
- ದಲಿತ್ ಸೇವಾ ಸಮಿತಿಯಿಂದ ಕಾಲ್ನಡಿಗೆ ಜಾಥಾ
- 14 ಕಿ.ಮೀ ಪಾದಯಾತ್ರೆ ಮಾಡಿ ಶಾಸಕರಿಗೆ ಮನವಿ
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಯಾವುದೇ ಕಾಮಗಾರಿ ಕೆಲಸ ಪ್ರಾರಂಭ ಮಾಡುವಂತಿಲ್ಲ. ಶಾಸಕರು ಕೂಡಲೇ ವಿಟ್ಲ ಹಾಗೂ ಪುತ್ತೂರಿನ ಅಂಬೇಡ್ಕರ್ ಭವನದ ಶಂಕು ಸ್ಥಾಪನೆ ಕೆಲಸವನ್ನು ಪ್ರಾರಂಭಿಸಬೇಕು. ನಮ್ಮ ಬೇಡಿಕೆಯನ್ನು ಕಡೆಗಣಿಸಿದರೆ ಡಿಸೆಂಬರ್ 14ರಂದು ಶಾಸಕರ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ‘ದಲಿತ ಸೇವಾ ಸಮಿತಿ’ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಕೆ ನೀಡಿದರು.
ವಿಟ್ಲ ಮತ್ತು ಪುತ್ತೂರಿನ ಅಂಬೇಡ್ಕರ್ ಭವನಕ್ಕೆ ಮಂಜೂರಾದ ಜಮೀನಿನಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಆದರೆ, ಕಾಮಗಾರಿ ಆರಂಭವಾಗಿಲ್ಲ. ಎರಡೂ ಭವನಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಕಾಮಗಾರಿ ಅರಂಭಿಸಬೇಕೆಂದು ಒತ್ತಾಯಿಸಿ ‘ದಲಿತ್ ಸೇವಾ ಸಮಿತಿ’ಯು ವಿಟ್ಲದಿಂದ ಪುತ್ತೂರು ಶಾಸಕ ಸಂಜೀವ ಮಠoದೂರು ಕಚೇರಿಯವರೆಗೆ ಪಾದಯಾತ್ರೆ ನಡೆಸಿ, ಹಕ್ಕೊತ್ತಾಯ ಸಲ್ಲಿಸಿದೆ.
ಈ ಸುದ್ದಿ ಓದಿದ್ದೀರಾ?: ಸುರತ್ಕಲ್ ಟೋಲ್ಗೇಟ್ | ಬಾಯಿ ಮಾತು, ಟ್ವೀಟ್, ಪೋಸ್ಟ್ಗಳನ್ನು ನಂಬಲ್ಲ, 'ಆರ್ಡರ್' ತೋರಿಸಿ: ಸಂಸದರಿಗೆ ಹೋರಾಟಗಾರರ ಖಡಕ್ ಸಂದೇಶ
ಜಾಥಾದಲ್ಲಿ ಭಾಗವಹಿಸಿ ಮಾತನಾಡಿದ ಸೇಸಪ್ಪ ಬೆದ್ರಕಾಡು, “ಈ ಹಿಂದೆ ವಿಟ್ಲದಿಂದ ಮಂಗಳೂರು ತನಕ ಸುಮಾರು 42 ಕಿ.ಮೀ ಪಾದಯಾತ್ರೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಬೇಡಿಕೆಗಳನ್ನು ಪೂರೈಸುವಂತೆ ಮನವಿ ಮಾಡಿದ್ದೆವು. ಬಳಿಕ, ವಿಟ್ಲದಿಂದ ಬಿ.ಸಿ ರೋಡ್ಗೆ ಪಾದಯಾತ್ರೆ ಮಾಡಿ ಸಹಾಯಕ ಆಯುಕ್ತರಿಗೂ ಮನವಿ ಮಾಡಿದ್ದೆವು. ಇಂದು (ಸೋಮವಾರ) ಸುಮಾರು 14 ಕಿ.ಮೀ ಪಾದಯಾತ್ರೆ ಮಾಡಿ ಶಾಸಕರಿಗೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ” ಎಂದರು.

“ನಗರಸಭೆ ವ್ಯಾಪ್ತಿಯಲ್ಲಿ ನಿವೇಶನ ರಹಿತರಾಗಿರುವವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇತ್ತೀಚೆಗೆ ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಬೇಕು. ಮೆಸ್ಕಾಂ ಇಲಾಖೆಯಲ್ಲಿ ಮಾಪಕ ಓದುಗರಾಗಿ ಕೆಲಸ ಮಾಡುತ್ತಿರುವವರನ್ನು ಕೊರೊನಾ ಸಂದರ್ಭ ಕೆಲಸದಿಂದ ಕೈಬಿಟ್ಟಿದ್ದು, ಅವರೆಲ್ಲರನ್ನೂ ಪುನಃ ಕೆಲಸಕ್ಕೆ ಸೇರಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು. ವಿಟ್ಲ ಮಾತನಾಡಿ, “ಅಂಬೇಡ್ಕರ್ ಭವನ ನಿರ್ಮಿಸುವಂತೆ ವಿಟ್ಲದಲ್ಲಿ 17 ಸೆಂಟ್ ಜಾಗ ಹಾಗೂ ಪುತ್ತೂರುನಲ್ಲಿ 75 ಸೆಂಟ್ ಜಾಗ ಮಂಜೂರಾಗಿದೆ. ಆದರೆ, ಇದುವರೆಗೂ ಈ ಎರಡು ಕಡೆ ಕಾಮಗಾರಿ ಪ್ರಾರಂಭಿಸಿಲ್ಲ. ಕಾಲ್ನಡಿಗೆ ಜಾಥಾ ಮೂಲಕ ಶಾಸಕರಿಗೆ ಕಾಮಗಾರಿ ಪ್ರಾರಂಭಿಸುವಂತೆ ಹಾಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದೇವೆ” ಎಂದರು.

ಮನವಿ ಪತ್ರ ಸ್ವೀಕರಿಸಿದ ಶಾಸಕ ಸಂಜೀವ ಮಠಂದೂರು, “ಪುತ್ತೂರು ತಾಲೂಕಿನಲ್ಲಿ ಒಟ್ಟು ನಾಲ್ಕು ಅಂಬೇಡ್ಕರ್ ಭವನ ಈಗಾಗಲೇ ಆಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವರೊಂದಿಗೆ ಮಾತನಾಡಿ ಶ್ರೀಘ್ರದಲ್ಲೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಕಾಲ್ನಡಿಗೆ ಜಾಥಾದಲ್ಲಿ ಸಮಿತಿಯ ಉಪಾಧ್ಯಕ್ಷ ಪ್ರಸಾದ್ ಬೋಲ್ಮಾರ್, ಜಗದೀಶ್ ಮಂಜನಾಡಿ, ಜಿಲ್ಲಾ ಉಪಾಧ್ಯಕ್ಷೆ ಯಾಮಿನಿ ಬೆಟ್ಟoಪಾಡಿ, ಜಿಲ್ಲಾ ಗೌರವ ಅಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಸಂಚಾಲಕ ಗೋಪಾಲ್ ನೆರಳಕಟ್ಟೆ, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕಾಡು, ಮಹಿಳಾ ಅಧ್ಯಕ್ಷೆ ಲಲಿತಾ, ಉಳ್ಳಾಲ ತಾಲೂಕು ಅಧ್ಯಕ್ಷ ನಾಗೇಶ್ ಟಿ., ಮಹಿಳಾ ಅಧ್ಯಕ್ಷೆ ರೇಣುಕಾ, ಬಂಟ್ವಾಳ ತಾಲೂಕು ಅಧ್ಯಕ್ಷ ವಸಂತ ಕುಕ್ಕೆಬೆಟ್ಟು, ಮಹಿಳಾ ಅಧ್ಯಕ್ಷೆ ಲಲಿತಾ ಸಾಲೆತ್ತೂರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.