
- ಸೋಗಾನೆಯಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣ
- ವೀಕ್ಷಣೆಗೆ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿರುವ ಸಾರ್ವಜನಿಕರು
ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣ ವೀಕ್ಷಣೆಗೆ ದಿನನಿತ್ಯ ನೂರಾರು ಸಾರ್ವಜನಿಕರು ದೌಡಾಯಿಸುತ್ತಿದ್ದಾರೆ. ಏರ್ಪೋರ್ಟ್ಗೆ ಬರುವವರನ್ನು ನಿಯಂತ್ರಿಸುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ಶಿವಮೊಗ್ಗ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
"ನಗರದ ಹೊರ ವಲಯದ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಠಿಯಿಂದ ಅನುಮತಿ ಇಲ್ಲದೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ತಿಳಿಸಿದ್ದಾರೆ.
"ವಿಮಾನ ನಿಲ್ದಾಣದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಕಲವೇ ದಿನಗಳಲ್ಲಿ ಕೇಂದ್ರದಿಂದ ಡಿಜಿಸಿಎ ತಂಡ ಪರಿಶೀಲನೆಗೆ ಆಗಮಿಸಲಿದೆ. ಇದಲ್ಲದೆ, ವಿಮಾನ ನಿಲ್ದಾಣದಲ್ಲಿರುವ ಸೂಕ್ಷ್ಮ ಉಪಕರಣಗಳ ಸುರಕ್ಷತೆಗಾಗಿ ಸಾರ್ವಜನಿಕರ ಪ್ರವೇಶವನ್ನು ಉದ್ಘಾಟನೆ ಆಗುವವರೆಗೆ ನಿರ್ಬಂಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು" ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ವಿಮಾಣ ನಿಲ್ದಾಣದ ರನ್ವೇನಲ್ಲಿ ವಾಹನ ಚಲಾಯಿಸಿ ವಿಡಿಯೋ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.