
- ತ್ಯಾಜ್ಯ ನೀರಿನಿಂದ ಸೊಳ್ಳೆಗಳು ಉತ್ಪತ್ತಿ ಆತಂಕ
- ಶಾಲೆಯಲ್ಲಿರುವ ಸುಮಾರು 530 ವಿದ್ಯಾರ್ಥಿಗಳಿಗೆ ತೊಂದರೆ
ವಸತಿ ಸಮುಚ್ಚಯದಿಂದ ಬೂದು ಬಣ್ಣದ ತ್ಯಾಜ್ಯದ ನೀರನ್ನು ಶಾಲೆಯೊಂದರ ಪಕ್ಕದ ತೆರೆದ ಚರಂಡಿಗೆ ಬಿಡಲಾಗುತ್ತಿದ್ದು, ಶಾಲಾ ಮಕ್ಕಳಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಪೋಷಕರು ಮತ್ತು ಸ್ಥಳೀಯರು ದೂರಿದ್ದಾರೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮಾದರಿ ಶಾಲೆಯ ಬಳಿ ಇರುವ ತೆರೆದ ಚರಂಡಿಯಲ್ಲಿ ಬೂದು ಬಣ್ಣದ ತ್ಯಾಜ್ಯ ನೀರು ಬಿಡಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ದುರ್ನಾತ ಹೊಡೆಯುತ್ತಿದೆ. ಮಕ್ಕಳಿಗೆ ಶಾಲೆಯಲ್ಲಿ ಕುಳಿತು ಪಾಠ ಕೇಳಲು ಕಷ್ಟವಾಗುತ್ತಿದೆ. ಜತೆಗೆ ತ್ಯಾಜ್ಯ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಕಾಯಿಲೆ ಹರಡುವ ಸಂಭವವಿದ್ದು ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ವಸತಿ ಸಮುಚ್ಚಯದಿಂದ ಬರುವ ತ್ಯಾಜ್ಯದ ನೀರನ್ನು ಹೊರಹಾಕಲು ಸರಿಯಾದ ವ್ಯವಸ್ಥೆಯಿಲ್ಲದ ಕಾರಣ ಶಾಲೆಯ ಪಕ್ಕದ ಚರಂಡಿಗೆ ಬಿಡಲಾಗುತ್ತಿದೆ. ಇದರಿಂದ ಸ್ಥಳೀಯರು ಮತ್ತು ಶಾಲೆಯಲ್ಲಿರುವ ಸುಮಾರು 530 ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪೋಷಕರು ಹಾಗೂ ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಂಡ್ಯ | ಕಮಿಷನ್ ರಾಜಕಾರಣ ಆರೋಪ; ಸುಮಲತಾ ಅವರದ್ದು ‘ಹಿಟ್ ಅಂಡ್ ರನ್’ ಹೇಳಿಕೆ ಎಂದ ಜೆಡಿಎಸ್
“ತೆರೆದ ಚರಂಡಿ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಶಿಕ್ಷಕರಿಗೆ ತರಗತಿಯ ಎಲ್ಲ ಬಾಗಿಲುಗಳನ್ನು ಮುಚ್ಚಿ ಪಾಠ ಮಾಡುವಂತೆ ಹೇಳಲಾಗಿದೆ. ಸೊಳ್ಳೆ ಸುರುಳಿಗಳನ್ನು ಬೆಳಗಿಸಿ ಪಾಠ ಮಾಡಲಾಗುತ್ತಿದೆ" ಎಂದು ಎಸ್ಡಿಎಂಸಿ ಸದಸ್ಯ ಮೊಹಿಯುದ್ದೀನ್ ಕುಟ್ಟಿ ಹೇಳಿದ್ದಾರೆಂದು ಸುದ್ದಿಸಂಸ್ಥೆಯೊಂದು ಉಲ್ಲೇಖಿಸಿದೆ.
“ಈ ಬಗ್ಗೆ ಎಸ್ಡಿಎಂಸಿ ಸದಸ್ಯರು, ಪೋಷಕರು ಮತ್ತು ಸ್ಥಳೀಯರು ಸೇರಿ ಅನೇಕ ಬಾರಿ ಮೌಖಿಕವಾಗಿ ಮನವಿ ಮಾಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ. ಎಲ್ಕೆಜಿ , ಯುಕೆಜಿಯ ಮಕ್ಕಳ ತರಗತಿ ಚರಂಡಿಗೆ ಹತ್ತಿರದಲ್ಲಿ ಇರುವುದರಿಂದ ಸುಮಾರು 130 ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದೆ” ಎಂದು ತಿಳಿಸಿದರು.
“ಆಗಸ್ಟ್ 23ರಂದು ನಡೆದ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪೋಷಕರೊಂದಿಗೆ ಸೇರಿ ಎಸ್ಡಿಎಂಸಿ ಸದಸ್ಯರ ನಿಯೋಗ ದೂರು ಸಲ್ಲಿಸಿ, ವಾರದೊಳಗೆ ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೆ ಆಗಸ್ಟ್ 30ರಂದು ಸ್ಥಳೀಯ ಪಂಚಾಯಿತಿ ಎದುರು ಮಕ್ಕಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗಿತ್ತು. ಪಂಚಾಯತ್ ಅಧ್ಯಕ್ಷರು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ 15 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಅವರ ಭರವಸೆ ಮೇರೆಗೆ ಹಿಂಪಡೆಯಲಾಯಿತು” ಎಂದರು.
ಪಂಚಾಯಿತಿಯವರು ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲವಾದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
“ವಸತಿ ಸಮುಚ್ಚಯದ 20 ಮನೆಗಳು ಸೇರಿದಂತೆ ಸುಮಾರು 30 ಮನೆಗಳ ತ್ಯಾಜ್ಯದ ನೀರನ್ನು ಚರಂಡಿಗೆ ಬಿಡಲಾಗುತ್ತಿದ್ದು, ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ತಾತ್ಕಾಲಿಕ ಪರಿಹಾರವಾಗಿ ಚರಂಡಿಯನ್ನು ಸ್ವಚ್ಛಗೊಳಿಸಿದ್ದೇವೆ. ಮನೆಗಳಿಗೆ 'ಇಂಗು ಗುಂಡಿ' ನಿರ್ಮಿಸಲು ಅಥವಾ ಮನೆಗಳನ್ನು ಖಾಲಿ ಮಾಡಲು ಕೇಳಿದ್ದೇವೆ. ನಮ್ಮ ಮಾತಿಗೆ ಒಪ್ಪಿಗೆ ನೀಡಿದ್ದಾರೆ. ಮಳೆ ಬರುತ್ತಿದ್ದರಿಂದ ಹೆಚ್ಚಿನ ಕಾಲಾವಕಾಶ ಕೇಳಿದ್ದಾರೆ” ಎಂದು ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ರೋಡ್ರಿಗಸ್ ಹೇಳಿದ್ದಾರೆ.