
- ರಷ್ಯಾ ಸಂಸತ್ನ ಚರ್ಚೆಗಳನ್ನು ಪ್ರಸಾರ ಮಾಡುತ್ತಿದ್ದ ಚಾನೆಲ್
- ರಷ್ಯಾದ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ ಯೂಟ್ಯೂಬ್
ರಷ್ಯಾ ಸಂಸತ್ನ ಕೆಳಮನೆಯಲ್ಲಿ (ಡುಮಾ) ನಡೆಯುತ್ತಿದ್ದ ಕಲಾಪ, ಚರ್ಚೆಗಳ ಪ್ರಸಾರ ಮಾಡುತ್ತಿದ್ದ ಡುಮಾ ಚಾನೆಲ್ ಅನ್ನು ಅಮೆರಿಕ ಮೂಲದ ಯೂಟ್ಯೂಬ್ ನಿರ್ಬಂಧಿಸಿದೆ ಎಂದು ರಷ್ಯಾದ ಅಧಿಕಾರಿಗಳು ಆರೋಪಿಸಿದ್ದಾರೆ.
ಯೂಟ್ಯೂಬ್ ಚಾನಲ್ ನಿರ್ಬಂಧದ ಬಗ್ಗೆ ʼಎಎಫ್ಪಿ' (ಫ್ರಾನ್ಸ್ ಮೀಡಿಯಾ ಏಜೆನ್ಸಿ) ಪತ್ರಕರ್ತರ ತಂಡ ದೃಢಪಡಿಸಿದೆ.
ಡುಮಾ ಚಾನಲ್ 1,45,000ಕ್ಕಿಂತ ಅಧಿಕ ಚಂದಾದಾರರನ್ನು ಹೊಂದಿತ್ತು. ಅದರಲ್ಲಿ ರಷ್ಯಾ ಸಂಸತ್ನಲ್ಲಿ ನಡೆಯುತ್ತಿದ್ದ ಚರ್ಚೆಗಳು ಮತ್ತು ಸಂಸದ, ಶಾಸಕರ ಸಂದರ್ಶನಗಳನ್ನು ಪ್ರಸಾರ ಮಾಡಲಾಗುತ್ತಿತ್ತು ಎಂದು ರಷ್ಯನ್ ಅಧಿಕಾರಿಗಳು ತಿಳಿಸಿದ್ದಾರೆ.
"ಗೂಗಲ್ ಒಡೆತನದ ಯೂಟ್ಯೂಬ್ ಕಂಪನಿಯು ರಷ್ಯಾದ ಹಲವಾರು ನಿಯಮಗಳನ್ನು ಉಲ್ಲಂಘಿಸಿದೆ. ಉಕ್ರೇನ್ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ನಕಲಿ ಸುದ್ದಿಗಳನ್ನು ಹರಡಿದೆ. ಈ ಮೂಲಕ ರಷ್ಯಾ ಸಶಸ್ತ್ರ ಪಡೆಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಖ್ಯಾತಿ ಚಿತ್ರಿಸುತ್ತಿದೆ" ಎಂದು ರಷ್ಯಾದ ಕಮ್ಯುನಿಕೇಶನ್ ವಾಚ್ ಡಾಗ್ ಹೇಳಿದೆ.
ಅಮೆರಿಕವು ರಷ್ಯನ್ನರ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ. ಮಾಹಿತಿಯ ಪ್ರಸರಣದ ಮೇಲೆ ಅಮೆರಿಕ ಏಕಸ್ವಾಮ್ಯ ಸಾಧಿಸಲು ಬಯಸುತ್ತದೆ ಎಂದು ಡುಮಾ ಟಿವಿಯ ಮುಖ್ಯಸ್ಥ ವ್ಯಾಚೆಸ್ಲಾವ್ವೊಲೊಡಿನ್ ದೂರಿದ್ದಾರೆ.
ಯೂಟ್ಯೂಬ್ ತನ್ನ ಭವಿಷ್ಯಕ್ಕೇ ಕೊಡಲಿ ಹಾಕಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಅಭಿಪ್ರಾಯಪಟ್ಟಿದ್ದಾರೆ.
ಡುಮಾ ಎಂದರೇನು?
ರಷ್ಯಾ ಸಂಸತ್ತಿನ ಕೆಳಮನೆಯನ್ನು ಡುಮಾ ಎಂದು ಕರೆಯಲಾಗುತ್ತದೆ. ರಷ್ಯಾ ಕಾಂತ್ರಿಯ ಪರಿಣಾಮವಾಗಿ ರಷ್ಯಾದಲ್ಲಿ ಶಾಸಕಾಂಗ ಅಧಿಕಾರದ ಮೊದಲ ಪ್ರಾತಿನಿಧಿಕ ಘಟಕ ರಚಿಸಲಾಯಿತು. ನಂತರ, 1905ರ ಆಗಸ್ಟ್ 6ರಂದು ಚಕ್ರವರ್ತಿ ನಿಕೋಲಸ್ II ಅವರು ಡುಮಾದ ಸ್ಥಾಪನೆ ಕುರಿತು ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. 1906ರಲ್ಲಿ ಡುಮಾ ರಚನೆಯಾಯಿತು.
ಇದನ್ನು ಓದಿದಿರಾ?: ಪಾಕ್ ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ | ಗಮನಿಸಬೇಕಾದ ಮುಖ್ಯ ಬೆಳವಣಿಗೆಗಳು
ಡುಮಾವು ಭೂಮಾಲೀಕರು, ಕೈಗಾರಿಕಾ ಮಧ್ಯಮ ವರ್ಗದ ಪ್ರತಿನಿಧಿಗಳು, ವ್ಯಾಪಾರಿಗಳು, ಬುದ್ಧಿಜೀವಿಗಳು ಮತ್ತು ರೈತರನ್ನು ಒಳಗೊಂಡಿದೆ. (ಇದು ಭಾರತದ ರಾಜ್ಯಸಭೆಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.) ಡುಮಾದ ಒಟ್ಟು ಚುನಾಯಿತ ಪ್ರತಿನಿಧಿಗಳ ಸಂಖ್ಯೆಯು ವಿವಿಧ ವರ್ಷಗಳಲ್ಲಿ ಏರಿಕೆಯಾಗಿದ್ದು, ಈಗ 525 ಸದಸ್ಯರನ್ನು ಒಳಗೊಂಡಿದೆ.