
- ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದ ಪೋಷಕರು
- ಕ್ಷಮೆ ಕೇಳಿ ಸಮಸ್ಯೆ ಬಗೆಹರಿಸಿದ ಶಾಲಾ ಮುಖ್ಯೋಪಾಧ್ಯಾಯಿ
ಕೊಳೆ ಕಟ್ಟಿದ್ದ ರಾಖಿಯನ್ನು ಕೈಯಿಂದ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ ಸರ್ಕಾರಿ ಶಾಲೆಯ ಶಿಕ್ಷಕಿ ವಿರುದ್ಧ ಸಂಘಪರಿವಾರದ ಸದಸ್ಯರು ಹಾಗೂ ಪಾಲಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪಾಪೆಮಜಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ರಕ್ಷಾ ಬಂಧನದ ದಿನ ವಿದ್ಯಾರ್ಥಿಗಳು ರಾಖಿಯನ್ನು ಕೈಗೆ ಕಟ್ಟಿಸಿಕೊಂಡಿದ್ದರು. ರಕ್ಷಾ ಬಂಧನ ಆಚರಣೆ ಮಾಡಿ ತುಂಬಾ ದಿನಗಳೇ ಕಳೆದಿವೆ. ವಿದ್ಯಾರ್ಥಿಗಳ ಕೈಗೆ ಕಟ್ಟಿರುವ ರಾಖಿ ತುಂಬಾ ಹಳೆಯದ್ದಾಗಿದ್ದು, ಕಪ್ಪು ಬಣ್ಣಕ್ಕೆ ತಿರುಗಿದ್ದವು. ಮಕ್ಕಳ ಆರೋಗ್ಯ ದೃಷ್ಟಿಯಿಂದ ಶಿಕ್ಷಕಿ ವಿದ್ಯಾರ್ಥಿಗಳ ಹತ್ತಿರ ರಾಖಿ ಬಿಚ್ಚಲು ಹೇಳಿದ್ದಾರೆ ಎಂದು ತಿಳಿದುಬಂದಿದೆ.
“ರಾಖಿಗಳು ಕಪ್ಪು ಬಣ್ಣಕ್ಕೆ ತಿರುಗಿ ಕೊಳಕಾಗಿವೆ. ಕೈ ತೊಳೆಯುವಾಗ ಅದು ಒದ್ದೆಯಾಗುವುದರಿಂದ ಕೊಳಕು ದೇಹಕ್ಕೆ ಸೇರಿ ವಿದ್ಯಾರ್ಥಿಗಳ ಆರೋಗ್ಯಕ್ಕೆ ಹಾನಿಯಾಗುತ್ತದೆ. ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಅದನ್ನು ತೆಗೆಯುವಂತೆ ಹೇಳಲಾಗಿದೆಯೇ ವಿನಃ ಬೇರೆ ಯಾವ ಉದ್ದೇಶವೂ ಇರಲಿಲ್ಲ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ರಾಖಿ ತೆಗೆಯುವಂತೆ ಒತ್ತಾಯ ಮಾಡಲಿಲ್ಲ. ಪೋಷಕರು ಹಾಗೂ ಕೆಲವರಿಂದ ಆಕ್ಷೇಪಣೆಗಳು ವ್ಯಕ್ತವಾದ ಕಾರಣ ಕ್ಷಮೆ ಕೇಳಿ ವಿಷಯವನ್ನು ಅಲ್ಲಿಗೆ ಮುಗಿಸಿದ್ದೇವೆ” ಎಂದು ಮುಖ್ಯೋಪಾಧ್ಯಾಯಿನಿ ತೆರೇಸಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಮಂಗಳೂರು | ಬಿಜೆಪಿ ಸರ್ಕಾರದಿಂದ ಬಹಿರಂಗ ತಾರತಮ್ಯ; ಕಾಂಗ್ರೆಸ್ ಮೌನ ಪ್ರತಿಭಟನೆ
“ನಮ್ಮ ಧಾರ್ಮಿಕ ಭಾವನೆಗಳಿಗೆ ಇದರಿಂದ ಧಕ್ಕೆಯಾಗಿದೆ. ರಕ್ಷಾ ಬಂಧನಕ್ಕೆ ನಮ್ಮ ಸಂಸ್ಕೃತಿಯಲ್ಲಿ ಹೆಚ್ಚಿನ ಮಹತ್ವವಿದೆ. ಬೇರೆ ಯಾವ ಶಾಲೆಯೂ ಇದನ್ನು ತೆಗೆಯುವಂತೆ ವಿದ್ಯಾರ್ಥಿಗಳನ್ನು ಕೇಳಿಲ್ಲ” ಎಂದು ಪೋಷಕರು ಶಿಕ್ಷಕಿಯ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಯಾವುದೇ ಕೆಟ್ಟ ಉದ್ದೇಶವಿಲ್ಲದೆ ರಾಖಿ ತೆಗೆಯಲು ಶಿಕ್ಷಕಿ ಹೇಳಿದ್ದು, ಕೊನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ತೆರೇಸಾ ಕ್ಷಮೆ ಯಾಚಿಸಿದ್ದಾರೆ. ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ. ಇಂತಹ ಘಟನೆಗಳು ಶಾಲೆಯಲ್ಲಿ ಮರುಕಳಿಸುವುದಿಲ್ಲ” ಎಂದು ಶಾಲೆಯ ಮೂಲಗಳು ತಿಳಿಸಿವೆ. ಪುತ್ತೂರು ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಘಟನೆ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.