ಡಿಸೆಂಬರ್‌ನಲ್ಲಿ ‘ವಿನಯ ಸಾಮರಸ್ಯ’ ಸಮಾವೇಶ: ಕೋಟ ಶ್ರೀನಿವಾಸ ಪೂಜಾರಿ ಘೋಷಣೆ

ಕೋಟ ಶ್ರೀನಿವಾಸ ಪೂಜಾರಿ
  • ಸಮಾವೇಶ ಹಮ್ಮಿಕೊಳ್ಳುವ ಸ್ಥಳ ಮತ್ತು ದಿನಾಂಕ ಸದ್ಯದಲ್ಲಿಯೇ ನಿಗದಿ
  • ಅಸ್ಪೃಶ್ಯತೆ ನಿವಾರಣೆ ಕುರಿತು ಪರಿಶಿಷ್ಟೇತರರಲ್ಲಿ ಜಾಗೃತಿಗೆ ಯೋಜನೆ

“ಅಸ್ಪೃಶ್ಯತೆ ನಿವಾರಣೆಗಾಗಿ ರೂಪಿಸಲಾಗಿರುವ ʼವಿನಯ ಸಾಮರಸ್ಯʼ ವಿನೂತನ ಯೋಜನೆಯ ಬೃಹತ್ ಸಮಾವೇಶವನ್ನು ಡಿಸೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವುದು” ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿನಯ ಸಾಮರಸ್ಯ ಯೋಜನೆಗೆ ಚಾಲನಾ ಸಮಾವೇಶ ಸಂಬಂಧ ಗುರುವಾರ ಇಲಾಖೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.

“ಅಸ್ಪೃಶ್ಯತೆ ನಿವಾರಣೆಗಾಗಿ ಇಲಾಖೆಯಿಂದ ರೂಪಿಸಿರುವ ವಿನಯ ಸಾಮರಸ್ಯ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಬೇಕಿದ್ದು, ಡಿಸೆಂಬರ್ ತಿಂಗಳ ಎರಡನೇ ವಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ಸಿದ್ಧತೆ ಕೈಗೊಳ್ಳಿ” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

“ಅಸ್ಪೃಶ್ಯತೆಯಂತಹ ಅನಿಷ್ಠ ಪದ್ಧತಿಯನ್ನು ಅನುಭವಿಸುವವರಿಗಿಂತ ಅನುಸರಿಸುವವರಿಗೆ ಜಾಗೃತಿ ಮೂಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟೇತರ ಸಮುದಾಯಗಳ ಧುರೀಣರು, ಮಠಾಧಿಪತಿಗಳು, ಧಾರ್ಮಿಕ ಮುಖಂಡರನ್ನು ಸಮಾವೇಶಕ್ಕೆ ಆಹ್ವಾನಿಸಬೇಕು. ಈ ಮೂಲಕ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯ ಜಾಗೃತಿ ಸಮಾವೇಶ ಅರ್ಥಪೂರ್ಣವಾಗಿ ಯಶಸ್ವಿಯಾಗಬೇಕು” ಎಂದು ನಿರ್ದೇಶನ ನೀಡಿದ್ದಾರೆ.

“ಬೆಂಗಳೂರು ಅಥವಾ ಕೊಪ್ಪಳದಲ್ಲಿ ಸಮಾವೇಶ ಹಮ್ಮಿಕೊಳ್ಳುವ ಬಗ್ಗೆ ಸದ್ಯದಲ್ಲೆ ಸ್ಥಳ ಮತ್ತು ದಿನಾಂಕ ಅಂತಿಮಗೊಳಿಸಲಾಗುವುದು. ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ವಿನಯ ಸಾಮರಸ್ಯ’ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ” ಎಂದು ತಿಳಿಸಿದ್ದಾರೆ.

“ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲೂ ಈ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕಿದ್ದು, ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಚಾಲನಾ ಸಮಾವೇಶ ಅರ್ಥಪೂರ್ಣ ಕಾರ್ಯಕ್ರಮವಾಗಿಸುವ ಮೂಲಕ ಯಶಸ್ವಿಗೊಳಿಸಲು ಶ್ರಮಿಸಬೇಕು” ಎಂದು ಸೂಚಿಸಿದ್ದಾರೆ.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಪಿ ಮಣಿವಣ್ಣನ್, ಇಲಾಖೆ ಸಲಹೆಗಾರ ಇ ವೆಂಕಟಯ್ಯ, ಇಲಾಖೆ ಆಯುಕ್ತ ಡಾ. ಕೆ ರಾಕೇಶ ಕುಮಾರ್, ಸಚಿವರ ಆಪ್ತ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿ ಓದಿದ್ದೀರಾ ? ಎಸ್‌ಸಿ, ಎಸ್‌ಟಿ ನಿರುದ್ಯೋಗಿ ಯುವಜನರಿಗೆ 28 ಸಾವಿರ ದ್ವಿಚಕ್ರ ವಾಹನ ವಿತರಣೆ ಗುರಿ: ಕೋಟ ಶ್ರೀನಿವಾಸ ಪೂಜಾರಿ

ಏನಿದು ‘ವಿನಯ ಸಾಮರಸ್ಯ’ ಯೋಜನೆ?

2021ರ ಸೆಪ್ಟೆಂಬರ್ ತಿಂಗಳಲ್ಲಿ ಕೊಪ್ಪಳ ಜಿಲ್ಲೆ ಮಿಯಾಪುರದಲ್ಲಿ ದಲಿತ ಸಮುದಾಯದ ನಾಲ್ಕು ವರ್ಷದ ಬಾಲಕ ವಿನಯ, ಮಾರುತಿ ದೇವಸ್ಥಾನ ಪ್ರವೇಶಿಸಿದ್ದರಿಂದ ಗ್ರಾಮದ ಬಲಿಷ್ಟ ಜಾತಿಯವರು ಬಾಲಕನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಿ ಊರಿಂದ ಬಹಿಷ್ಕರಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.

ಸುದ್ದಿ ತಿಳಿದ ಜಿಲ್ಲಾಡಳಿತ ಮತ್ತು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಅಲ್ಲದೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ವಿನಯ ಹೆಸರಿನಲ್ಲಿ ಅಸ್ಪೃಶ್ಯತೆ ನಿವಾರಣೆಯ ‘ವಿನಯ ಸಾಮರಸ್ಯ’ ಯೋಜನೆಯನ್ನು ಸರ್ಕಾರ ಘೋಷಿಸಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180