ರಾಹುಲ್ ಗಾಂಧಿಗೆ ‘ಇಷ್ಟಲಿಂಗ’ ದೀಕ್ಷೆ ನೀಡಿದಾಕ್ಷಣ, ಅದು ಮತಾಂತರವಲ್ಲ: ಮುರುಘಾ ಮಠದ ಸ್ಪಷ್ಟೀಕರಣ

'ನಮ್ಮ ಮಠದಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ತ್ರಿವಿಧ ಲಿಂಗ ದೀಕ್ಷೆಯನ್ನು ನೀಡಲಾಗಿದ್ದು, ಮುಸ್ಲಿಮರು, ಕ್ರೈಸ್ತರು ಒಳಗೊಂಡಂತೆ ಎಲ್ಲರೂ ಇಷ್ಟಲಿಂಗವನ್ನು ಕಟ್ಟಿಕೊಳ್ಳುತ್ತಾರೆ' ಎಂದು ಮುರುಘಾ ಮಠದವರು ಮಾಹಿತಿ ನೀಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ ಕಳೆದ ವಾರ ದಾವಣಗೆರೆಯಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಅದೇ ದಿನ (ಆ.3) ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರಿಂದ ಲಿಂಗದೀಕ್ಷೆ ಪಡೆದಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಜತೆಗೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ರಾಜೇಂದ್ರ ಮಠಕ್ಕೆ ಭೇಟಿ ನೀಡಿದ ರಾಹುಲ್, 'ರಾಜ್ಯದಲ್ಲಿ ಅತ್ಯಂತ ದೊಡ್ಡ ಸಮುದಾಯವೆಂದು ಬಿಂಬಿಸಲಾಗಿರುವ ಲಿಂಗಾಯತ ಸಮುದಾಯದ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಮುರುಘಾ ಶ್ರೀಗಳಿಂದ ಇಷ್ಟಲಿಂಗ ದೀಕ್ಷೆ ಪಡೆದಿದ್ದಾರೆ' ಎಂದು ಚರ್ಚೆಗಳು ನಡೆಯುತ್ತಿವೆ.  

"ಲಿಂಗಾಯತ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ ಮಾತ್ರ ನಾಮಕರಣದ ಸಮಯದಲ್ಲಿ ಇಷ್ಟಲಿಂಗ ದೀಕ್ಷೆಯನ್ನು ನೀಡಲಾಗುತ್ತದೆ" ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು 'ಸಾರ್ವತ್ರಿಕ ಶಕ್ತಿಯ ಸುತ್ತಲೂ ಸುತ್ತುವ ಲಿಂಗಾಯತ ತತ್ವವನ್ನು ಒಪ್ಪಿಕೊಳ್ಳುವ ಯಾವುದೇ ವ್ಯಕ್ತಿ, ಯಾವುದೇ ಸಂದರ್ಭದಲ್ಲಿ ಲಿಂಗ ಧರಿಸಬಹುದು ಮತ್ತು ಸಮಾನತೆ ಹಾಗೂ ಜಾತ್ಯತೀತ ಮೌಲ್ಯಗಳ ಮೇಲೆ ನಂಬಿಕೆ ಇರುವವರು ಕೂಡ ಲಿಂಗ ಧರಿಸಬಹುದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿ ಅವರ ಲಿಂಗದೀಕ್ಷೆ ವಿಚಾರ ರಾಜಕೀಯ ಚರ್ಚೆಗೂ ಕಾರಣವಾಗಿದೆ. "ಇದೊಂದು ರಾಜಕೀಯ ಗಿಮಿಕ್‌ ಆಗಿದೆ. ಲಿಂಗಾಯತ ಸಮುದಾಯವು ಬಿಜೆಪಿ ಪಕ್ಷವನ್ನು ಹೆಚ್ಚು ಬೆಂಬಲಿಸುತ್ತಾ ಬಂದಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.17%ರಷ್ಟಿರುವ ಈ ಸಮುದಾಯ, ಕರ್ನಾಟಕದ ಅತಿ ದೊಡ್ಡ ಸಮುದಾಯವೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ನಾವೇ ನಿರ್ಣಾಯಕ ಎಂದು ಬೀಗುತ್ತಿದೆ. ಇದೇ ಕಾರಣಕ್ಕೆ ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ದಾವಣಗೆರೆ ದಾಟಿ ರಾಹುಲ್ ಮುರುಘಾ ಮಠಕ್ಕೆ ಭೇಟಿ ನೀಡಿದ್ದಾರೆ" ಎಂಬ ಮಾತುಗಳು ಕೇಳಿಬರುತ್ತಿವೆ.

2013ರ ಚುನಾವಣೆಯಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾದ ಯಡಿಯೂರಪ್ಪನವರನ್ನು ಬಿಜೆಪಿ ಪಕ್ಷ ದೂರವಿಟ್ಟಿತ್ತು. ಫಲಿತಾಂಶದ ನಂತರ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚಿ ಹೋಗಿತ್ತು. 2018ರ ಚುನಾವಣೆಯಲ್ಲಿ ಯಡಿಯೂರಪ್ಪನವರು ಮರಳಿ ಬೆಜೆಪಿ ಪಕ್ಷಕ್ಕೆ ಬಂದು, ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವಂತಾಯಿತು. ಲಿಂಗಾಯತ ಸಮುದಾಯವನ್ನು ಬಿಜೆಪಿಯಿಂದ ದೂರವಿಡುವ ಉದ್ದೇಶದಿಂದ ಕಾಂಗ್ರೆಸ್‌ ನಡೆಸಿದ ಪ್ರತ್ಯೇಕ ಧರ್ಮದ ಪ್ರಯತ್ನ ವಿಫಲವಾಯಿತು. 

"2018ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಗಿರುವ ಹಿನ್ನಡೆ ಬಗ್ಗೆ ಅರಿತಿರುವ ರಾಹುಲ್, 2023ರ ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಲಿಂಗಾಯತ ಮಠಗಳಿಗೆ ಭೇಟಿ ನೀಡಿ, 'ಓಟ್‌ ಬ್ಯಾಂಕ್‌' ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣಾ ಸಮಯದಲ್ಲಿ ಮಾತ್ರ ತಾವು ಹಿಂದೂ ಪರವಾಗಿದ್ದೇನೆ ಎಂದು ತೋರಿಸಿಕೊಳ್ಳಲು ದೇವಸ್ಥಾನಗಳಿಗೆ ಭೇಟಿ ನೀಡಿ, ತಮ್ಮನ್ನು ತಾವು "ಶಿವ ಭಕ್ತ" ಎಂದು ಕರೆಸಿಕೊಳ್ಳುವುದರಲ್ಲಿ ರಾಹುಲ್ ನಿಸ್ಸೀಮರು" ಎಂಬ ಟೀಕೆ ವ್ಯಕ್ತವಾಗಿತ್ತು.

ಇಷ್ಟಲಿಂಗ ದೀಕ್ಷೆ ಎಂದರೇನು? ಲಿಂಗ ಧರಿಸಲು ಅರ್ಹತೆ ಏನು? 

ಲಿಂಗಾನಂದ ಸ್ವಾಮಿಗಳು ಮತ್ತು ಡಾ|| ಮಾತೆ ಮಹಾದೇವಿ ಅವರ 'ಲಿಂಗಾಯತ ರಿಲಿಜಿಯನ್‌' ಎನ್ನುವ ವೆಬ್‌ಸೈಟ್‌ನಲ್ಲಿ, 'ಇಷ್ಟಲಿಂಗ ದೀಕ್ಷಾ ಸಂಸ್ಕಾರ'ದ ಬಗ್ಗೆ ಈ ರೀತಿ ಉಲ್ಲೇಖಿಸಿದ್ದಾರೆ. "ಪ್ರತಿಯೊಬ್ಬ ಮಾನವನು ಸುಖದ ಅನ್ವೇಷಣೆಯಲ್ಲಿರುತ್ತಾನೆ. ಆದರೆ, ಸುಖದ ಮೂಲವು ಯಾವುದು? ಎಂದು ಹುಡುಕುತ್ತಾ ಹೋಗುತ್ತಾನೆ. ವಿವಿಧ ಸ್ತರಗಳಲ್ಲಿ ಸಿಗಬಹುದಾದ ಸುಖ, ಸಂತೋಷ ಮತ್ತು ಆನಂದಗಳಲ್ಲಿ, ಆನಂದವೇ ಪರಮಸುಖವೆಂದು ಮನುಷ್ಯನು ತಿಳಿದುಕೊಂಡ ಮೇಲೆ ನಿಜವಾದ ಸುಖವು ಪಾರಮಾರ್ಥಿಕ ಮೌಲ್ಯಗಳಲ್ಲಿ ಅಡಗಿದೆ ಎಂದು ತಿಳಿದುಕೊಂಡು, ಅದರ ಸಾಧನೆಗಾಗಿ ಗಮನ ಹರಿಸುತ್ತಾನೆ. ಇದೇ ಸಾಧನೆಯ ಮೊದಲನೆಯ ಮೆಟ್ಟಿಲಿನ ಧರ್ಮ ಸಂಸ್ಕಾರ" ಎಂದು ಹೇಳಿದ್ದಾರೆ.

ಜೊತೆಗೆ, "ಧರ್ಮವನ್ನು ಒಂದು ಬೃಹತ್ ಭವನಕ್ಕೆ ಹೋಲಿಸಿದರೆ, ಧರ್ಮ ಸಂಸ್ಕಾರವು ಆ ಭವನದ ಪ್ರವೇಶ ದ್ವಾರವಿದ್ದಂತೆ. ಪ್ರತಿಯೊಂದು ಧರ್ಮವೂ ತನ್ನದೇ ಆದ ಧರ್ಮ ಸಂಸ್ಕಾರದ ಮೂಲಕ ವ್ಯಕ್ತಿಯನ್ನು ಒಳಗೆ ಇಂಬಿಟ್ಟುಕೊಳ್ಳುತ್ತದೆ. ಅದೇ ರೀತಿ ಲಿಂಗಾಯತ ಧರ್ಮದ ಪ್ರಮುಖ ಸಂಸ್ಕಾರವೇ ಇಷ್ಟಲಿಂಗ ದೀಕ್ಷೆ; ಪ್ರವೇಶ ಪತ್ರವೇ ಇಷ್ಟಲಿಂಗ. ಆದ್ದರಿಂದಲೇ ಬಸವ ಧರ್ಮದಲ್ಲಿ ಕಡ್ಡಾಯವಾಗಿ ಪ್ರತಿಯಾಬ್ಬರೂ 14-15 ವರ್ಷಕ್ಕೆ ದೀಕ್ಷೆ ಪಡೆದುಕೊಂಡು ಗುರುಪುತ್ರರಾಗಬೇಕೆಂಬ ನಿಯಮವಿದೆ. ಲಿಂಗಧಾರಣಿ ಬೇರೆ, ಲಿಂಗದೀಕ್ಷೆ ಬೇರೆ. ಹುಟ್ಟಿದಾಗ ಇಷ್ಟಲಿಂಗವನ್ನು ಕಟ್ಟುವ ವಿಧಿಯೇ ಲಿಂಗಧಾರಣಿ" ಎಂಬ ವಿವರಗಳಿವೆ.

14-15 ವರ್ಷಗಳ ನಂತರ ಮಗುವು ಬಾಲ್ಯಾವಸ್ಥೆಯನ್ನು ತೊರೆದು ತಾರುಣ್ಯಕ್ಕೆ ಕಾಲಿಡುವಾಗ, ಸದ್ಗುರುವಿನಿಂದ ಲಿಂಗದೀಕ್ಷೆ ಮಾಡಿಸಬೇಕು. ಲಿಂಗಧಾರಣಿ ನಿಶ್ಚಯ ಕಾರ್ಯದಂತಿದ್ದರೆ, ಲಿಂಗದೀಕ್ಷೆಯು ಲಗ್ನ ಕಾರ್ಯವಿದ್ದಂತೆ. ಆದ್ದರಿಂದ ಪ್ರತಿಯೊಬ್ಬರೂ ದೀಕ್ಷೆಯೆಂಬ ಆಧ್ಯಾತ್ಮಿಕ ಲಗ್ನವನ್ನು ಮಾಡಿಕೊಂಡು ಲಿಂಗಪತಿಯಾದೊಡನೆ ಶರಣ ಸತಿಯಾಗಿ, ಲಿಂಗ ಭೋಗೋಪಭೋಗವೆಂಬ ಸಂಸಾರವನ್ನು ಮಾಡಿ ದೇವನನ್ನು ಸೇರಬೇಕು" ಎಂದು ದಾಖಲಿಸಲಾಗಿದೆ. 

ಲಿಂಗಾಯತ ಪಂಥದ ವೆಬ್‌ಸೈಟ್‌ನ ಪ್ರಕಾರ "ಇಷ್ಟಲಿಂಗವನ್ನು ಕಟ್ಟುವುದನ್ನು ಲಿಂಗಾಯತ ಸಮುದಾಯದ ಮುಖ್ಯ ಪ್ರಮುಖ ಆಚರಣೆಯಾಗಿದ್ದು, ಇದನ್ನು ಶ್ರೀಮಂತರು, ಬಡವರು, ಪುರುಷರು, ಮಹಿಳೆಯರು, ಅಧಿಕಾರಿ, ಗುಮಾಸ್ತರು, ಕಪ್ಪು, ಬಿಳಿ ಎನ್ನುವ ಯಾವುದೇ ಭೇದವಿಲ್ಲದೆ ಇಷ್ಟಲಿಂಗ ದೀಕ್ಷೆಯಿಂದ ಲಿಂಗಾಯತರಾಗಬಹುದು" ಎಂದು ಬರೆದುಕೊಂಡಿದೆ. 

ವಿದ್ವಾಂಸರಾದ ಡಾ. ಬಸವರಾಜ ಬಳ್ಳೂರು ಅವರ 'ಬಸವಣ್ಣನವರ ಬೋಧನೆಗಳು" ಹೇಳುವಂತೆ, "ಇಷ್ಟಲಿಂಗ ದೀಕ್ಷೆಗೆ ಹಿಂದಿನಷ್ಟು ಮಹತ್ವವಿಲ್ಲ. “ಈಗ ಯಾರು ಬೇಕಾದರೂ ಅದನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ ಶರಣ (ಸಾಮಾಜಿಕ-ಧಾರ್ಮಿಕ) ಚಳವಳಿ ಪ್ರಾರಂಭವಾದಾಗ, ಲಿಂಗಾಯತರಾಗಿ ಹುಟ್ಟದ ಅನೇಕ ಜನರು ಲಿಂಗವನ್ನು ಕಟ್ಟಿದರು. ಆದರೆ ಕೇವಲ ಲಿಂಗ ಕಟ್ಟುವುದರಿಂದ ಒಬ್ಬ ವ್ಯಕ್ತಿ ಲಿಂಗಾಯತನಾಗುವುದಿಲ್ಲ. ಲಿಂಗ ಕಟ್ಟದೆಯೂ ಲಿಂಗಾಯತರಾಗಬಹುದು. ಒಬ್ಬ ಮನುಷ್ಯ ಲಿಂಗಾಯತ ತತ್ವಗಳನ್ನು ಅನುಸರಿಸಿದರೆ, ಅವರು ಲಿಂಗಾಯತರು ”ಎಂದು  ಹೇಳಿದ್ದಾರೆ. 

ಹೀಗೆ ಲಿಂಗ ದೀಕ್ಷೆ ಬಗ್ಗೆ, ಲಿಂಗಾಯತರಾಗುವ ಪ್ರಕ್ರಿಯೆ ಬಗ್ಗೆ ಹಲವರು ಹಲವು ರೀತಿಯ ಸಿದ್ಧಾಂತ, ವಾದಗಳನ್ನು ಮಂಡಿಸಿದ್ದಾರೆ. 

ಇಷ್ಟೆಲ್ಲ ಸುದ್ದಿಗಳು ರಾಜ್ಯಾದ್ಯಂತ ಚರ್ಚೆಗೆ ಬಂದು, ಇದರ ಪರ ಮತ್ತು ವಿರೋಧವಾಗಿ ಸಾಕಷ್ಟು ವಾದ ವಿವಾದಗಳು ನಡೆಯುತ್ತಿವೆ. ಈ ದಿನ.ಕಾಮ್ ತಂಡವು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಜಯಣ್ಣ ಮತ್ತು ಮಠದಲ್ಲಿ ವಿದ್ಯಾಭ್ಯಾಸ ಮಾಡಿ, ಪ್ರಸ್ತುತ ವನಕಲ್ಲು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ಡಾ. ಬಸವ ರಮಾನಂದ ಮಹಾಸ್ವಾಮಿಗಳನ್ನು ಮಾತನಾಡಿಸಿ ಇದರ ಬಗ್ಗೆ ಮಠದ ನಿಲುವೇನು ಎನ್ನುವ ಮಾಹಿತಿಯನ್ನು ಪಡೆದುಕೊಂಡಿತು.

"ರಾಹುಲ್‌ ಗಾಂಧಿ ಶ್ರೀಮಠಕ್ಕೆ ಭೇಟಿ ನೀಡುವುದು ಪೂರ್ವ ನಿಯೋಜಿತ ಕಾರ್ಯಕ್ರಮವಾಗಿತ್ತು. ರಾಹುಲ್‌ ಮಠಕ್ಕೆ ಭೇಟಿ ನೀಡುತ್ತಾರೆಂದು ಕಾಂಗ್ರೆಸ್‌ನಿಂದ ನಮಗೆ ಅಧಿಕೃತ ಮಾಹಿತಿ ಬಂದಿತ್ತು. ಅದರಂತೆ ನಾವು ಮಠದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆವು" ಎಂದು ಬಸವ ರಮಾನಂದ ಶ್ರೀಗಳು ಮಾಹಿತಿ ನೀಡಿದರು.

"ಶಿವಮೂರ್ತಿ ಮುರುಘಾ ರಾಜೇಂದ್ರ ಶರಣರು ರಾಹುಲ್ ಅವರಿಗೆ ಪೀಠದ ಬಗ್ಗೆ ಮಾಹಿತಿ ನೀಡುತ್ತಾ, ಶಿವಯೋಗದ ಪ್ರಾತ್ಯಕ್ಷಿಕೆ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಷ್ಟಲಿಂಗದ ಬಗ್ಗೆ ಪ್ರಸ್ತಾಪವಾಯಿತು. ಇಷ್ಟಲಿಂಗವು ವೈಜ್ಞಾನಿಕವಾದದ್ದು ಎಂದಾಗ, ರಾಹುಲ್‌ ಗಾಂಧಿ ಅವರು ಇಷ್ಟಲಿಂಗದ ಬಗ್ಗೆ ಹೆಚ್ಚು ಮಾಹಿತಿ ಕೇಳಿದರು. ಆಗ, ತ್ರಿವಿಧ ಲಿಂಗಗಳ ಮಾಹಿತಿ ನೀಡುತ್ತಾ, 'ಇಷ್ಟಲಿಂಗ- ಸ್ಥೂಲ', 'ಭಾವಲಿಂಗ-ಕಾರಣ', 'ಪ್ರಾಣಲಿಂಗ–ಸೂಕ್ಷ್ಮ' ಎನ್ನುವ ಮೂರು ಲಿಂಗಗಳು ನಮ್ಮ  ಶರೀರವನ್ನು ಒಳಗೊಂಡಿರುತ್ತದೆ" ಎಂದು ಮಾಹಿತಿ ನೀಡಿದರು.  

"ನಾನು ಕೂಡ ಇದರ ಅಭ್ಯಾಸ ಮಾಡಬಹುದಾ" ಎಂದು ರಾಹುಲ್ ಕೇಳಿದರು. ಆಗ ಸ್ವಾಮೀಜಿಯವರು "ಲಿಂಗವು ಯಾವುದೇ ಒಂದು ಜಾತಿಯ ಕುರುಹಲ್ಲ, ಇದು ಸರ್ವ ಜನಾಂಗದವರು ಧರಿಸಿಕೊಳ್ಳುವಂಥದ್ದು" ಎಂದು ಹೇಳಿ, ಇಷ್ಟಲಿಂಗದ ಬಗ್ಗೆ ವಿವರಣೆ ನೀಡಿ ಅದನ್ನು ಅವರ ಕೊರಳಿಗೆ ಕಟ್ಟಿದರು" ಎಂದು ಬಸವ ರಮಾನಂದ ಸ್ವಾಮಿಗಳು ಹೇಳಿದರು.

"ಇಷ್ಟಲಿಂಗ ಧಾರಣೆ ಎಂದರೆ, ಹಳದಿ ಚೀಲವೊಂದರಲ್ಲಿ ಚಿಕ್ಕದಾದ ಲಿಂಗವನ್ನು ಇಟ್ಟು, ಅದನ್ನು ಒಂದು ಬಿಳಿಯ ದಾರದಲ್ಲಿ ಬಿಗಿಯಾಗಿ ಕಟ್ಟಿ ದೀಕ್ಷೆ ಪಡೆಯುವವರ ಕೊರಳಿಗೆ ಕಟ್ಟುತ್ತಾರೆ" ಎಂದು ಅವರು ಮಾಹಿತಿ ನೀಡಿದರು. 

"ಇಷ್ಟಲಿಂಗ ಪೂಜೆಯ ವಿಧಿವಿಧಾನದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದೆ ಎಂದು ರಾಹುಲ್‌ ಗಾಂಧಿ ಹೇಳಿ, ಯಾರನ್ನಾದರೂ ದೆಹಲಿಗೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಕಾಂಗ್ರೆಸ್‌ ನಾಯಕರು ಇದರ ಬಗ್ಗೆ ಮತ್ತೆ ಪ್ರಸ್ತಾಪಿಸಿದರೆ, ಅವರ ಆಸಕ್ತಿಯ ಮೇರೆಗೆ ಕಳುಹಿಸಲಾಗುತ್ತದೆ" ಎಂದು ಅವರು ಸ್ಪಷ್ಟನೆ ನೀಡಿದರು.

"ಇಷ್ಟಲಿಂಗವು ಧ್ಯಾನವಿದ್ದ ಹಾಗೆ, ಇದಕ್ಕೆ ಪರಿಶುದ್ದತೆಯೇ ನಿಜವಾದ ನಿಯಮ. ಯಾವುದೇ ಜಾತಿಯ, ಧರ್ಮದ ಹಾಗೂ ಆಹಾರ ಪದ್ಧತಿಯ ಯಾವುದೇ ಕ್ರಮ ಇದರಲ್ಲಿ ಇಲ್ಲ. ನಾವುಗಳು ಬಹಿರಂಗದ ಸೌಂದರ್ಯವನ್ನು ತಿದ್ದಿಕೊಳ್ಳಲು, ಕನ್ನಡಿಯನ್ನು ಹೇಗೆ ಬಳಸುತ್ತೇವೆಯೋ, ಅದರಂತೆ ಅಂತರಂಗದ ಸೌಂದರ್ಯವನ್ನು ತಿದ್ದಿಕೊಳ್ಳಲು, ಇಷ್ಟಲಿಂಗ ಎನ್ನುವ ಕನ್ನಡಿಯ ಅವಶ್ಯವಿದೆ. ಇಷ್ಟಲಿಂಗವೆಂಬುದು ಸಾಧನೆಯ ಮತ್ತು ಸಾಧಕನ ಕುರುಹು" ಎಂದು ಹೇಳಿದರು.

"ನಮ್ಮ ಮಠದಲ್ಲಿ ಎಲ್ಲ ಸಮುದಾಯದ ವಿದ್ಯಾರ್ಥಿಗಳಿದ್ದು ಅವರೆಲ್ಲರಿಗೂ ತ್ರಿವಿಧ ಲಿಂಗ ದೀಕ್ಷೆಯನ್ನು ನೀಡಲಾಗಿದ್ದು, ಮುಸ್ಲಿಮರು, ಕ್ರೈಸ್ತರು ಒಳಗೊಂಡಂತೆ ಎಲ್ಲರೂ ಇಷ್ಟಲಿಂಗವನ್ನು ಕಟ್ಟಿಕೊಳ್ಳುತ್ತಾರೆ" ಎಂದು ಮಾಹಿತಿ ನೀಡಿದರು.

"ರಾಹುಲ್ ಗಾಂಧಿ ಅವರಿಗೆ ಇಷ್ಟಲಿಂಗ ದೀಕ್ಷೆ ನೀಡಿದಾಕ್ಷಣ, ಅದು ಮತಾಂತರವಲ್ಲ" ಎಂದು ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಜಯಣ್ಣ ಸ್ಪಷ್ಟನೆ ನೀಡಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್