ಪತ್ರಕರ್ತೆ ಮೀನಾ ಕೊತ್ವಾಲ್‌ಗೆ ನ್ಯಾಯ ಒದಗಿಸಲು ಭಾರತ ಸರ್ಕಾರಕ್ಕೆ ಆಗ್ರಹಿಸಿದ ವಿಶ್ವಸಂಸ್ಥೆ

Meena Kotwal
  • ಪತ್ರಕರ್ತೆ ಮೀನಾ ಕೊತ್ವಾಲ್‌ರಿಗೆ ಹಿಂದುತ್ವವಾದಿಗಳ ಬೆದರಿಕೆ
  • ಕಳವಳ ವ್ಯಕ್ತಪಡಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಂಘಟನೆ

ಮಾನವ ಹಕ್ಕುಗಳ ಬಗ್ಗೆ ಬರೆಯುವ ಭಾರತೀಯ ಪತ್ರಕರ್ತೆ ಮೀನಾ ಕೊತ್ವಾಲ್ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವರದಿಯಲ್ಲಿ ಇತ್ತೀಚೆಗೆ ಉಲ್ಲೇಖಿಸಲಾಗಿದೆ. 

ಪತ್ರಕರ್ತೆ ಮೀನಾ ಕೊತ್ವಾಲ್ ಅವರಿಗೆ ಬೆದರಿಕೆ ಹಾಕಿ ಅವರ ಧ್ವನಿ ಅಡಗಿಸುವ ಪ್ರಯತ್ನದ ಬಗ್ಗೆ ವಿಶ್ವಸಂಸ್ಥೆಯ ಅಧಿಕಾರಿಗಳು ಚರ್ಚಿಸಿರುವುದು ಮತ್ತು ವರದಿಯಲ್ಲಿ ಉಲ್ಲೇಖಿಸಿರುವುದನ್ನು 2022 ಫೆಬ್ರವರಿ 3ರಂದು ಭಾರತ ಸರ್ಕಾರದ ಗಮನಕ್ಕೆ ತರಲಾಗಿತ್ತು. ಆದರೆ 60 ದಿನಗಳ ನಂತರವೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ವಿಶ್ವಸಂಸ್ಥೆಯ ವರದಿಯನ್ನು ಬಹಿರಂಗಗೊಳಿಸಲಾಗಿದೆ. 

ವರದಿ ವ್ಯಕ್ತಪಡಿಸಿದ ಕಾಳಜಿಗಳೇನು? 

ಈ ಬಗ್ಗೆ ಮಾನವ ಹಕ್ಕುಗಳ ವರದಿಯಲ್ಲಿ ಕೆಲವು ಕಾಳಜಿಗಳನ್ನು ಮುಂದಿಡಲಾಗಿದೆ. "ಮೀನಾ ಅವರಿಗೆ ಪದೇ ಪದೇ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಅವರ ಜೀವ ಮತ್ತು ದೈಹಿಕ ಘನತೆಗೆ ಧಕ್ಕೆಯಾಗುವ ಆತಂಕವಿದೆ. ಅಪರಿಚಿತ ವ್ಯಕ್ತಿಗಳು ಭವಿಷ್ಯದಲ್ಲೂ ಅವರಿಗೆ ಕಿರುಕುಳ ಕೊಡುವ ಸಾಧ್ಯತೆಯಿದೆ. ಆಕೆಯ ವಿರುದ್ಧ ಬೆದರಿಕೆ ಕಳವಳಕಾರಿ. ಇದು ಆನ್‌ಲೈನ್‌ನಲ್ಲಿ ತಮ್ಮ ಅಭಿಪ್ರಾಯ ತಿಳಿಸುವ ಆಕೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ನೇರ ಪ್ರಯತ್ನ. ಈ ಪ್ರಕರಣದಲ್ಲಿ ಮಹಿಳೆಯರನ್ನು ಹತ್ತಿಕ್ಕುವ ಪ್ರಯತ್ನ ಮತ್ತು ದಲಿತ ಮಹಿಳೆಯನ್ನು ಹತ್ತಿಕ್ಕಲು ನಡೆಯುವ ನಿರಂತರ ಪ್ರಯತ್ನ ಕಾಣುತ್ತಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿಯಮ ಮತ್ತು ಮಾನದಂಡಗಳ ಉಲ್ಲಂಘನೆಯಾಗಿದೆ" ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

ಆನ್‌ಲೈನ್‌ ಪರಿಸರದ ಬಗ್ಗೆ ಕಳವಳ 

ಮೀನಾ ಕೊತ್ವಾಲ್ ವಿರುದ್ಧದ ಬೆದರಿಕೆ ಮತ್ತು ಕಿರುಕುಳ ಭಾರತದಲ್ಲಿ ಇತ್ತೀಚೆಗಿನ ವಾರಗಳು ಮತ್ತು ತಿಂಗಳುಗಳಲ್ಲಿ ದೇಶದ ಆನ್‌ಲೈನ್‌ ಪರಿಸರದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ಉದ್ದೇಶಿತ ಪ್ರಚಾರಾಭಿಯಾನದ ಭಾಗವಾಗಿರುವಂತೆ ಗೋಚರವಾಗುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

ಮಹಿಳಾ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಕುರಿತಾಗಿ ದೇಶದಲ್ಲಿರುವ ಆನ್‌ಲೈನ್‌ ಪರಿಸರದ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.

“ಮೀನಾ ಅವರ ದೂರಿಗೆ ಎಫ್ಐಆರ್ ದಾಖಲಾಗದಿರುವ ಬಗ್ಗೆ ನಾವು ಮತ್ತೊಮ್ಮೆ ಕಳವಳ ವ್ಯಕ್ತಪಡಿಸುತ್ತೇವೆ. ಮೀನಾ ಅವರು ಬೆದರಿಕೆ ಕರೆಗಳ ವಿರುದ್ಧ ದೂರು ನೀಡಲು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ ಬಳಿಕವೂ ತನಿಖೆಯಲ್ಲಿ ವಿಳಂಬ ಗಮನಿಸಲಾಗಿದೆ. ಇದರಲ್ಲಿ ಪೊಲೀಸ್ ಅಧಿಕಾರಿಗಳ ನಿಷ್ಕ್ರಿಯತೆ ಕಾಣುತ್ತಿದೆ. ಇದರಿಂದಾಗಿ ಮೀನಾ ಕೋತ್ವಾಲ್ ಅವರ ಜೀವ ಅಪಾಯದಲ್ಲಿದೆ. ಮೀನಾ ದೂರು ಸಲ್ಲಿಸಿರುವ ನವದೆಹಲಿಯ ಅಂಬೇಡ್ಕರ್ ನಗರ ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರವು ಆದೇಶಿಸಬೇಕು” ಎಂದು ವರದಿ ಆಗ್ರಹಿಸಿದೆ.

ಮನುಸ್ಮೃತಿ ಸುಡುವ ವೀಡಿಯೋ ತೆಗೆಯಲು ಒತ್ತಡ

ಮೀನಾ ಕೊತ್ವಾಲ್ ಭಾರತದಲ್ಲಿ ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಮಾನವ ಹಕ್ಕುಗಳ ಮೇಲೆ ವರದಿ ಮಾಡುತ್ತಿದ್ದ ದಲಿತ ಸಮುದಾಯದ ಪತ್ರಕರ್ತೆ. ‘ದ ಮೂಕ್‌ನಾಯಕ್’ ಎನ್ನುವ ಆನ್ಲೈನ್ ಸುದ್ದಿ ವಾಹಿನಿ ಮತ್ತು ವೆಬ್‌ಸೈಟ್ ಸಂಸ್ಥಾಪಕರು. ತಮ್ಮ ವೆಬ್‌ಸೈಟ್‌ನಲ್ಲಿ  ದಲಿತರು, ಅಲ್ಪಸಂಖ್ಯಾತರು ಮತ್ತು ಶೋಷಿತ ವರ್ಗದ ಬಗ್ಗೆ ಬರೆಯುತ್ತಿದ್ದರು.
ಮಹಿಳಾ ಹಕ್ಕುಗಳ ರಕ್ಷಣೆಗೆ ಡಾ ಭೀಮರಾವ್ ಅಂಬೇಡ್ಕರ್ 1927ರಲ್ಲಿ ಮನುಸ್ಮೃತಿ ಸುಟ್ಟ ದಿನದ ನೆನಪಿಗಾಗಿ 2021 ಡಿಸೆಂಬರ್ 25ರಂದು ಮೀನಾ ಕೋತ್ವಾಲ್ ‘ಮನುಸ್ಮೃತಿ ಸುಡುವ ದಿನ’ ಎಂದು ಸ್ವತಃ ಮನುಸ್ಮೃತಿಯನ್ನು ಸುಟ್ಟ ವೀಡಿಯೋ ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದರು.

2021 ಡಿಸೆಂಬರ್ 26ರಿಂದ ಮೀನಾ ಅವರಿಗೆ ಪದೇಪದೇ ಹಿಂದುತ್ವವಾದಿ ಸಂಘಟನೆಗಳಾಗಿರುವ ಭಜರಂಗ ದಳ, ಕರ್ಣಿ ಸೇನಾ, ವಿಶ್ವ ಹಿಂದೂ ಪರಿಷದ್‌ಗಳ ವಿವಿಧ ಪುರುಷರಿಂದ ಬೆದರಿಕೆ ಕರೆ ಬರಲು ಆರಂಭವಾಗಿದೆ. ವೀಡಿಯೋ ತೆಗೆಯುವಂತೆ ಅವರು ಒತ್ತಾಯಿಸುತ್ತಿದ್ದರು. 

ಕರ್ನಾಟಕದ ಪತ್ರಕರ್ತೆ ‘ಗೌರಿ ಲಂಕೇಶ್’ ರೀತಿಯಲ್ಲಿಯೇ ಮೀನಾ ಕೊತ್ವಾಲ್ ಅವರೂ ಕೊಲೆಯಾಗಲಿದ್ದಾರೆ ಎಂದು ಬೆದರಿಕೆ ಒಡ್ಡಲಾಗಿದೆ. ಒಂದುದೂರವಾಣಿ ಕರೆಯಲ್ಲಿ ಆಕೆಯ ಫೋನ್ ನಂಬರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಲಾಗಿದ್ದು, ಬೆದರಿಕೆ ಒಡ್ಡಲು ಪ್ರಚೋದಿಸಲಾಗಿದೆ ಎನ್ನುವ ವಿವರವನ್ನೂ ಆಕೆಗೆ ನೀಡಿದ್ದರು. 

ಮೀನಾ ವೀಡಿಯೋ ತೆಗೆಯಲು ನಿರಾಕರಿಸಿದಾಗ ದೈಹಿಕ ಹಿಂಸೆಯ ಬೆದರಿಕೆ ಒಡ್ಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಬೆದರಿಕೆ ಬಂದಿತ್ತು. ಪೊಲೀಸ್ ಅಧಿಕಾರಿಯೆಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿಯೊಬ್ಬರೂ ಬೆದರಿಕೆ ಹಾಕಿದ್ದರು. ಈಗಲೂ ಜಾತಿವಾದಿ ನಿಂದನೆ ಮತ್ತು ದೈಹಿಕ ಘನತೆಗೆ ಕುಂದು ತರುವ ಬೆದರಿಕೆಗಳು ಬರುತ್ತಿವೆ.

ಇದನ್ನು ಓದಿದ್ದೀರಾ? ವಾರಾಂತ್ಯದ ಓದು | ಹಿಂದಿ ಹೇರಿಕೆಗೆ ಪ್ರತಿರೋಧದ ಪೆಟ್ಟು; ಗೆರೆಗಳಲ್ಲಿ ಬರೆ ಎಳೆದ ತಮಿಳು ವ್ಯಂಗ್ಯಚಿತ್ರಕಾರರು

ಪೊಲೀಸರ ನಿಷ್ಕ್ರಿಯತೆ 

2021ರಂದು ಡಿಸೆಂಬರ್ 30ರಂದು ಮೀನಾ ಅವರು ನವದೆಹಲಿಯ ಅಂಬೇಡ್ಕರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಮಗೆ ಬೆದರಿಕೆ ಒಡ್ಡಿದ ವಿವರಗಳನ್ನು ಅವರು ದೂರಿನಲ್ಲಿ ಹೇಳಿದ್ದರು. ಅಂಬೇಡ್ಕರ್ ನಗರ ಪೊಲೀಸ್ ಠಾಣಾ ಮುಖ್ಯಸ್ಥರು ಸಬ್ ಇನ್‌ಸ್ಪೆಕ್ಟರ್‌ಗೆ ದೂರು ದಾಖಲಿಸಿಕೊಳ್ಳುವಂತೆ ಸೂಚಿಸಿದ್ದರು. ಬಹಳ ಹೊತ್ತು ಮೀನಾ ಜೊತೆಗೆ ಚರ್ಚಿಸಿದ ನಂತರ ದೂರು ಕೊಡುವ ಬದಲಾಗಿ ಅಂತಹ ವೀಡಿಯೋಗಳನ್ನು ಪೋಸ್ಟ್ ಮಾಡದಿರುವಂತೆ ಅವರು ಸಲಹೆ ನೀಡಿದ್ದರು. ಸಬ್ ಇನ್‌ಸ್ಪೆಕ್ಟರ್‌ ಅವರಿಂದ ಎಫ್ಐಆರ್ ಜ್ಞಾಪನಾ ಪತ್ರವನ್ನು ಮೀನಾ ಕೇಳಿದ್ದಾರೆ. ಆದರೆ ಅದನ್ನು ಡಿಸಿಪಿ ಕಚೇರಿಯಿಂದ ಪಡೆಯಬೇಕಾಗಿರುವ ಕಾರಣ ಮತ್ತೊಮ್ಮೆ ಬರುವಂತೆ ಅವರು ಸೂಚಿಸಿದ್ದರು.

ನಂತರ ಮೀನಾ ನೈರುತ್ಯ ದೆಹಲಿಯ ಡಿಸಿಪಿ ಕಚೇರಿಗೆ ದೂರಿನ ಪ್ರತಿ ನೀಡಿ ಎಫ್ಐಆರ್ ಅಂಬೇಡ್ಕರ್ ನಗರ ಪೊಲೀಸರಿಗೆ ಸಲ್ಲಿಸಿರುವುದಾಗಿ ತಿಳಿಸಿದ್ದರು. ಆದರೆ ಅವರ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರಲಿಲ್ಲ. 

ದೆಹಲಿ ಪೊಲೀಸರೇ ರಚಿಸಿರುವ ನಿಯಮಗಳ ಪ್ರಕಾರ ಮಹಿಳೆಯರಿಗೆ ಇಮೇಲ್, ಪತ್ರದ ಮೂಲಕ ಅಥವಾ ಲಿಖಿತ ದೂರು ದಾಖಲಿಸುವ ಅವಕಾಶವಿದೆ. ಆದರೆ ಪೊಲೀಸರು ಮೀನಾ ಸ್ವತಃ ಭೇಟಿ ನೀಡಿ ದೂರು ನೀಡಿದರೂ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಮಾನವ ಹಕ್ಕುಗಳ ವರದಿ ಪ್ರಕಟವಾಗುವವರೆಗೂ ಎಫ್ಐಆರ್ ದಾಖಲಿಸಿರಲಿಲ್ಲ ಎಂದು ವರದಿಯಲ್ಲಿ ವಿವರವಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್