ಪಿಎಸ್‌ಐ ಅಕ್ರಮ | ಎಫ್‌ಡಿಎ, ಎಸ್‌ಡಿಎ ಅಕ್ರಮ ಬಯಲಿಗೆ ಬರುತ್ತೆ ಎಂದು ನನ್ನ ಮೇಲೆ ಆರೋಪ: ಡಿವೈಎಸ್‌ಪಿ ಶಂಕರಗೌಡ

CID Shankar
  • ʼಎಫ್‌ಡಿಎ, ಎಸ್‌ಡಿಎ ಪರೀಕ್ಷೆಗಳಲ್ಲಿ ಎಸಗಿರುವ ಅಕ್ರಮ ಬಯಲಿಗೆ ಬಾರದಿರಲು ಆರೋಪಿ ಕುತಂತ್ರʼ
  • ʼಸುಖಾಸುಮ್ಮನೇ ಆರೋಪ ಮಾಡುವ ಇಂತಹ ಆರೋಪಿಗಳಿಗೆಲ್ಲ ನಾನು ಹೆದರುವ ಅಧಿಕಾರಿಯಲ್ಲʼ

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಿಂದ ಪಾರು ಮಾಡಲು ತಾನು ಸಿಐಡಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಅವರಿಗೆ ₹76 ಲಕ್ಷ ನೀಡಿರುವುದಾಗಿ ಪ್ರಕರಣದ ಪ್ರಮುಖ ಆರೋಪಿ ಆರ್ ಡಿ ಪಾಟೀಲ ಕರ್ನಾಟಕ ಲೋಕಾಯುಕ್ತರಿಗೆ ದೂರು ನೀಡಿರುವುದಾಗಿ ತಿಳಿಸಿ ವಿಡಿಯೋ ಹರಿಬಿಟ್ಟಿದ್ದಾನೆ.

ಅಜ್ಞಾತ ಸ್ಥಳವೊಂದರಲ್ಲಿ ʼಆರ್‌ ಡಿ ಪಾಟೀಲ್‌ ಯುವ ಬ್ರಿಗೇಡ್‌ ಅಫಜಲಪುರʼ ಫೇಸ್‌ಬುಕ್ ಪೇಜ್‌ನಲ್ಲಿ ಆರ್‌ ಡಿ ಪಾಟೀಲ್‌ ಮಾತನಾಡಿರುವ 8 ನಿಮಿಷದ ವಿಡಿಯೋ ಅಪ್‌ಲೋಡ್‌ ಆಗಿದ್ದು, ಸಿಐಡಿ ಅಧಿಕಾರಿ ಶಂಕರಗೌಡ ಪಾಟೀಲ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾನೆ. 

ಆ ವಿಡಿಯೋದಲ್ಲಿ “ಶಂಕರಗೌಡ ಪಾಟೀಲ ಅವರು ನನ್ನ ಭೇಟಿಯಾಗಿ ಎಷ್ಟು ಅಂತ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ತೀಯ. ಪ್ರಕರಣ ಮುಂದುವರೆಸದಿರಲು ನನಗೆ ₹ 3 ಕೋಟಿ ರೂ ಹಣ ಕೊಟ್ಟುಬಿಡು. ಇಲ್ಲಿಗೆ ಈ ಪ್ರಕರಣಗಳನ್ನು ಕೈಬಿಡುತ್ತೇನೆʼ ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ನನ್ನಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದಿದ್ದೆ. ಕೊನೆಗೆ ಅವರು ಹೇಳಿದ ಮೊತ್ತಕ್ಕೆ ಡೀಲ್‌ ಒಪ್ಪಿಕೊಂಡು ₹76 ಲಕ್ಷ ಹಣವನ್ನು ನನ್ನ ಅಳಿಯ ಶ್ರೀಕಾಂತ್‌ ಮೂಲಕ ಶಂಕರಗೌಡ ಪಾಟೀಲ್‌ ಅವರಿಗೆ ತಲುಪಿಸಿದ್ದೆ. ಆದರೆ ನನ್ನ ಬಂಧನವಾದ ಮೇಲೆ ಬೇರೆ ಅಧಿಕಾರಿ ಮೂಲಕ ಉಳಿದ ಹಣ ಕೊಡಲು ಶಂಕರಗೌಡ ಪೀಡಿಸುತ್ತಿದ್ದರು” ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ. 

ಆರ್‌ ಡಿ ಪಾಟೀಲ್‌ ಆರೋಪದ ವಿಚಾರವಾಗಿ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರನ್ನು ಈ ದಿನ.ಕಾಮ್‌ ಮಾತನಾಡಿಸಿದಾಗ, “ಪಿಎಸ್ಐ ಅಕ್ರಮ ನೇಮಕಾತಿಯ ತನಿಖೆ ವೇಳೆ ಕಣ್ಣಾ ಮುಚ್ಚಾಲೆ ಆಟವಾಡಿ, ತನಿಖಾ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದ ಪ್ರಮುಖ ಆರೋಪಿ ಆರ್‌ ಡಿ ಪಾಟೀಲ್‌ನನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ. ಆ ಸಿಟ್ಟು ಅವನಲ್ಲಿ ಬೇರೂರಿದೆ. ಅಲ್ಲದೇ ತನಿಖೆ ವೇಳೆ ಕೇವಲ ಪಿಎಸ್‌ಐ ಮಾತ್ರವಲ್ಲದೇ ಎಫ್‌ಡಿಎ ಮತ್ತು ಎಸ್‌ಡಿಎ ಪರೀಕ್ಷೆಗಳಲ್ಲೂ ಇಂತಹ ಅಕ್ರಮವೆಸಗಿರುವುದು ಬಯಲಿಗೆ ಬರುತ್ತೆ ಎನ್ನುವ ಕಾರಣಕ್ಕೆ ನನ್ನ ಮೇಲೆ ಸುಖಾಸುಮ್ಮನೇ ಆರೋಪ ಮಾಡಿದ್ದಾನೆ. ಇಂಥವರಿಗೆಲ್ಲ ನಾನು ಹೆದರುವ ಅಧಿಕಾರಿಯಲ್ಲ” ಎಂದರು.

R D Patil
ಪಿಎಸ್‌ಐ ಅಕ್ರಮದ ಪ್ರಮುಖ ಆರೋಪಿ ಆರ್‌ ಡಿ ಪಾಟೀಲ

“ಆರ್ ಡಿ ಪಾಟೀಲನೊಂದಿಗೆ ನಾನು ಮಾತನಾಡಿರುವುದು ಎನ್ನಲಾದ ಘಟನೆ ನಡೆದಿದ್ದು ಕಳೆದ ಜುಲೈನಲ್ಲಿ. ಈ ಆರೋಪದ ಬಗ್ಗೆ ಎಸಿಬಿ ತನಿಖೆ ನಡೆಸಿ ಇದರಲ್ಲಿ ಏನೂ ಹುರುಳಿಲ್ಲ ಎಂದು ಕೈಬಿಟ್ಟಿದೆ. ತನಿಖಾಧಿಕಾರಿಗಳ‌ ಧೈರ್ಯ ಕುಗ್ಗಿಸಲು ಆರ್ ಡಿ ಪಾಟೀಲ ಹೂಡಿರುವ ತಂತ್ರಗಳಲ್ಲಿ ಇದೂ ಒಂದು ಎಂಬುದು ನನಗೆ ಮನವರಿಕೆಯಾಗಿದೆ” ಎಂದು ಹೇಳಿದರು.

“ಜಾಮೀನು ಸಿಕ್ಕ ವೇಳೆ ನಮ್ಮ ತನಿಖೆಯ ಇಂಚಿಂಚು ಮಾಹಿತಿ ಪಡೆಯಲು ಆರ್‌ ಡಿ ಪಾಟೀಲ್‌ ಯತ್ನಿಸಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಿಸಲು ಹಲವು ಬಾರಿ ತಮ್ಮ ಹಿಂಬಾಲಕರನ್ನು ಛೂಬಿಟ್ಟಿದ್ದ. ಇದೆಲ್ಲವನ್ನೂ ಎದುರಿಸಿ ಪ್ರಕರಣವನ್ನು ಒಂದು ಹಂತಕ್ಕೆ ತಂದಿರುವ ತೃಪ್ತಿ ನಮಗಿದೆ. ಇಂತಹ ಕ್ರಿಮಿನಲ್‌ಗಳು ಹೀಗೆ ಹೆದರಿಸುವ ಪ್ರಯತ್ನ ಸಾಕಷ್ಟು ಮಾಡುತ್ತಾರೆ. ಇದೇನು ನಮಗೆ ಹೊಸದಾ?” ಎಂದು ಆರೋಪವನ್ನು ತಳ್ಳಿಹಾಕಿದರು.

ಈ ಸುದ್ದಿ ಓದಿದ್ದೀರಾ? ಪಿಎಸ್‌ಐ ಅಕ್ರಮ ಭಾಗ-10 | ಆರೋಪಿಗಳ ಹೆಡೆಮುರಿ ಕಟ್ಟಲು 'ಸಿಐಡಿ ಶಂಕರ್‌ʼ ನಡೆಸಿದ 'ಆಪರೇಷನ್‌ ಮುಂಬೈʼ!

ʼಆಪರೇಷನ್‌ ಮುಂಬೈʼ ಹೆಸರಲ್ಲಿ ಹೆಡೆಮುರಿ ಕಟ್ಟಲಾಗಿತ್ತು!

ಪಿಎಸ್‌ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮಿಂಚಿನ ಓಟ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಡಿವೈಎಸ್‌ಪಿ ಶಂಕರಗೌಡ ನೇತೃತ್ವದ ತಂಡ ನಡೆಸಿದ ʼಆಪರೇಷನ್‌ ಮುಂಬೈʼ ಯಶಸ್ವಿಯಾಗಿತ್ತು. 

ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಗಳು ಹೆಜ್ಜೆ ಹೆಜ್ಜೆಗೂ ಅಪರಾಧ ತನಿಖಾ ದಳದ ಅಧಿಕಾರಿಗಳನ್ನು ದಾರಿ ತಪ್ಪಿಸುತ್ತಿದ್ದರು. ಆರೋಪಿಗಳ ರಹಸ್ಯ ಹೆಜ್ಜೆಗಳನ್ನೇ ಸವಾಲಾಗಿ ಸ್ವೀಕರಿಸಿದ ಶಂಕರಗೌಡ ಪಾಟೀಲ ಅವರ ತಂಡ, ಕಣ್ಣು ತಪ್ಪಿಸಿಕೊಂಡವರನ್ನು ಮುಂಬೈ ಹೆದ್ದಾರಿಯಲ್ಲಿ ಹಿಡಿದು ಹೆಡೆಮುರಿ ಕಟ್ಟಿದ್ದರು.

ʼಆಪರೇಷನ್‌ ಮುಂಬೈʼ ಅಡಿ ಸಿಕ್ಕಿಬಿದ್ದವರು ಮತ್ತಾರು ಅಲ್ಲ ಪಿಎಸ್‌ಐ ಪ್ರಕರಣ ಪ್ರಮುಖ ಆರೋಪಿ ಇದೇ ಆರ್‌ ಡಿ ಪಾಟೀಲ್‌ ಎಂಬುದು ಗಮನಾರ್ಹ ಸಂಗತಿ!

ನಿಮಗೆ ಏನು ಅನ್ನಿಸ್ತು?
0 ವೋಟ್
eedina app