಾತಿ ನಿಗದಿ ವಿಷಯದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. ಏಕೆಂದರೆ ಈಗಾಗಲೇ ಸರ್ಕಾರದ ಮುಂದೆ ಹಿಂದುಳಿದ ಸಮುದಾಯಗಳ ಜಾತಿವಾರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮೀಕ್ಷೆಯ ವರದಿ ಇದೆ. ಕಾಂತರಾಜು ಆಯೋಗ ಸುಪ್ರೀಂಕೋರ್ಟ್‌ ಈಗ ಹೇಳಿರುವ ಸ್ವರೂಪದಲ್ಲಿಯೇ, ಅದೇ ಮಾನದಂಡಗಳನ್ನು ಇಟ್ಟುಕೊಂಡೇ ಸಮೀಕ್ಷಾ ವರದಿ ತಯಾರಿಸಿದೆ ಎಂಬುದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಕಾನೂನು ತಜ್ಞರು ಕೂಡ ಹೇಳಿದ್ದಾರೆ.

ಆದರೆ, ಮೊದಲನೆಯದಾಗಿ ಆ ವರದಿ ಇನ್ನೂ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಕೆಯಾಗಿಲ್ಲ. ಹಾಗಾಗಿ ಆಯೋಗ ಅಧಿಕೃತವಾಗಿ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ ಮತ್ತು ಸರ್ಕಾರ ಆ ವರದಿಯನ್ನು ಅಧಿಕೃತವಾಗಿ ಮಾನ್ಯ ಮಾಡಿ ಅದನ್ನು ಸುಪ್ರೀಂಕೋರ್ಟಿನ ಗಮನಕ್ಕೆ ತಂದು, ಮೂರು ಹಂತದ ಪರಿಶೀಲನೆಯ ತನ್ನ ಷರತ್ತಿನಂತೆಯೇ ಈ ಸಮೀಕ್ಷೆ ನಡೆದಿದೆ ಮತ್ತು ಅಲ್ಲಿ ಸಂಗ್ರಹಿಸಿರುವ ಮಾಹಿತಿ ತನ್ನ ಮಾನದಂಡಕ್ಕೆ ಸೂಕ್ತವಾಗಿಯೇ ಇದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕಿದೆ.

ಈ ಸುದ್ದಿ ಓದಿದ್ದೀರಾ? ಮೀಸಲಾತಿಗೆ ಸಂಚಕಾರ| ಅಂಗೈಯಲ್ಲೇ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಹುಡುಕಾಟ ಯಾಕೆ?

ಏಕೆಂದರೆ; ಈಗಾಗಲೇ ಹಿಂದುಳಿದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮತ್ತು ಅದರಿಂದಾಗಿ ಸ್ಥಳೀಯ ಸಂಸ್ಥೆಗಳ ಮೇಲೆ ಆಗುವ ಪರಿಣಾಮಗಳ ಕುರಿತ ಸಮೀಕ್ಷೆಗಳನ್ನು ನಡೆಸಿ ಮಾಹಿತಿ ಸಿದ್ಧಪಡಿಸಿರುವ ರಾಜ್ಯಗಳು ಈಗ ಏಕಾಏಕಿ ಆ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ರಾಜಕೀಯ ಮೀಸಲಾತಿ ನಿಗದಿ ಮಾಡಲಾಗದು ಎಂದೂ ಕೋರ್ಟ್‌ ಹೇಳಿದೆ. ರಾಜಕೀಯ ಮೀಸಲಾತಿ ನಿಗದಿಗೆ ಮುನ್ನ ಹಾಗೆ ಸಂಗ್ರಹಿಸಿರುವ ಸಮೀಕ್ಷಾ ಮಾಹಿತಿ ಮೂರು ಹಂತದ ಪರಿಶೀಲನೆಯ ತನ್ನ ನಿಬಂಧನೆಗೆ ಒಳಪಟ್ಟಿದೆ ಮತ್ತು ಹಿಂದುಳಿದ ವರ್ಗಗಳ ಆಯೋಗದ ಪರಿಶೀಲನೆಯ ಬಳಿಕವೇ ಆ ಮಾಹಿತಿಯನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡದೇ ಮುಂದುವರಿಯುವಂತಿಲ್ಲ.

ಹಾಗಾಗಿ, ಈಗಾಗಲೇ ಕಾಂತರಾಜು ಆಯೋಗದ ಸಮೀಕ್ಷಾ ವರದಿಯನ್ನು ಹೊಂದಿರುವ ಕರ್ನಾಟಕ ಸರ್ಕಾರ, ತನ್ನ ಆ ವರದಿ ಮೂರು ಹಂತದ ಪರಿಶೀಲನೆಯ ನಿಬಂಧನೆಗಳೊಪಟ್ಟಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದರೆ, ಈಗಲೂ ಮೀಸಲಾತಿ ಅನುಸಾರ ಚುನಾವಣೆ ಘೋಷಣೆ ಮಾಡಲು ಅವಕಾಶವಿದೆ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

ಪ್ರತ್ಯೇಕ ಆಯೋಗ ರಚಿಸಿ, ಸಮೀಕ್ಷೆ ನಡೆಸಿ ಮಾಹಿತಿ ಪಡೆದು ಮೀಸಲಾತಿ ನಿಗದಿಗೆ ಸಮಯಾವಕಾಶವಿಲ್ಲ ಎಂದಾದರೆ ಏನು ಮಾಡುವುದು?
ಈ ಬಗ್ಗೆ ಕೂಡ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದ್ದು; ಒಂದು ವೇಳೆ ಯಾವುದೇ ರಾಜ್ಯದ ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆ ಬಾಕಿ ಇದ್ದಲ್ಲಿ, ಅದಕ್ಕೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆ ನಿಗದಿಗೆ ತನ್ನ ಆದೇಶದ ಅನ್ವಯ ಪ್ರಕ್ರಿಯೆ ಪೂರ್ಣಗೊಳಿಸಲು ಸಮಯಾವಕಾಶವಿಲ್ಲ ಎಂದಾದರೆ; ಅಂತಹ ಕಡೆ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿ ಕೈಬಿಟ್ಟು, ಆ ಕ್ಷೇತ್ರಗಳ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಸಾಮಾನ್ಯ ವರ್ಗ ಮೀಸಲಾತಿ ಎಂದು ಪರಿಗಣಿಸಿ ಚುನಾವಣೆ ನಡೆಸಿ ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಪ್ರತ್ಯೇಕ ಆಯೋಗದ ಮಧ್ಯಂತರ ಶಿಫಾರಸು ಆಧಾರಿಸಿಯೂ ಮೀಸಲಾತಿ ನಿಗದಿ ಮಾಡಬಹುದು ಎಂಬ ಒಂದು ಆಯ್ಕೆಯನ್ನೂ ರಾಜ್ಯಗಳಿಗೆ ನೀಡಲಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್