ದಕ್ಷಿಣ ಕನ್ನಡ | ಸುಬ್ರಮಣ್ಯದಲ್ಲಿ ಅನ್ಯಧರ್ಮೀಯ ವ್ಯಾಪಾರಿಗಳಿಗೆ ನಿರ್ಬಂಧ; ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಮರ್ಥನೆ

DAKSHINA KANNADA
  • ‌ಹಿಂದೂ ಜಾಗರಣ ವೇದಿಕೆಯಿಂದ ಬ್ಯಾನರ್ ಅಳವಡಿಕೆ
  • ಮತ್ತೆ ಮುನ್ನೆಲೆಗೆ ಬಂದ ವ್ಯಾಪಾರ ವಹಿವಾಟು ನಿರ್ಬಂಧ

ಹಿಂದಿನಿಂದಲೂ ಕುಕ್ಕೆ ಸುಬ್ರಮಣ್ಯದಲ್ಲಿ ನಡೆಯುವ ಚಂಪಾಷಷ್ಠಿಗೆ ಹಿಂದೂಯೇತರಿಗೆ ವ್ಯಾಪಾರ ಮಾಡಲು ಅವಕಾಶ ನೀಡುತ್ತಿಲ್ಲ. ಈಗಲೂ ನೀಡುವುದಿಲ್ಲ. ಅನ್ಯ ಧರ್ಮದವರು ಗೊಂದಲ ಮಾಡಿಕೊಳ್ಳಬಾರದು ಎಂದು ಹಿಂದೂ ಸಂಘಟನೆಯವರು ಬ್ಯಾನರ್ ಹಾಕಿರಬಹುದು. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕುಕ್ಕೆ ಸುಬ್ರಮ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್‌ ರಾಮ್‌ ಸುಳ್ಳಿ ಅವರು ಬ್ಯಾನರ್ ಅಳವಡಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರಸಿದ್ದ ಧಾರ್ಮಿಕ ಸ್ಥಳವಾದ ಕುಕ್ಕೆ ಸುಬ್ರಹಣ್ಯದ ಕುಮಾರಾಧಾರ ನದಿಯ ಪ್ರವೇಶದ್ವಾರದ ಬಳಿ ಹಿಂದೂ ಜಾಗರಣ ವೇದಿಕೆಯು ಅನಧಿಕೃತ ಬ್ಯಾನರ್ ಅಳವಡಿಸಿದೆ. 'ಕುಕ್ಕೆ ಸುಬ್ರಹಣ್ಯ ಚಂಪಾಷಷ್ಠಿಯ ಸಂದರ್ಭದಲ್ಲಿ ಈ ಪರಿಸರದಲ್ಲಿ ಅನ್ಯ ಮತೀಯರ ವ್ಯಾಪಾರ ವಹಿವಾಟನ್ನು ನಿಷೇಧಿಸಲಾಗಿದೆ’ ಎಂದು ಬ್ಯಾನರ್‌ನಲ್ಲಿ ಬರೆದಿದೆ. ಈ ಬ್ಯಾನರ್‍‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈದಿನ.ಕಾಮ್ ದೇವಸ್ಥಾನದ ಅಭಿವೃದ್ದಿ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸಿದೆ.

ದೇವಸ್ಥಾನದ ಬಳಿಯಿರುವ ಅನಧಿಕೃತ ಬ್ಯಾನರ್ ತೆರವು ಮಾಡುತ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮೋಹನ್ ರಾಮ್, "ದೇವಸ್ಥಾನದಲ್ಲಿ ಬ್ಯಾನರ್‌ರನ್ನು ನಾವು ಹಾಕಿಲ್ಲ. ಆದ್ದರಿಂದ ಬ್ಯಾನರ್‌ನ್ನು ನಾವು ತೆರವು ಮಾಡುವುದಿಲ್ಲ. ಮುಜರಾಯಿ ಇಲಾಖೆ ಹಾಕಿರುವ ಬ್ಯಾನರ್ ಅಲ್ಲ ಎಂಬುವುದು ನಿಜ. ಆದರೆ, ಇದು ಯಾವುದೋ ಒಂದು ಹಿಂದೂ ಸಂಘಟನೆ ಒಳ್ಳೆಯ ಉದ್ದೇಶದಿಂದ ಅಳವಡಿಸಿದೆ. ಆದ್ದರಿಂದ ಬ್ಯಾನರ್‌ನ್ನು ತೆರವು ಮಾಡುವುದಿಲ್ಲ," ಎಂದರು.

ಈ ಸುದ್ದಿ ಓದಿದ್ದೀರಾ?: ದಕ್ಷಿಣ ಕನ್ನಡ | ಎಸ್‌ಡಿಪಿಐ ಕಚೇರಿ ಜಪ್ತಿ, ಮೊಹರು; ಜಿಲ್ಲಾಧಿಕಾರಿಗೆ ಹೈಕೋರ್ಟ್‌ ನೋಟಿಸ್‌

"ಹಿಂದಿನಿಂದಲೂ ಅನ್ಯ ಧರ್ಮದವರಿಗೆ ಅವಕಾಶ ನೀಡುತ್ತಿಲ್ಲ ಎಂದ ಮೇಲೆ ಈಗ ಬ್ಯಾನರ್‌ ಹಾಕಿ ಮಾಹಿತಿ ನೀಡುವ ಅವಶ್ಯಕತೆ ಏನಿದೆ?. ಇದೆಲ್ಲ ಒಂದು ಗಿಮಿಕ್‌ ಅಷ್ಟೇ. ಮುಜರಾಯಿ ಇಲಾಖೆಯವರು ಈ ಬಗ್ಗೆ ಗಮನಕೊಡಬೇಕಾದ ಅವಶ್ಯಕತೆಯಿದೆ" ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಈ ದಿನ.ಕಾಮ್‌ಗೆ ಹೇಳಿದ್ದಾರೆ.

ಈ ಹಿಂದೆ ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಬ್ಯಾನರ್‌ ಅಳವಡಿಸಲಾಗಿತ್ತು. ಈ ವಿಚಾರ ರಾಜ್ಯಾದ್ಯಂತ ಬಾರಿ ಸದ್ದು ಮಾಡಿತ್ತು. ಪರ-ವಿರೋಧ ಚರ್ಚೆಗಳು ನಡೆದಿತ್ತು. ನಂತರ ದಿನಗಳಲ್ಲಿ ‘ಬ್ಯಾನ್‌ ಬ್ಯಾನರ್‌’‌ ವಿಷಯ ತೆರೆಮರೆಗೆ ಸರಿದಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180