ಆರ್‌ಎಸ್‌ಎಸ್ ನಾಯಕರೇಕೆ ತ್ರಿವರ್ಣ ಧ್ವಜ ಪ್ರೊಫೈಲ್ ಚಿತ್ರದಲ್ಲಿ ಹಾಕಿಲ್ಲ; ಟ್ವೀಟಿಗರ ಪ್ರಶ್ನೆ

Har Ghar Tiranga
  • ಸ್ವಾತಂತ್ರ್ಯಾನಂತರ 52 ವರ್ಷಗಳವರೆಗೆ ತ್ರಿವರ್ಣ ಧ್ವಜ ಹಾರಿಸದ ಆರ್‌ಎಸ್‌ಎಸ್‌
  • ಪ್ರಧಾನಿ ಮೋದಿಯ ಬಿಜೆಪಿಯ ಇಬ್ಬಗೆಯ ನೀತಿಗೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 2ರಂದು ತಮ್ಮ ಪ್ರೊಫೈಲ್ ಚಿತ್ರದ ಜೊತೆಗೆ ತ್ರಿವರ್ಣ ಧ್ವಜ ಹಾಕಿಕೊಂಡಿದ್ದಾರೆ. ದೇಶವಾಸಿಗಳಿಗೂ ಅದೇ ಕರೆಯನ್ನು ಅವರು ನೀಡಿದ್ದಾರೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಚಿತ್ರವಾಗಿ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ‘ಹರ್ ಘರ್ ತಿರಂಗಾ’ ಎನ್ನುವ ಯೋಜನೆಯಲ್ಲಿ ಎಲ್ಲರೂ ತಮ್ಮ ಅಧಿಕೃತ ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಆಗಸ್ಟ್ 2ರಿಂದ ತ್ರಿವರ್ಣ ಧ್ವಜ ಪ್ರದರ್ಶಿಸುವಂತೆ ಮೋದಿ ಸೂಚಿಸಿದ್ದಾರೆ.

ನರೇಂದ್ರ ಮೋದಿ ಕರೆಗೆ ಓಗೊಟ್ಟಿರುವ ಸಾವಿರಾರು ಬಿಜೆಪಿ ಸಂಸದರು, ಶಾಸಕರು ಮತ್ತು ಕಾರ್ಯಕರ್ತರು ಮತ್ತು ಮೋದಿ ಅವರನ್ನು ಬೆಂಬಲಿಸುವ ಜನಸಾಮಾನ್ಯರು ಕೂಡ ತಮ್ಮ ಪ್ರೊಫೈಲ್ ಚಿತ್ರಗಳನ್ನು ಬದಲಿಸಿದ್ದಾರೆ. ಆದರೆ ಬಿಜೆಪಿಯ ಮಾತೃಸಂಸ್ಥೆ ಎಂದು ಹೇಳಲಾಗಿರುವ ಆರ್‌ಎಸ್‌ಎಸ್ ನಾಯಕರೇ ಸ್ವತಃ ಮೋದಿಯವರ ಬೇಡಿಕೆಯನ್ನು ಮನ್ನಿಸದೆ ಇರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

ಆರ್‌ಎಸ್‌ಎಸ್ ನಾಯಕರಾದ ಮೋಹನ್ ಭಾಗವತ್‌ ಮತ್ತು ದತ್ತಾತ್ರೇಯ ಹೊಸಬಾಳೆ ಮೊದಲಾದ ದಿಗ್ಗಜರು ತಮ್ಮ ಪ್ರೊಫೈಲ್ ಖಾತೆಗೆ ತ್ರಿವರ್ಣ ಧ್ವಜ ಹಾರಿಸಿಲ್ಲ. ಆರಂಭದಿಂದಲೇ ಆರ್‌ಎಸ್‌ಎಸ್ ‘ತ್ರಿವರ್ಣ ಧ್ವಜ ವಿರೋಧಿ’ ಎನ್ನುವ ವಿಚಾರದ ಬಗ್ಗೆ ವಿಪಕ್ಷಗಳು ಟೀಕಿಸುತ್ತಿವೆ. ಇದೀಗ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಚಿತ್ರದ ಜೊತೆಗೆ ಸೇರಿಸಿಕೊಳ್ಳುವ ವಿಚಾರದಲ್ಲೂ ಬಿಜೆಪಿಯ ಇಬ್ಬಗೆಯ ನೀತಿಗೆ ಟ್ವಿಟರ್‌ನಲ್ಲಿ ವ್ಯಾಪಕ ಟೀಕೆ ಕೇಳಿಬಂದಿದೆ.

ಮಾಧ್ಯಮಗಳು ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಈ ಬಗ್ಗೆ ಪ್ರಶ್ನಿಸಿದರೆ, ಹಿರಿಯ ಆರ್‌ಎಸ್‌ಎಸ್‌ ನಾಯಕರು ತಮಗೆ ಅಂತಹ ಆದೇಶ ಬಂದಿಲ್ಲ ಎಂದು ಉತ್ತರಿಸಿದ್ದಾರೆ. “ಯಾರದ್ದೇ ಒತ್ತಡದಿಂದ ನಾವು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ನಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರೊಫೈಲ್ ಚಿತ್ರ ಬದಲಾಗಬೇಕಾದರೆ ಅದಕ್ಕೆ ಸಮಯ ಬೇಕಾಗುತ್ತದೆ” ಎಂದು ನೆಪ ಹೇಳಿರುವುದಾಗಿ 'ದಿ ಪ್ರಿಂಟ್‌' ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಲವು ಟ್ವೀಟಿಗರು ಆರ್‌ಎಸ್‌ಎಸ್‌ ಮುಖಂಡರ ಪ್ರೊಫೈಲ್ ಚಿತ್ರಗಳನ್ನು ಸ್ಕ್ರೀನ್‌ಶಾಟ್ ತೆಗೆದು ಟ್ವಿಟರ್‌ನಲ್ಲಿ ತ್ರಿವರ್ಣ ಧ್ವಜ ಹಾಕದೆ ಇರುವುದಕ್ಕಾಗಿ ಟ್ರೋಲ್ ಮಾಡುತ್ತಿದ್ದಾರೆ. ಸುರೇಶ್ ಸೋನಿ, ಅರುಣ್ ಕುಮಾರ್, ಅನಿರುದ್ಧ ದೇಶಪಾಂಡೆ, ವಿ ಭಾಗಯ್ಯ, ಸುರೇಶ್ ಜೋಶಿ, ಕೃಷ್ಣ ಗೋಪಾಲ್, ನರೇಂದ್ರ ಕುಮಾರ್ ಮೊದಲಾದವರು ಪ್ರೊಫೈಲ್ ಚಿತ್ರವನ್ನು ಬದಲಿಸಿಲ್ಲ.

ಆದರೆ ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿಗಳಾದ ಮನ್‌ಮೋಹನ್ ವೈದ್ಯ, ಅರುಣ್ ಕುಮಾರ್ ಮತ್ತು ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಮೊದಲಾದವರು ಪ್ರೊಫೈಲ್ ಚಿತ್ರ ಬದಲಿಸಿದ್ದಾರೆ.

ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಪ್ರೊಫೈಲ್ ಚಿತ್ರ ಬದಲಾಯಿಸಲು ಬಿಜೆಪಿ ಒತ್ತಾಯಿಸದೆ ಇರುವ ಬಗ್ಗೆ ಟೀಕಿಸಿರುವ ಕಾಂಗ್ರೆಸ್ ಮುಖಂಡ ಪವನ್‌ ಖೇರಾ ಟ್ವಿಟರ್‌ನಲ್ಲಿ ಮೋಹನ್ ಭಾಗವತ್ ಮತ್ತು ಇತರರ ಪ್ರೊಫೈಲ್ ಚಿತ್ರಗಳನ್ನು ಹಂಚಿಕೊಂಡು, “ಸಂಘದ ಕಾರ್ಯಕರ್ತರೇ ಇನ್ನಾದರೂ ತ್ರಿವರ್ಣ ಧ್ವಜವನ್ನು ಸ್ವೀಕರಿಸಿ” ಎಂದು ಹೇಳಿದ್ದಾರೆ.

ಮತ್ತೊಬ್ಬ ಕಾಂಗ್ರೆಸ್ ಮುಖಂಡ ಮತ್ತು ಸಂಸದ ಜೈರಾಮ್ ರಮೇಶ್, “ನಾವು ನಮ್ಮ ನಾಯಕ ಜವಾಹರಲಾಲ್ ನೆಹರು ತ್ರಿವರ್ಣ ಧ್ವಜ ಹಿಡಿದ ಫೋಟೋ ಪ್ರೊಫೈಲ್ ಚಿತ್ರವಾಗಿ ಬದಲಿಸಿದ್ದೇವೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ಅವರ ಕುಟುಂಬಕ್ಕೇ ತಲುಪಿಲ್ಲ ಎಂದು ಕಾಣಿಸುತ್ತದೆ. 52 ವರ್ಷಗಳ ಕಾಲ ತಮ್ಮ ಮುಖ್ಯ ಕಚೇರಿ ನಾಗಪುರದಲ್ಲಿ ತ್ರಿವರ್ಣ ಧ್ವಜ ಹಾರಿಸದ ಆರ್‌ಎಸ್‌ಎಸ್‌ ಪ್ರಧಾನಿ ಮಾತಿಗೆ ಬೆಲೆ ಕೊಡುವುದೆ?” ಎಂದು ಪ್ರಶ್ನಿಸಿದ್ದಾರೆ. 

ಈ ಸುದ್ದಿಯನ್ನು ಓದಿದ್ದೀರಾ?: ಪೆನ್ಸಿಲ್‌, ಮ್ಯಾಗಿ ದುಬಾರಿ | ಬೆಲೆಯೇರಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದ ಆರರ ಪೋರಿ

1947 ಆಗಸ್ಟ್ 15ರಂದು ಆರ್‌ಎಸ್‌ಎಸ್‌ ತನ್ನದೇ ಧ್ವಜ ಹಾರಿಸುತ್ತಾ ಬಂದಿದೆ. 2002ರವರೆಗೂ ಆರ್‌ಎಸ್‌ಎಸ್ ತನ್ನದೇ ಧ್ವಜಕ್ಕೆ ಪ್ರಾಮುಖ್ಯತೆ ಕೊಟ್ಟು ತ್ರಿವರ್ಣ ಧ್ವಜ ಹಾರಿಸಿರಲಿಲ್ಲ ಎಂದು ಆರ್‌ಎಸ್‌ಎಸ್‌ಗೊಂದು ನೀತಿ ಮತ್ತು ರಾಷ್ಟ್ರಕ್ಕೊಂದು ನೀತಿ ಬೋಧಿಸುವ ಬಿಜೆಪಿಯ ಇಬ್ಬಗೆಯ ನೀತಿ ಬಗ್ಗೆ ತೆಲಂಗಾಣ ರಾಷ್ಟ್ರ ಸಮಿತಿಯೂ ಟೀಕಿಸಿದೆ. “52 ವರ್ಷಗಳವರೆಗೆ ಭಾರತದ ತ್ರಿವರ್ಣ ಧ್ವಜವನ್ನು ಆರ್‌ಎಸ್‌ಎಸ್ ನಿರ್ಲಕ್ಷಿಸಿದೆ. ಈಗ ಆರ್‌ಎಸ್‌ಎಸ್ ಮತ್ತು ಬಿಜೆಪಿ ದೇಶಕ್ಕೆ '‘ಹರ್ ಘರ್ ತಿರಂಗಾ” ಎಂದು ಉಪನ್ಯಾಸ ನೀಡಿ ರಾಷ್ಟ್ರಭಕ್ತಿ ಮತ್ತು ರಾಷ್ಟ್ರವಾದವನ್ನು ಮುಂದಿಡುತ್ತಿದೆ. ಬಿಜೆಪಿಗೆ ನಾಚಿಕೆಯಾಗಬೇಕು” ಎಂದು ಟಿಆರ್‌ಎಸ್‌ನ ವೈ ಸತೀಶ್ ರೆಡ್ಡಿ ಹೇಳಿದ್ದಾರೆ.

ಕುತೂಹಲಕರವೆಂದರೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರ, ಜೈರಾಮ್ ರಮೇಶ್ ಮೊದಲಾದವರು ತಮ್ಮ ಪ್ರೊಫೈಲ್ ಚಿತ್ರಕ್ಕೆ ನೆಹರೂ ತ್ರಿವರ್ಣ ಧ್ವಜ ಹಿಡಿದಿರುವ ಚಿತ್ರವನ್ನು ಹಾಕಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್