
ಬಿ ಕೆ ಹರಿಪ್ರಸಾದ್, ಹೆಸರು ದೆಹಲಿ ರಾಜಕಾರಣದಲ್ಲಿ ಚಿರಪರಿಚಿತ. 45 ವರ್ಷಗಳ ಸುದೀರ್ಘ ರಾಜಕಾರಣದಲ್ಲಿ ಕಾಂಗ್ರೆಸ್ಸಿನ ಇಂದಿರಾ ಗಾಂಧಿ ಕಾಲದಿಂದ ಈಗಿನ ರಾಹುಲ್, ಪ್ರಿಯಾಂಕಾ ಗಾಂಧಿವರೆಗೆ ಮೂರು ತಲೆಮಾರುಗಳ ಗಾಂಧಿ ಕುಟುಂಬದ ಆಪ್ತ ಒಡನಾಟ ಹೊಂದಿದವರು.
ವಿದ್ಯಾರ್ಥಿ ಕಾಂಗ್ರೆಸ್ನಿಂದ ರಾಜಕೀಯ ಪ್ರವೇಶ ಮಾಡಿದ ಅವರು, ಸುಮಾರು ಮೂರು ದಶಕಗಳ ಕಾಲ ದೆಹಲಿ ರಾಜಕಾರಣ ಮಾಡಿದ್ದಾರೆ. ಕಳೆದ ಚುನಾವಣೆಯಲ್ಲಿ ಯುಪಿಎ ಒಕ್ಕೂಟದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದ ಅವರು, ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿಯೂ, 19 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಕಾಂಗ್ರೆಸ್ ಉಸ್ತುವಾರಿಯಾಗಿದ್ದವರು.
ಹೈಕಮಾಂಡ್ನ ಪ್ರಭಾವಿ ನಾಯಕರಾಗಿದ್ದರೂ, ಕಳೆದ ವರ್ಷ ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಆರ್ಎಸ್ಎಸ್ ಮತ್ತು ಬಿಜೆಪಿಯ ಕಟು ಟೀಕಾಕಾರರಾಗಿರುವ ಹರಿಪ್ರಸಾದ್, ಪ್ರಸ್ತುತ ಬಿಜೆಪಿ ಸರ್ಕಾರದ ವಿರುದ್ಧದ ಬೆರಳೆಣಿಕೆಯ ಗಟ್ಟಿ ಧ್ವನಿಗಳಲ್ಲಿ ಒಬ್ಬರಾಗಿದ್ದಾರೆ. ಸದ್ಯ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಅವರು, ಸದನದ ಒಳಗೂ ಮತ್ತು ಹೊರಗೂ ಸರ್ಕಾರವನ್ನು ನಿರ್ಭಿಡೆಯಿಂದ ಪ್ರಶ್ನಿಸುತ್ತಿದ್ದಾರೆ.
ಖಚಿತ ಮತ್ತು ಖಡಕ್ ಮಾತಿಗೆ ಹೆಸರಾದ ಬಿ ಕೆ ಹರಿಪ್ರಸಾದ್ ಅವರೊಂದಿಗೆ ಈ ದಿನ.ಕಾಮ್ ನಡೆಸಿದ ವಿಶೇಷ ಸಂದರ್ಶನದಲ್ಲಿ, ಸದ್ಯ ಸುದ್ದಿಯಲ್ಲಿರುವ 40% ಗುತ್ತಿಗೆ ಕಮಿಷನ್, ಪಿಎಸ್ಐ ನೇಮಕಾತಿ ಹಗರಣ ಸೇರಿದಂತೆ ಆಡಳಿತ ಪಕ್ಷ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೇ ತಮ್ಮ ಪಕ್ಷದ ಸಂಘಟನೆ ಹಾಗೂ 2023ರ ವಿಧಾನಸಭಾ ಚುನಾವಣೆ ತಯಾರಿಗೆ ಬಗ್ಗೆಯೂ ಮಾತನಾಡಿದ್ದಾರೆ.