ದಕ್ಷಿಣ ಕನ್ನಡ | ಚುನಾವಣಾ ಕಣ ಬಿಟ್ಟುಕೊಡುವುದಾಗಿ ಶಕುಂತಲಾ ಶೆಟ್ಟಿ ಪ್ರಮಾಣ ಮಾಡಿದ್ದಾರೆ: ಕಾಂಗ್ರೆಸ್‌ ಆಕಾಂಕ್ಷಿ ಹೇಳಿಕೆ

Dakshina kannada
  • ಶಕುಂತಲಾ ಶೆಟ್ಟಿ ಹಾಗೂ ಹೇಮನಾಥ ಶೆಟ್ಟಿ ನಡುವೆ ಆಣೆ ಜಂಜಾಟ
  • ಪುತ್ತೂರು ಕ್ಷೇತ್ರದಿಂದ 10 ಆಕಾಂಕ್ಷಿಗಳಿಂದ ಅರ್ಜಿ

ರಾಜ್ಯದಲ್ಲಿ ಈಗಾಗಲೇ ವಿಧಾನಸಭಾ ಚುನಾವಣಾ ಕಾವು ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರವಾದ ಪುತ್ತೂರು ಕ್ಷೇತ್ರದಲ್ಲೂ ಅದರ ಬಿಸಿ ತಟ್ಟಿದೆ. ಪುತ್ತೂರು ಕಾಂಗ್ರೆಸ್‌ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹಾಗೂ ಶಾಸಕಿಯ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಕಾವು ಹೇಮನಾಥ ಶೆಟ್ಟಿ ಅವರ ನಡುವೆ ಅಭ್ಯರ್ಥಿ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಯುತ್ತಿದೆ.

ಈ ನಡುವೆ, “ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿ ಸ್ಥಾನವನ್ನು ತನಗೆ ಬಿಟ್ಟುಕೊಡುವುದಾಗಿ ಶಂಕುತಲಾ ಶೆಟ್ಟಿ ಮಹಾಲಿಂಗೇಶ್ವರ ದೇವರಲ್ಲಿ ಪ್ರಮಾಣ ಮಾಡಿದ್ದಾರೆಂದು ಹೇಮನಾಥ ಶೆಟ್ಟಿ ಹೇಳಿದ್ದು,  ಹೊಸ ಬಾಂಬ್‌ ಸಿಡಿಸಿದ್ದಾರೆ. 

Eedina App

“ಶಕುಂತಲಾ ಶೆಟ್ಟಿ ಅವರಿಗಾಗಿ ನಾನು ಹಲವು ಬಾರಿ ಅಭ್ಯರ್ಥಿ ಸ್ಥಾನದ ಕಣದಿಂದ ಹಿಂದೆ ಸರಿದಿದ್ದೇನೆ. ಈ ಬಾರಿ ಪಕ್ಷದ ಆತಂರಿಕ ಸಮೀಕ್ಷೆಯಲ್ಲಿ ನನ್ನ ಹೆಸರೇ ಮುಂದಿದೆ. ಈ ಬಾರಿ ಪಕ್ಷ ನನ್ನನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪರಿಗಣಿಸಲಿದೆ” ಎಂದು ಹೇಮನಾಥ ಶೆಟ್ಟಿ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧರಾದ ಡಿ ಕೆ ಶಿವಕುಮಾರ್ ಬಾವ; ಅರ್ಜಿ ಸಲ್ಲಿಸಿದ ಶರತ್ ಚಂದ್ರ

AV Eye Hospital ad

“ಕಳೆದ ಬಾರಿ ಶಕುಂತಲಾ ಶೆಟ್ಟಿಯವರಿಗೆ ಅಭ್ಯರ್ಥಿ ಸ್ಥಾನ ಬಿಟ್ಟುಕೊಟ್ಟಿದ್ದೇನೆ. ಆ ಕಾರಣಕ್ಕೆ ಈ ಬಾರಿ ಶಕುಂತಲಾ ಶೆಟ್ಟಿ ನನಗೆ ವಿರೋಧ ಮಾಡಲು ಸಾಧ್ಯವೇ ಇಲ್ಲ. ಆ ಭರವಸೆ ನನಗಿದೆ” ಎಂದಿದ್ದಾರೆ.

ನನಗೆ ಅವರು ಸಿಕ್ಕಿಲ್ಲ, ನಾನು ಆಣೆ ಮಾಡಿಲ್ಲ ಎಂದ ಶಕುಂತಲಾ ಶೆಟ್ಟಿ

ಕಾವು ಹೇಮನಾಥ್‌ ಶೆಟ್ಟಿ ಆಣೆ ಪ್ರಮಾಣದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಕುಂತಲಾ ಶೆಟ್ಟಿ, ”ನಾನು ಮತ್ತು ಹೇಮನಾಥ್‌ ಶೆಟ್ಟಿ ಮಾತುಕತೆ ನಡೆಸದೆ ಹಲವು ವರ್ಷಗಳೇ ಕಳೆದಿವೆ. ಹೀಗಿರುವಾಗ ನಾನು ಅವರ ಜೊತೆ ಮಹಾಲಿಂಗೇಶ್ವರ ಸನ್ನಿಧಿಗೆ ಹೋಗಿದ್ದು ಯಾವಾಗ? ಈ ಸಂದರ್ಭದಲ್ಲಿ ಅಲ್ಲಿದ್ದ ಅರ್ಚಕರು ಯಾರು? ಆಡಳಿತ ಮಂಡಳಿಯವರು ಯಾರು? ಎಂದು ತಿರುಗಿ ಪ್ರಶ್ನಿಸಿದ್ದಾರೆ.

ಹೇಮಾನಾಥ್‌ ಶೆಟ್ಟಿ ಅವರು ಸುಮಾರು ಹತ್ತು ವರ್ಷದಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನಾನು ಆ ರೀತಿ ಹೇಳಲು ಸಾಧ್ಯವೇ ಇಲ್ಲ. ಪ್ರಮಾಣ ಮಾಡುವುದಂತೂ ದೂರದ ಮಾತು. ನನಗೆ ಆಣೆ-ಪ್ರಮಾಣ ಮಾಡುವ ಅಭ್ಯಾಸ ಇಲ್ಲ. ಅವರು ನಮ್ಮ ಕಚೇರಿಗೆ ಬರುವುದಿಲ್ಲ. ನಮ್ಮ ಜೊತೆ ಮಾತನಾಡುವುದೂ ಇಲ್ಲ. ಹೀಗಿರುವಾಗ ಆಣೆ-ಪ್ರಮಾಣದ ಮಾತೆಲ್ಲಿ. ಇದೆಲ್ಲ ಕಟ್ಟುಕಥೆ” ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ 10 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ದಿವ್ಯ ಪ್ರಭಗೌಡ, ಕಾವು ಹೇಮನಾಥ ಶೆಟ್ಟಿ, ಶಕುಂತಲಾ ಶೆಟ್ಟಿ, ಎಂ.ಬಿ ವಿಶ್ವನಾಥ ರೈ, ಭರತ್‌ ಮುಂಡೋಡಿ, ಸತೀಶ್‌ ಕೆಡಿಂಜೆ ಮುತ್ತಾದವರೂ ರೇಸ್‌ನಲ್ಲಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app