
- ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಾಯ
- ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಲಿ ಎಂದು ಸವಾಲು
ಪಿಎಸ್‌ಐ ಮತ್ತು ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಗೃಹಸಚಿವರೇ ನಂಬರ್ ಒನ್ ಆರೋಪಿಯಾಗಿದ್ದಾರೆ. ಈ ವಿಚಾರದಲ್ಲಿ ಆರಗ ಜ್ಞಾನೇಂದ್ರ ಅವರನ್ನು ಬಂಧಿಸಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಫೆಬ್ರವರಿ ಒಳಗೆ ಗೃಹ ಸಚಿವ ಸ್ಥಾನಕ್ಕೆ ಆರಗ ಜ್ಞಾನೇಂದ್ರ ರಾಜೀನಾಮೆ ನೀಡದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು" ಎಂದು ಎಚ್ಚರಿಕೆ ನೀಡಿದರು.
"ಯಾವ ಅಧಿಕಾರಿಯನ್ನು ಎಲ್ಲಿಗೆ ವರ್ಗಾವಣೆ ಮಾಡಬೇಕು ಎನ್ನುವ ಬಗ್ಗೆ ಸ್ಯಾಂಟ್ರೋ ರವಿ ಬಳಿ ಪಟ್ಟಿ ಇತ್ತು. ಅದರಂತೆ ವರ್ಗಾವಣೆ ಆಗಿದೆ. ತೀರ್ಥಹಳ್ಳಿ-ಹೊಸನಗರಗಳಲ್ಲಿನ ಪಿಡಬ್ಲ್ಯೂಡಿ ಕಾಮಗಾರಿಗಳೆಲ್ಲವನ್ನು ಗೃಹಸಚಿವರು ಅವರ ಸಂಬಂಧಿ ಸಿ.ವಿ ಚಂದ್ರಶೇಖರ್ ಅವರಿಗೆ ನೀಡಿದ್ದಾರೆ. ಶೇ.50ರಷ್ಟು ಪಾಲುದಾರಿಕೆಯೂ ಇದೆ. ಸರ್ಕಾರಿ ಭೂಮಿಯನ್ನು ಖಾಸಗಿ ಭೂಮಿಯಾಗಿ ದಾಖಲೆ ಮಾಡಿಸಿ ಲೇಔಟ್‌ಗಳನ್ನು ಮಾಡುತ್ತಿದ್ದು, ಜ್ಞಾನೇಂದ್ರ ಅವರ ಮಗನೇ ಇದಕ್ಕೆ ಬಂಡವಾಳ ಹೂಡಿದ್ದಾನೆ" ಎಂದು ಆರೋಪಿಸಿದರು.
"ತೀರ್ಥಹಳ್ಳಿಯಲ್ಲಿ ನಡೆದ ಇ.ಡಿ ದಾಳಿಯನ್ನೂ ಬಿಜೆಪಿ ರಾಜಕೀಯ ಪ್ರೇರಿತವಾಗಿ ಬಿಂಬಿಸಲಾಗಿದೆ. ತೀರ್ಥಹಳ್ಳಿಗೆ ಬುಧವಾರ ಇ.ಡಿ ಅಧಿಕಾರಿಗಳು ಬಂದಿದ್ದರು. 2015ರಲ್ಲಿ 10 ಲಕ್ಷ ರೂ. ಹಣವನ್ನು ಕಟ್ಟಡದ ಅಡ್ವಾನ್ಸ್ ನೀಡಲಾಗಿದ್ದು, ಇದನ್ನೇ ರಾಜಕೀಯವಾಗಿ ಇ.ಡಿ ದಾಳಿಯೆಂದು ಬಣ್ಣಿಸಲಾಗುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"10 ವರ್ಷ ಶಾಸಕನಾಗಿದ್ದೇನೆ. ಇದರಿಂದ ಹೆದರುವುದಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸುವುದಾದರೆ ಸವಾಲಾಗಿ ಸ್ವೀಕರಿಸುವೆ. ಅಮಿತ್ ಶಾ ಮತ್ತು ಜ್ಞಾನೇಂದ್ರ ಇಬ್ಬರೂ ನನ್ನ ವಿರುದ್ಧ ಈ ವಿಚಾರದಲ್ಲಿ ಸಿಬಿಐ ತನಿಖೆ ನಡೆಸಲಿ" ಎಂದು ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್ ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ರಮೇಶ್, ಸಂತೇಕಡೂರ ವಿಜಯ್(ಧನಿ), ಎನ್ ರಮೇಶ್, ಜಿ.ಡಿ ಮಂಜುನಾಥ್ ಉಪಸ್ಥಿತರಿದ್ದರು.