ದಕ್ಷಿಣ ಕನ್ನಡ | ತ್ಯಾಜ್ಯವನ್ನು ಪ್ರತ್ಯೇಕಿಸಿ ಅಥವಾ ದಂಡ ಪಾವತಿಸಿ: ಪುತ್ತೂರು ನಗರಸಭೆ

  • ನಗರಸಭೆ ವ್ಯಾಪ್ತಿಯಲ್ಲಿ 19,000 ಮನೆಗಳಿವೆ
  • ತ್ಯಾಜ್ಯ ವರ್ಗೀಕರಿಸದಿದ್ದರೆ 500 ರೂ. ದಂಡ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಪುತ್ತೂರು ನಗರ ಪುರಸಭೆಯು (ಸಿಎಂಸಿ) ತ್ಯಾಜ್ಯ ವಿಲೇವಾರಿ ಮಾಡುತ್ತಿದೆ. ವಿಶೇಷವಾಗಿ ಮನೆಗಳಲ್ಲಿಯೇ ಕಸವನ್ನು ಪ್ರತ್ಯೇಕಿಸುವುದನ್ನು ಜಾರಿಗೊಳಿಸಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಿದೆ.

ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಅಧಿಕಾರಿಗಳ ತಂಡಗಳು ಮನೆ-ಮನೆಗೆ ತೆರಳಿ ತ್ಯಾಜ್ಯವನ್ನು ಪ್ರತ್ಯೇಕಿಸದ ಮನೆಗಳು ಮತ್ತು ವಾಣಿಜ್ಯ ಸಂಸ್ಥೆಗಳಿಗೆ ದಂಡ ವಿಧಿಸಲು ಪ್ರಾರಂಭಿಸಿವೆ.

Eedina App

"ನಗರಸಭೆಯು ನಗರದ ಎಲ್ಲ ಮನೆ, ಸಂಸ್ಥೆಗಳಿಗೆ ತೆರಳಿ ಕಸ ಸಂಗ್ರಹಣೆ ಮಾಡುತ್ತಿದೆ. ನಗರಸಭೆಯ 31 ವಾರ್ಡ್‌ಗಳಲ್ಲಿ 19,000ಕ್ಕೂ ಹೆಚ್ಚು ಮನೆಗಳು ಸೇರಿದಂತೆ 24,500 ಮನೆ, ವಾಣಿಜ್ಯ ಮಳಿಗೆಗಳಿವೆ. ತ್ಯಾಜ್ಯ ವಿಂಗಡಣೆಯ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ನಮ್ಮ ತಂಡಗಳು ಮನೆ ಮತ್ತು ವ್ಯಾಪಾರ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡುತ್ತಿವೆ. ಮನೆಗಳು ಅಥವಾ ವ್ಯಾಪಾರ ಸ್ಥಳಗಳು ತ್ಯಾಜ್ಯವನ್ನು ಪ್ರತ್ಯೇಕಿಸದಿದ್ದರೆ, ಸ್ಥಳದಲ್ಲೇ ದಂಡ ವಿಧಿಸಲಾಗುತ್ತದೆ,'' ಎಂದು ಪುತ್ತೂರು ಸಿಎಂಸಿ ಕಮಿಷನರ್ ಮಧು ಎಸ್ ಮನೋಹರ್ ತಿಳಿಸಿದ್ದಾರೆ.

"ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯಗೊಳಿಸುವ ಮುನ್ನ ನಗರಸಭೆಯು ಎನ್‌ಜಿಒಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇತ್ತೀಚೆಗೆ, ನಾವು ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಣೆ ಮಾಡಿಲು ಆರಂಭಿಸಿದ್ದೇವೆ. ತ್ಯಾಜ್ಯವನ್ನು ಬೇರ್ಪಡಿಸದೇ ತ್ಯಾಜ್ಯ ವಾಹನಗಳಿಗೆ ಕೊಟ್ಟರೆ 500 ರೂ. ದಂಡ ವಿಧಿಸಲಾಗುತ್ತದೆ" ಎಂದು ಅವರು ಹೇಳಿದ್ದಾರೆ. 

AV Eye Hospital ad

"ನಗರದಲ್ಲಿ ದಿನಕ್ಕೆ ಸರಾಸರಿ 22 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುತ್ತದೆ. ಕಾಂಪೋಸ್ಟ್ ಘಟಕಗಳು ಮತ್ತು ಮೆಟೀರಿಯಲ್ ರಿಕವರಿ ಸೌಲಭ್ಯಗಳನ್ನು ಪಾಲಿಕೆ ಹೊಂದಿದೆ. ಯಾವುದೇ ತ್ಯಾಜ್ಯವನ್ನು ಲ್ಯಾಂಡ್‌ಫಿಲ್ ಸೈಟ್‌ಗಳಿಗೆ ಕಳುಹಿಸುವುದಿಲ್ಲ" ಎಂದು ಅವರು ವಿವರಿಸಿದ್ದಾರೆ. 

ನಗರಸಭೆಯ ಹೊಸ ಜೈವಿಕ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ಸ್ಥಾವರವು ಪುತ್ತೂರಿನಲ್ಲಿ ನಿರ್ಮಾಣವಾಗುತ್ತಿದೆ. ಸ್ಥಾವರವು ಆರ್ದ್ರ ತ್ಯಾಜ್ಯವನ್ನು ಸಿಎನ್‌ಜಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ. 

"ಸ್ಥಾವರದಿಂದ ಉತ್ಪತ್ತಿಯಾಗುವ ಸಿಎನ್‌ಜಿಯನ್ನು 20 ಕಸ ಸಾಗಣೆ ಟ್ರಕ್‌ಗಳು ಸೇರಿದಂತೆ ಸಿಎಂಸಿಯ ವಾಹನಗಳಿಗೆ ಇಂಧನವಾಗಿ ಬಳಸಲಾಗುತ್ತದೆ. ಸಿಎನ್‌ಜಿಯನ್ನು ಸಿಲಿಂಡರ್‌ಗಳಲ್ಲಿ ತುಂಬಿಸಲಾಗುತ್ತದೆ ಮತ್ತು ಅದೇ ವಾಹನಗಳಲ್ಲಿ ಬಳಸಲಾಗುತ್ತದೆ. ಅಂದಾಜು 3 ಕೋಟಿ ವೆಚ್ಚದಲ್ಲಿ ಸ್ಥಾಪನೆಯಾಗುತ್ತಿರುವ ಸ್ಥಾವರವು ಎರಡು ತಿಂಗಳೊಳಗೆ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ನವೆಂಬರ್‌ನಲ್ಲಿ ಸ್ಥಾವರ ಉದ್ಘಾಟನೆ ಮಾಡುವ ಯೋಜನೆಯಿದೆ" ಎಂದು ಮನೋಹರ್ ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app