ತೀಸ್ತಾ ಪ್ರಕರಣ | ಅಹಮದಾಬಾದ್‌ ಅಪರಾಧ ಪೊಲೀಸರಿಗೆ ಬಂಧಿತರ ವರ್ಗಾವಣೆ

Teesta Setalvad
  • ಬಂಧನದ ವಿರುದ್ಧ ಪ್ರತಿ ದೂರು ಸಲ್ಲಿಸಿದ ತೀಸ್ತಾ ಸೆಟಲ್ವಾಡ್‌
  • ಅಹಮಾದಾಬಾದ್‌ ಪೊಲೀಸರಿಗೆ ತೀಸ್ತಾ ಪ್ರಕರಣ ಹಸ್ತಾಂತರ

ಗುಜರಾತ್‌ ಕೋಮು ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿ ತೀಸ್ತಾ ಸೆಟಲ್ವಾಡ್‌ ಮತ್ತು ಆರ್‌ ಬಿ ಶ್ರೀಕುಮಾರ್‌ ಅವರನ್ನು ಬಂಧಿಸಿರುವ ಗುಜರಾತ್‌ನ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು (ಎಟಿಎಸ್‌) ಪ್ರಕರಣದ ತನಿಖೆಯನ್ನು ಭಾನುವಾರ ಬೆಳಿಗ್ಗೆ ಅಹಮದಾಬಾದ್‌ನ ಅಪರಾಧ ವಿಭಾಗದ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ತೀಸ್ತಾ ಅವರ ವಿರುದ್ಧ ಹೊಸದಾಗಿ ನಕಲಿ ದಾಖಲೆ ಸೃಷ್ಟಿ, ಅಪರಾಧಕ್ಕಾಗಿ ಪಿತೂರಿ ಮತ್ತು ಹಾನಿ ಮಾಡಲು ಅಪರಾಧ ಪ್ರಕ್ರಿಯೆಗಳನ್ನು ಹಾಳು ಮಾಡುವುದು ಎಂಬ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿವೆ. ಅದಕ್ಕಾಗಿ ಪ್ರಕರಣ ವರ್ಗಾಯಿಸಲಾಗಿದೆ ಎನ್ನಲಾಗಿದೆ. 

ಕೋಮು ಗಲಭೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರನ್ನು ಆರೋಪ ಮುಕ್ತಗೊಳಿಸಿದ ನಂತರ ನ್ಯಾಯಾಲಯದ ಉಲ್ಲೇಖದಂತೆ ನಕಲಿ ದಾಖಲೆ, ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ ಅವರನ್ನು ಮುಂಬೈನ ಜುಹು ಪ್ರದೇಶದಲ್ಲಿನ ನಿವಾಸದಿಂದ ಶನಿವಾರ ಬಂಧಿಸಿತ್ತು.

ಅಪರಾಧ ವಿಭಾಗದ ಇನ್‌ಸ್ಪೆಕ್ಟರ್‌ ಡಿ ಬಿ ಬರಾದ್‌ ಅವರು ಅಹಮದಾಬಾದ್‌ ಅಪರಾಧ ವಿಭಾಗದ ಠಾಣೆಯಲ್ಲಿ ತೀಸ್ತಾ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದರು. 

ಈ ಸುದ್ದಿ ಓದಿದ್ದೀರಾ? ಮಹಾ ಬಿಕ್ಕಟ್ಟು | ಬಂಡಾಯ ಶಾಸಕರಿಗೆ ‘ವೈ ಪ್ಲಸ್‌’ ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ ಸರ್ಕಾರ

“ಇಲ್ಲಿಗೆ ಕರೆತಂದ ನಂತರ ತೀಸ್ತಾ ಅವರನ್ನು ಭಾನುವಾರ ಬೆಳಿಗ್ಗೆ ನಗರದ ಅಪರಾಧ ವಿಭಾಗದ ಪೊಲೀಸರ ವಶಕ್ಕೆ ನೀಡಲಾಗಿದೆ. ಶೀಘ್ರದಲ್ಲಿ ಅವರನ್ನು ಬಂಧನದಲ್ಲಿಡಲಾಗುವುದು” ಎಂದು ಅಪರಾಧ ವಿಭಾಗದ ಮೂಲಗಳು ಹೇಳಿವೆ. 

ಗುಜರಾತ್‌ ಪೊಲೀಸರ ತಂಡವು ರಸ್ತೆಯ ಮೂಲಕವೇ ತೀಸ್ತಾ ಮತ್ತು ಶ್ರೀಕುಮಾರ್‌ ಅವರನ್ನು ಅಹಮದಾಬಾದ್‌ಗೆ ಕರೆದೊಯ್ದಿದೆ. 

ಬಂಧನದ ವಿರುದ್ಧ ತೀಸ್ತಾ ದೂರು

ಗುಜರಾತ್ ಎಟಿಎಸ್‌ ಪೊಲೀಸರು ಶನಿವಾರ ತಮ್ಮನ್ನು ಬಂಧಿಸಿದ ನಂತರ ತೀಸ್ತಾ ಅವರೂ ಮುಂಬೈನ ಸಾಂತಾಕ್ರೂಸ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

“ಗುಜರಾತ್‌ ಪೊಲೀಸರು ಮನೆಗೆ ನುಗ್ಗಿ ನನ್ನನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಎಫ್‌ಐಆರ್‌ನ ಪ್ರತಿ ಅಥವಾ ಬಂಧನದ ವಾರಂಟ್‌ ತೋರಿಸಿಲ್ಲ. ನನ್ನ ಎಡಗೈಗೆ ದೊಡ್ಡ ತರಚಿದ ಗಾಯವಾಗಿದೆ. ನನ್ನ ಜೀವಕ್ಕೆ ಅಪಾಯವಿದೆ ಎಂದು ಭಯವಾಗುತ್ತಿದೆ” ಎಂದು ತೀಸ್ತಾ ದೂರಿನಲ್ಲಿ ಹೇಳಿದ್ದಾರೆ. 

"ಮಧ್ಯಾಹ್ನ 3.45ರ ಸುಮಾರಿಗೆ ನಾನು ಕೆಲಸ ಮಾಡುತ್ತಿದ್ದಾಗ ಮಹಿಳೆ ಸೇರಿ ಇಬ್ಬರು ಅಹಮದಾಬಾದ್‌ನ 8-10 ಜನ ಪೊಲೀಸರು ನನ್ನ ಕೊಠಡಿಯೊಳಗೆ ನುಗ್ಗಿದರು. ನನ್ನ ವಕೀಲ ವಿಜಯ್‌ ಹಿರೇಮಠ ಅವರನ್ನು ಸಂಪರ್ಕಿಸಲೂ ಅವಕಾಶ ನೀಡಲಿಲ್ಲ. ಯಾವುದೇ ವಾರಂಟ್‌ ಅಥವಾ ಎಫ್‌ಐಆರ್ ಇಲ್ಲದೆ ನನ್ನನ್ನು ಬಂಧಿಸಿದರು. ಅವರು ಎಳೆದೊಯ್ಯುವಾಗ ನನ್ನ ಎಡಗೈಗೆ ಗಾಯವಾಯಿತು" ಎಂದು ದೂರಿನಲ್ಲಿ ಹೇಳಿದ್ದಾರೆ. 

"ಇದಕ್ಕೂ ಮುನ್ನ ಅವರು ನನ್ನ ಎನ್‌ಜಿಒ ಕಚೇರಿಗೆ ನೋಯ್ಡಾದ ಸಿಐಎಸ್ಎಫ್‌ನಿಂದ ಮಧ್ಯಾಹ್ನ 1 ಗಂಟೆಗೆ ಕರೆ ಬಂದಿದೆ. ಸಂಸ್ಥೆಯ ಉಸ್ತುವಾರಿ ಯಾರು, ಎಷ್ಟು ಜನರಿದ್ದಾರೆ ಎಂಬ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ನನ್ನ ಬಂಧನದ ನಂತರ ವಕೀಲರು ಬರುವವರೆಗೆ ಯಾವುದೇ ಎಫ್‌ಐಆರ್ ಪ್ರತಿ ತೋರಿಸಲಿಲ್ಲ. ಪೊಲೀಸರ ಈ ವರ್ತನೆಯಿಂದ ನನಗೆ ಜೀವ ಭಯ ಉಂಟಾಗಿದೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ನಿಮಗೆ ಏನು ಅನ್ನಿಸ್ತು?
1 ವೋಟ್