ಸಂಘಕ್ಕೆ ನೂರು ವರ್ಷವಾಗುತ್ತಿದ್ದು, ಆರು ಜನ ಮಾತ್ರ ಸರಸಂಘ ಸಂಚಾಲಕರಾಗಿದ್ದಾರೆ: ಬಿಜೆಪಿ ವಿರುದ್ಧ ಹರಿಪ್ರಸಾದ್‌ ಕಿಡಿ

ಸರ್ವೋದಯ ಸಮಾವೇಶ
  • ಕಾರ್ಮಿಕ ಸಚಿವರಾಗಿ ಖರ್ಗೆ ಕಾರ್ಮಿಕರ ಏಳಿಗೆಗೆ ಶ್ರಮಿಸಿದ್ದಾರೆ: ಎಂ ಬಿ ಪಾಟೀಲ್
  • ಖರ್ಗೆ ನೇತೃತ್ವದಲ್ಲಿ ಬಿಜೆಪಿ ಕಿತ್ತೆಸೆದು ಕಾಂಗ್ರೆಸ್ ಸರ್ಕಾರ ತರೋಣ: ಸುರ್ಜೇವಾಲಾ

ಬಿಜೆಪಿ ಅವರಿಗೆ ಕೇಳ್ತೀನಿ; ನಿಮ್ಮ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿದ್ದೀರಾ? ನಮ್ಮಲ್ಲಿ ಎಲ್ಲ ಜಾತಿ, ಧರ್ಮದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಆದರೆ, ಎಸ್‌ಎಸ್‌ಎಸ್‌ ಕೇವಲ ಒಂದು ಜಾತಿಗೆ ಸೇರಿದ ಸಂಘಟನೆ. ಸಂಘಕ್ಕೆ ನೂರು ವರ್ಷ ಆಗುತ್ತಿದೆ. ಆದರೆ, ಕೇವಲ ಆರು ಜನರನ್ನು ಮಾತ್ರ ಸರಸಂಘ ಸಂಚಾಲಕರನ್ನಾಗಿ ಮಾಡಲಾಗಿದೆ. ಹೀಗಾಗಿ ಬಿಜೆಪಿ ಪಕ್ಷ, ಖಾಕಿ ಚಡ್ಡಿ ಮತ್ತು ಕರಿ ಟೋಪಿ ಅವರಿಂದ ನಾವು ಆಂತರಿಕ ಪ್ರಜಾಪ್ರಭುತ್ವ ಕಲಿಯುವ ಅಗತ್ಯವಿಲ್ಲ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್‌ ಬಿಜೆಪಿ ವಿರುದ್ಧ ಹರಿಹಾಯ್ದರು.

ಸರ್ವೋದಯ ಸಮಾವೇಶದಲ್ಲಿ ಅವರು ಮಾತನಾಡಿ, “ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಇಡೀ ರಾಷ್ಟ್ರದಲ್ಲಿನ ಕಾಂಗ್ರೆಸ್ ಪಕ್ಷದ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ಪಕ್ಷದ ಒಬ್ಬ ನಿಷ್ಠಾವಂತ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ನಮ್ಮ ಪುಣ್ಯ” ಎಂದರು.

"ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುವ ಮುನ್ನ ಬಿಜೆಪಿ ಅವರು ಕಾಂಗ್ರೆಸ್‌ನಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಆರೋಪ ಮಾಡುತ್ತಿದ್ದರು. ಪ್ರಜಾಪ್ರಭುತ್ವ ಪ್ರಕಾರವೇ ಖರ್ಗೆ ಆಯ್ಕೆಯಾಗಿದ್ದಾರೆ. ಪ್ರಪಂಚದಲ್ಲಿ ಅತ್ಯಂತ ಹಳೆಯ ಮತ್ತು ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಕಾಂಗ್ರೆಸ್. ಬಿಜೆಪಿಯವರಂತೆ ನಾವು ಮಿಸ್ ಕಾಲ್ ಕೊಟ್ಟು ಸದಸ್ಯರನ್ನು ನೇಮಕ ಮಾಡಿಲ್ಲ" ಎಂದು ಎಂದು ಕುಟುಕಿದರು.  

"ಮಲ್ಲಿಕಾರ್ಜುನ ಖರ್ಗೆ ಅವರ ಮುಂದೆ ಈ ತ್ರಿವರ್ಣ ಧ್ವಜ ಗೌರವ ಕಾಪಾಡುವ ಜವಾಬ್ದಾರಿ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಕಾಪಾಡುವ ಜವಾಬ್ದಾರಿ ಇದೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ರಕ್ಷಿಸುವ ಸವಾಲು ಇದೆ. ಈ ಹೋರಾಟದಲ್ಲಿ ಕರ್ನಾಟಕದ ಜನತೆ ಹಾಗೂ ದೇಶದ ಪ್ರತಿಯೊಬ್ಬ ಕಾಂಗ್ರೆಸ್ ಸದಸ್ಯರು ಸೇರಿದಂತೆ ನಾವೆಲ್ಲರೂ ನಿಮ್ಮ ಜತೆಯಾಗಿ ಹೆಜ್ಜೆ ಹಾಕುತ್ತೇವೆ ಎಂಬ ಭರವಸೆ ನೀಡುತ್ತೇನೆ" ಎಂದರು.

ಕಾರ್ಮಿಕರ ಏಳಿಗೆಗೆ ಶ್ರಮಿಸಿದ ಖರ್ಗೆ: ಎಂ ಬಿ ಪಾಟೀಲ್ 

“ಕಾರ್ಮಿಕ ನಾಯಕರಾಗಿದ್ದ ಖರ್ಗೆ ಅವರು ಕಾರ್ಮಿಕರ ನೋವು ಅರಿತಿದ್ದರು. ಹೀಗಾಗಿ ಕಾರ್ಮಿಕ ಸಚಿವರಾದ ನಂತರ ಅವರು ಕಾರ್ಮಿಕರ ಏಳಿಗೆಗೆ ಶ್ರಮಿಸಿದ್ದಾರೆ. ದೇಶದಲ್ಲಿ ಇಎಸ್ ಐ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಮಾಡಿದವರು ಖರ್ಗೆ ಅವರು. ಅವರು ಸಚಿವರಾಗಿ ಅಸಾಧ್ಯವನ್ನು ಸಾಧ್ಯ ಮಾಡಿದ್ದಾರೆ” ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌ ಹೇಳಿದರು.

“ವಾಜಪೆಯಿ ಅವರು ಪ್ರಧಾನಿ ಹಾಗೂ ಆಡ್ವಾಣಿ ಅವರು ಗೃಹ ಸಚಿವರಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೆ 371ಜೆ ವಿಧಿಯಡಿ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದರು. ಆದರೆ ಖರ್ಗೆ ಅವರು ಹೋರಾಟ ಬಿಡದೆ, ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಅದನ್ನು ಸಾಧ್ಯ ಮಾಡಿದರು. ಖರ್ಗೆ ಅವರಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವಗಳನ್ನು ನೋಡಿದ್ದು, ರಾಜ್ಯ ಮಾತ್ರವಲ್ಲ; ದೇಶದ ಎಲ್ಲ ಭಾಗದ ಜನ ಅವರಿಗೆ ಗೌರವ ನೀಡುತ್ತಾರೆ” ಎಂದರು. 

“ಖರ್ಗೆ ಅವರ 50 ವರ್ಷಗಳ ಅನುಭವ ಪಕ್ಷಕ್ಕೆ ಅಮೂಲ್ಯವಾಗಿದೆ. ಅವರಲ್ಲಿರುವ ಕಾಳಜಿ, ಬದ್ಧತೆ ಹಾಗೂ ಸ್ಪಷ್ಟತೆ ಪಕ್ಷಕ್ಕೆ ಹೊಸ ಶಕ್ತಿ ನೀಡಲಿದೆ. ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು. ನಮ್ಮ ನಾಯಕರ ನೇತೃತ್ವದಲ್ಲಿ 2024ರಲ್ಲಿ ದೇಶದಲ್ಲಿ ಮತ್ತೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬರಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಜನ ಬಿಜೆಪಿ ಸರ್ಕಾರ ಕಿತ್ತೆಸೆದು, ಕಾಂಗ್ರೆಸ್‌ ಅಧಿಕಾರಕ್ಕೆ ತಂದು ಖರ್ಗೆ ಅಭಿನಂದಿಸುವರು: ಸಿದ್ದರಾಮಯ್ಯ ವಿಶ್ವಾಸ

ಇದು ಇತಿಹಾಸ ರಚಿಸುವ ದಿನ: ಸುರ್ಜೇವಾಲಾ

“ಇದು ಇತಿಹಾಸ ರಚಿಸುವ ದಿನ. ರಾಜ್ಯದ ಜನತೆ ದಶಕಗಳಿಂದ ಖರ್ಗೆ ಅವರನ್ನು ಬೆಳೆಸಿಕೊಂಡು ಬಂದಿದೆ. ಬಿಜೆಪಿ ತನ್ನ ಪಕ್ಷದಲ್ಲಿ ಚುನಾವಣೆ ನಡೆಸಲು ಸಾಧ್ಯವೇ? ಸೋನಿಯಾ ಗಾಂಧಿ ಅವರು ಇದನ್ನು ಮಾಡಿ ತೋರಿಸಿದ್ದಾರೆ. ಕಾರ್ಮಿಕರ ಮಗ, ದಲಿತ ವ್ಯಕ್ತಿಯನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದೆ. ಅವರು ಬಡವರು, ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡಿದ್ದಾರೆ” ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಬಣ್ಣಿಸಿದರು.

“ದೇಶದ ಮೂಲೆ ಮೂಲೆಯ ಕಾರ್ಯಕರ್ತರಿಗೆ ಖರ್ಗೆ ಅವರ ಮೇಲೆ ನಂಬಿಕೆ ಇದೆ. ಈ ವೇದಿಕೆ ಮೂಲಕ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಕಳೆದ 2 ದಶಕಗಳಿಂದ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸರ್ವಸ್ವ ತ್ಯಾಗ ಮಾಡಿ ಸಂಘಟನೆ ಮಾಡಿದ್ದಾರೆ. ಈ ಸಮಯದಲ್ಲಿ 40% ಕಮಿಷನ್ ಸರ್ಕಾರವನ್ನು ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ” ಎಂದು ಕೈ ಪಡೆಯನ್ನು ಹುರಿದುಂಬಿಸಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app