ಸಿದ್ದು-ಡಿಕೆಶಿ: ಕಾರ್ಯಕರ್ತರ ಹರ್ಷೋದ್ಗಾರದ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವರೇ ನಾಯಕರು?

ಮುಂದಿನ ಮುಖ್ಯಮಂತ್ರಿ ತಾನಾಗಬೇಕೆಂದು ತೀರಾ ಮೊನ್ನೆಯವರೆಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತಮ್ಮ ಅಭಿಲಾಷೆಗಳನ್ನು ಮುಂದಿಟ್ಟಿರುವ ಈ ಇಬ್ಬರೂ ನಾಯಕರಿಗೆ ನೆರೆದ ಜನಸ್ತೋಮದ ಈ ಸಂಭ್ರಮ ವೈಯಕ್ತಿಕವಾಗಿ ಖುಷಿ ಕೊಟ್ಟಿದೆಯೇ ಎಂಬುದೇ ಪ್ರಶ್ನೆ.
siddaramaiah@75

ದಾವಣಗೆರೆಯಲ್ಲಿ ಇಂದು ನಡೆದ ಸಿದ್ದರಾಮಯ್ಯ-75 ಕಾರ್ಯಕ್ರಮದ ಒಂದು ಘಳಿಗೆಯಲ್ಲಿ ಇಡೀ ಸಭೆಯ ಹರ್ಷೋದ್ಗಾರ ಮುಗಿಲುಮುಟ್ಟುವಂತಿತ್ತು. ಆ ಘಳಿಗೆಗೆ ಕಾರಣರಾದ ಇಬ್ಬರು ನಾಯಕರು– ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ – ಅಲ್ಲಿ ಸಂಭ್ರಮಿಸಿದ ಜನರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳುವರೇ ಎಂಬ ಪ್ರಶ್ನೆ ಏಳಲು ಕಾರಣವಿದೆ.

ಭಾವನಾತ್ಮಕವಾಗಿ ಛಾರ್ಜ್ ಆದ ಇಂತಹ ಭಾರೀ ಜನಸ್ತೋಮದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರು ಹರ್ಷ ವ್ಯಕ್ತಪಡಿಸುವುದು, ಅಂತಹ ಉಮೇದಿನ ಹೊತ್ತಿನಲ್ಲಿ ಭಾವನಾತ್ಮಕ ಮಾತುಗಳನ್ನು ಆಡುವುದು ಮಾಮೂಲಿ.

ಆದರೆ, ಕೆಲವು ಸಂದರ್ಭಗಳು ನಿರ್ದಿಷ್ಟ ಸಂದೇಶವನ್ನೂ ಕೊಡುತ್ತವೆ. ಸಿದ್ದರಾಮಯ್ಯನವರಿಗೇ ಸಂಬಂಧಿಸಿದ ಅಂತಹದೊಂದು ಸಂದೇಶವನ್ನು ಇನ್ನೊಂದು ಸಮಾವೇಶವೂ ನೀಡಿತ್ತು. ಕುರುಬರಿಗೆ ಎಸ್ ಟಿ ಮೀಸಲಾತಿಯನ್ನು ಕೇಳಿ ನಡೆಸಿದ ಸಮಾವೇಶವದು. ಒಂದು ರೀತಿಯಲ್ಲಿ ಬಿಜೆಪಿಯ ಪರೋಕ್ಷ ಬೆಂಬಲ ಹಾಗೂ ಚಿತಾವಣೆಯಿಂದ ಅದು ನಡೆದಿತ್ತೆಂದು ಭಾವಿಸಲಾಗಿದೆ. ಕುರುಬರ ಪರಮೋಚ್ಚ ನಾಯಕ ಸಿದ್ದರಾಮಯ್ಯನವರು ಅದರಲ್ಲಿ ಭಾಗವಹಿಸಿರಲಿಲ್ಲ. ಬದಲಿಗೆ ಸಚಿವ ಕೆ.ಎಸ್. ಈಶ್ವರಪ್ಪ ಆ ಸಮಾವೇಶದ ಮುಂಚೂಣಿಯಲ್ಲಿದ್ದರು.

ಕುರುಬ ಸಮುದಾಯದ ವಿವಿಧ ನಾಯಕರು ಖುದ್ದು ಹೋಗಿ ಆಹ್ವಾನಿಸಿದ್ದರೂ, ʼಈ ಹೋರಾಟಕ್ಕೆ ತನ್ನ ಬೆಂಬಲವಿದೆ, ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆದು ಮೀಸಲಾತಿ ತೀರ್ಮಾನವಾಗಲಿʼ ಎಂಬ ನಿರ್ಧಾರವನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದರು.

ಆ ಸಮಾವೇಶದಲ್ಲಿ ಎಲ್ಲೂ ನೇರವಾಗಿ ಸಿದ್ದರಾಮಯ್ಯನವರ ಹೆಸರನ್ನು ಯಾರೂ ಪ್ರಸ್ತಾಪಿಸುವ ಗೋಜಿಗೆ ಹೋಗಿರಲಿಲ್ಲ. ಪರೋಕ್ಷವಾಗಿ ಬಹಳ ಮೆದುವಾಗಿ ಎಚ್. ವಿಶ್ವನಾಥ್ ಪ್ರಸ್ತಾಪಿಸಿದ್ದರೂ, ಟೀಕಿಸುವ ಧೈರ್ಯ ಯಾರೂ ತೋರಿರಲಿಲ್ಲ. ಆದರೆ ಮಾಜಿ ಸಚಿವ ಎಚ್.ಎಂ. ರೇವಣ್ಣನವರು ತಮ್ಮ ಮಾತಿನ ಮಧ್ಯೆ ಕುರುಬ ಸಮುದಾಯದ ಬೆಂಬಲ ಇದ್ದಿದ್ದರಿಂದಲೇ ಯಾರ್ಯಾರು ಮಂತ್ರಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಗಳಾದರು ಎಂಬುದನ್ನು ಹೇಳುತ್ತಾ, ಸುಮ್ಮನೇ ಸಿದ್ದರಾಮಯ್ಯನವರ ಹೆಸರನ್ನೂ ಪ್ರಸ್ತಾಪ ಮಾಡಿದ್ದರು ಅಷ್ಟೇ.

ಸಮಾವೇಶಕ್ಕೆ ಸಮಾವೇಶವೇ ಸುಮಾರು ಐದು ನಿಮಿಷಗಳ ಕಾಲ ಹರ್ಷೋದ್ಗಾರ ಮಾಡಿತ್ತು. ರೇವಣ್ಣ, ಈಶ್ವರಪ್ಪ ಸೇರಿದಂತೆ ಎಲ್ಲರೂ ಸ್ತಂಭೀಭೂತರಾದರು. ಅದೊಂದೇ ಸಂದೇಶ ಸಾಕು ಎನ್ನುವಂತೆ, ಅಲ್ಲಿಂದ ಮುಂದಕ್ಕೆ ಆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಡಲೂ ಈಶ್ವರಪ್ಪನವರಾಗಲೀ, ಎಚ್. ವಿಶ್ವನಾಥ್ ಅವರಾಗಲೀ ಮುಂದೆ ಹೋಗಿಲ್ಲ.

ಇಂದಿನ ಸಮಾವೇಶದಲ್ಲೂ ಅಂತಹುದೇ ಸದ್ದನ್ನು ಸಮಾವೇಶ ಮಾಡಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಸನ್ಮಾನಿಸಿ ಜೊತೆಗೂಡಿ ನಿಂತಾಗ. ಶಾಲು ಹಾಕಿ ಪುಸ್ತಕವೊಂದನ್ನೂ ಸಿದ್ದರಾಮಯ್ಯನವರಿಗೆ ನೀಡಿ ತಮ್ಮ ಗೌರವವನ್ನು ತೋರಿಸಿದಾಗ ಇಡೀ ಸಮಾವೇಶವು ಭಾರೀ ಹರ್ಷೋದ್ಗಾರದೊಂದಿಗೆ ತನ್ನ ಸಂತಸವನ್ನು ವ್ಯಕ್ತಪಡಿಸಿತು.

ಮುಂದಿನ ಮುಖ್ಯಮಂತ್ರಿ ತಾನಾಗಬೇಕೆಂದು ತೀರಾ ಮೊನ್ನೆಯವರೆಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ತಮ್ಮ ಅಭಿಲಾಷೆಗಳನ್ನು ಮುಂದಿಟ್ಟಿರುವ ಈ ಇಬ್ಬರೂ ನಾಯಕರಿಗೆ ನೆರೆದ ಜನಸ್ತೋಮದ ಈ ಸಂಭ್ರಮ ವೈಯಕ್ತಿಕವಾಗಿ ಖುಷಿ ಕೊಟ್ಟಿದೆಯೇ ಎಂಬುದೇ ಪ್ರಶ್ನೆ.

ಕಾಂಗ್ರೆಸ್ ಪಕ್ಷವು ಇಡೀ ದೇಶದಲ್ಲಿ ಬಹಳ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಕರ್ನಾಟಕದಲ್ಲಿ ಅದರ ಸ್ಥಿತಿ ಅದ್ಭುತವಾಗಿಯೇನೂ ಇಲ್ಲ. ಈ ಕಾರ್ಯಕ್ರಮ ನಡೆದ ಮಧ್ಯ ಕರ್ನಾಟಕ, ಮಲೆನಾಡು ಹಾಗೂ ಕರಾವಳಿಗಳಲ್ಲಿ ಶೇ.10ರಷ್ಟು ಸೀಟುಗಳನ್ನೂ ಕಾಂಗ್ರೆಸ್ ಕಳೆದ ಬಾರಿ ಗೆದ್ದಿಲ್ಲ. ಬಿಜೆಪಿಯ ಕೆಟ್ಟ ಆಡಳಿತದ ಹೊರತಾಗ್ಯೂ ಬಲಿಷ್ಠ ಸಂಘಟನೆ ಹೊಂದಿದ್ದು, ಮುಂದಿನ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಆ ಭಾಗದಲ್ಲಿ ದೊಡ್ಡ ನಿರೀಕ್ಷೆಯನ್ನೇನೂ ಇಟ್ಟುಕೊಳ್ಳುವಂತಿಲ್ಲ.

ಹೀಗಿರುವಾಗ ಪ್ರತಿ ಬಾರಿಯೂ ಬಿಜೆಪಿ, ಕಾಂಗ್ರೆಸ್ ಒಡೆದ ಮನೆಯೆಂದು ಕಾಲೆಳೆಯುತ್ತಲೇ ಇರುತ್ತದೆ. ಯಾವೊಂದು ಸಂದರ್ಭದಲ್ಲೂ ಸಿದ್ದರಾಮಯ್ಯನವರಾಗಲೀ, ಡಿ.ಕೆ. ಶಿವಕುಮಾರ್ ಅವರಾಗಲೀ ‘ತಮ್ಮ ಮಧ್ಯೆ ಅಂತಹ ಬಿರುಕೇನೂ ಇಲ್ಲ’ ಎಂದು ಖಚಿತ ಮಾತುಗಳಲ್ಲಿ ಉತ್ತರ ಕೊಟ್ಟಿಲ್ಲದಿರುವುದು ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ತೋರುತ್ತದೆ.

ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನಸ್ಸಿನಲ್ಲಿ, ಅದರಲ್ಲೂ ಅಲ್ಲಿ ಸೇರಿದ್ದವರಲ್ಲಿ ಹೆಚ್ಚಿನವರಾದ ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಸಿದ್ದು-ಡಿಕೆಶಿ ಒಟ್ಟಿಗಿರಬೇಕೆಂಬ ಭಾವನೆಯೇ ಇದ್ದಂತೆ ಕಾಣುತ್ತದೆ. ಕೆಲವೊಮ್ಮೆ ಇಂತಹ ಕಾರ್ಯಕ್ರಮಗಳಲ್ಲಿ ತಮ್ಮ ಅಭಿಮಾನಕ್ಕೆ ಪಾತ್ರನಾದ ನಾಯಕನ ವಿರೋಧಿಗಳೆಂದು ಭಾವಿಸಲಾಗುವ ವ್ಯಕ್ತಿಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗುತ್ತದೆ. ಅದರಲ್ಲೂ ಅವರು ಭಾಷಣ ಮಾಡುವಾಗ ಅಂತಹ ಧಿಕ್ಕಾರಗಳು ಸಲೀಸಾಗಿ ಬರುತ್ತವೆ. ಆದರೆ, ಇಲ್ಲಿ ಅದಕ್ಕಿಂತ ಭಿನ್ನವಾದ ಭಾವನೆ ವ್ಯಕ್ತವಾಗಿದೆ.

ಇಡೀ ಕಾರ್ಯಕ್ರಮದ ಉತ್ಸವಮೂರ್ತಿ ಸಿದ್ದರಾಮಯ್ಯನವರೇ. ಅವರ ಕಾರಣಕ್ಕೇ ಈ ಮಟ್ಟಿಗಿನ ಪ್ರತಿಕ್ರಿಯೆ ಬಂದಿದೆ ಎಂಬುದೂ ನಿಜವೇ. ಅದೇ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ "ಈ ಸಮಾವೇಶವು ಕಾಂಗ್ರೆಸ್ ಪಕ್ಷವನ್ನು ವಿಧಾನಸೌಧದ ಮೂರನೆ ಮಹಡಿಗೆ ತಲುಪಿಸಲು ಮೆಟ್ಟಿಲು. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುನ್ನಡೆಸುತ್ತೇವೆ" ಎಂದು ಹೇಳಿದಾಗಲೂ ಸಕಾರಾತ್ಮಕ ಪ್ರತಿಕ್ರಿಯೆಯೇ ಬಂದಿದೆ.

ಅದೇ ವೇಳೆ ಅವರು, "ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಯನ್ನು ಎದುರಿಸೋಣ" ಎಂದೂ ಶಿವಕುಮಾರ್‌ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? 

ಸಿದ್ದರಾಮಯ್ಯ75| ಒಗ್ಗಟ್ಟಿನ ಮಂತ್ರದ ಜೊತೆ ಸಾಮೂಹಿಕ ನಾಯಕತ್ವದ ಜಪ ಮಾಡಿದ ಡಿ ಕೆ ಶಿವಕುಮಾರ್

ಈಗ ಇಬ್ಬರೂ ನಾಯಕರು ಉದಾರತೆಯನ್ನು ತೋರುವರೇ? ಅಥವಾ ವ್ಯಕ್ತಿಗತವಾಗಿ ಅಧಿಕಾರ ಪಡೆಯುವುದು ಮಾತ್ರವೇ ಸದ್ಯದ ಆದ್ಯತೆಯೆಂಬ ಅವರ ಭಾವನೆಯನ್ನು ಮುಂದೆಯೂ ಹೊಂದಿರುವರೇ ಎಂಬುದನ್ನು ಕಾದು ನೋಡಬೇಕು.

ಈ ಸಮಾವೇಶವು ಮತ್ತೆ ಸಿದ್ದರಾಮಯ್ಯನವರನ್ನು ಕರ್ನಾಟಕ ಕಾಂಗ್ರೆಸ್ ಪಕ್ಷದ ಕೇಂದ್ರಕ್ಕೆ ತಂದು ನಿಲ್ಲಿಸಿದೆ; ಕರ್ನಾಟಕದ ರಾಜಕಾರಣದಲ್ಲೂ ಅವರೆಷ್ಟು ಮಹತ್ವವುಳ್ಳವರು ಎಂಬುದನ್ನೂ ತೋರಿಸಿದೆ. ಆದರೆ ಜನಸಮುದಾಯದ ವಿವೇಕವು ವ್ಯಕ್ತಿಗತ ಮಹತ್ವಾಕಾಂಕ್ಷೆಗಳಿಗಿಂತ ಹಿರಿದಾಗಿರುತ್ತದೆ ಎಂಬುದನ್ನು ಇತಿಹಾಸ ಸಾಬೀತು ಮಾಡುತ್ತದೆ. ಇಂತಹುದೇ ವ್ಯಕ್ತಿಕೇಂದ್ರಿತ ಬೃಹತ್ ಸಮಾವೇಶವನ್ನು ನಡೆಸಿದ ಇನ್ನೊಬ್ಬ ಜನನಾಯಕ ಎಸ್. ಬಂಗಾರಪ್ಪನವರೂ ನಂತರ ಇನ್ನೊಂದು ಅವಧಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎಂಬುದನ್ನೂ ನೆನಪಿಸಿಕೊಳ್ಳಬೇಕಿದೆ.

ಬಂಗಾರಪ್ಪನವರೂ ಶೋಷಿತ ಸಮುದಾಯದ ಹಿನ್ನೆಲೆಯವರು; ಆ ಸಮುದಾಯಗಳಿಗೆ ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನೂ ತಂದರು. ಅವರು ನಡೆದದ್ದೇ ಹಾದಿ ಎಂಬಂತೆ ಬದುಕಿಯೂ ಇದ್ದರು. ಜನರ ಪ್ರೀತಿಯನ್ನೂ ಗಳಿಸಿದ್ದರು. ಅಧಿಕಾರವನ್ನೂ ಕಳೆದುಕೊಂಡರು. ಅಂತಿಮವಾಗಿ ಸೈದ್ಧಾಂತಿಕವಾಗಿ ತಮಗೆ ಒಪ್ಪಿಗೆಯಾಗದ ಬಿಜೆಪಿ ಪಕ್ಷಕ್ಕೂ, ತದನಂತರ ಜೆಡಿಎಸ್‌ಗೂ ಹೋದರು.

ಸಿದ್ದರಾಮಯ್ಯನವರೂ ಅಪಾರ ಜನಪ್ರೀತಿಯನ್ನು ಗಳಿಸಿದ್ದಾರೆ; ಆ ಕಾರಣಕ್ಕೇ ಹೆಚ್ಚಿನ ಜವಾಬ್ದಾರಿಯನ್ನೂ ತೋರಬೇಕಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್