ಬಿಜೆಪಿ ಭ್ರಷ್ಟಾಚಾರದ ವಿರಾಟ್ ರೂಪ ಬಹಿರಂಗವಾಗಿದೆ: ಪ್ರಿಯಾಂಕ ಖರ್ಗೆ

  • ಅಕ್ರಮದಿಂದ ಬಡವರ್ಗದ ಹಾಗೂ ಯೋಗ್ಯ ಯುವಜನರಿಗೆ ಅನ್ಯಾಯ
  • "ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ್ತ ಪಡುವುದೇ ಬಿಜೆಪಿ"

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲಾ ಒಂದು ಹಗರಣಗಳು ದಿನಂಪ್ರತಿ ಬೆಳಕಿಗೆ ಬರುತ್ತಲೇ ಇವೆ. ಈ ಮೂಲಕ ಬಿಜೆಪಿ ಭ್ರಷ್ಟಾಚಾರದ ವಿರಾಟ್ ರೂಪ ಹಾಗೂ ಲಂಚಕೋರ ಆಡಳಿತವು ಬಹಿರಂಗಗೊಂಡಿವೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ. 

ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಅವರು, "ಪಿಎಸ್‌ಐ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ರಾಜ್ಯದ ಸಾವಿರಾರು ಯುವಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಇತ್ತೀಚಿಗೆ ನಡೆದ ಕೆಪಿಟಿಸಿಎಲ್‌ ಪರೀಕ್ಷೆಯಲ್ಲಿ ಆಗಿರುವ ಅಕ್ರಮಕ್ಕೆ ಯಾವುದೇ ಶಿಕ್ಷೆ ನೀಡಿದರೂ ಕಮ್ಮಿಯೇ. ಲಂಚ ಪಡೆದು ಪರೀಕ್ಷೆಯಲ್ಲಿ ಅಕ್ರಮವಾಗಿ ಉಳ್ಳವರಿಗೆ ಉದ್ಯೋಗ ನೀಡುವ ಮೂಲಕ ವ್ಯವಸ್ಥಿತವಾಗಿ ಬಡವರ್ಗದ ಹಾಗೂ ಯೋಗ್ಯ ಯುವಜನರಿಗೆ ಅನ್ಯಾಯ ಮಾಡಲಾಗಿದೆ" ಎಂದು ಆರೋಪಿಸಿದ್ದಾರೆ. 

"ಉದ್ಯೋಗಕ್ಕಾಗಿ ಬಂದ ಯುವತಿಗೆ ಈ ಸರ್ಕಾರದ ಮಂತ್ರಿ ಮೋಸ ಮಾಡಿ, ಸಿಕ್ಕಿ ಬಿದ್ದು ರಾಜೀನಾಮೆ ನೀಡಬೇಕಾಯಿತು. ಆದರೆ ಅವರಿಂದ ಯಾವೊಬ್ಬ ಬಿಜೆಪಿ ನಾಯಕರೂ ಕ್ಷಮೆ ಕೇಳಿಸಲಿಲ್ಲ. ಕೇಂದ್ರ ಮಂತ್ರಿಯೊಬ್ಬರ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಆತ ವಿಡಿಯೋದಲ್ಲಿದ್ದ ಹೆಣ್ಣನ್ನು ತೃಣವಾಗಿ ಕಂಡಿದ್ದರು. ಅವರ ಬಳಿ ಬಿಜೆಪಿಯ ಯಾರೊಬ್ಬರೂ ಕ್ಷಮೆಗೆ ಆಗ್ರಹಿಸಲಿಲ್ಲ" ಎಂದು ಕಿಡಿಕಾರಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಚಾಮರಾಜಪೇಟೆ ಮೈದಾನದಲ್ಲಿ ಪ್ರತಿವರ್ಷ ಧ್ವಜಾರೋಹಣ: ಸಚಿವ ಆರ್ ಅಶೋಕ್

"ಬಿಜೆಪಿ, ಹೆಣ್ಣು ಮಕ್ಕಳಿಗೆ ನಿಜವಾಗಿ ಅಪಮಾನ ಮಾಡಿರುವ ತನ್ನೆಲ್ಲಾ ನಾಯಕರ ಬಳಿ ರಾಜೀನಾಮೆ ಪಡೆದು ರಾಜ್ಯದ ಮಹಿಳಾ ಸಮುದಾಯಕ್ಕೆ ಎಸಗಿದ ಅವಮಾನಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕೆಲಸ ಮಾಡಲಿದೆಯಾ? ಇದಕ್ಕೆ ಸಕಾರಾತ್ಮಕ ರೀತಿಯಲ್ಲಿ ಬಿಜೆಪಿಯಿಂದ ಉತ್ತರವನ್ನು ನಿರೀಕ್ಷಿಸಬಹುದೇ" ಎಂದು ಅವರು ಪ್ರಶ್ನಿಸಿದ್ದಾರೆ.

"ಸರ್ಕಾರದ ಅನಿಷ್ಟ ಆಡಳಿತಕ್ಕೆ ಅವರ ಕಾರ್ಯಕರ್ತರೇ 'ಜನಾಕ್ರೋಶ' ರೂಪಿಸಿ ಇವರ ಜನೋತ್ಸವಕ್ಕೆ ಬ್ರೇಕ್ ಹಾಕಿದ್ದಾರೆ. ಇನ್ನು ಈಗಷ್ಟೇ ಬಿಜೆಪಿ ಸರ್ಕಾರದ ಮಂತ್ರಿಯೊಬ್ಬರು, 'ಬಿಜೆಪಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಬದಲಿಗೆ ಮ್ಯಾನೇಜ್ಮೆಂಟ್ ನಡೆಸುತ್ತಿದೆ' ಎಂದು ಹೇಳಿದ್ದ ಆಡಿಯೋ ವೈರಲ್‌ ಆಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್