ಕೊಡಗು| ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೀರು ಕುಡಿಯಲು ವಾಟರ್ ಬೆಲ್

  • ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರಕಾರಿ ಶಾಲೆ
  • ಶಿಕ್ಷಕ ಸಿ ಎಸ್‌ ಸತೀಶ್‌ರವರ ಕಾರ್ಯ ಯೋಜನೆಗೆ ಪೋಷಕರಲ್ಲಿ ಸಂತಸ

ಈ ಬಾರಿಯ ಬೇಸಿಗೆಯು ಎಲ್ಲೆಡೆ ಜೋರಾಗಿಯೇ ಇದೆ. ಇದರಿಂದ ದೇಹದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ವಿದ್ಯಾರ್ಥಿಗಳು ಕೂಡ ಹೊರತಾಗಿಲ್ಲ.

ಶಾಲೆಗಳಲ್ಲಿ ವಿಷಯವಾರು ಬೋಧನಾ ಅವಧಿಗೊಮ್ಮೆ ಬೆಲ್ ಬಾರಿಸುವುದು ಸಹಜ. ಇದೇ ಬೆಲ್ ಪರಂಪರೆಯನ್ನು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದಲೂ ಬಳಸಬಹುದು ಎಂಬುದನ್ನು ಸರಕಾರಿ ಶಾಲೆಯೊಂದು ಮಾದರಿಯಾಗಿ ತೋರಿಸಿಕೊಟ್ಟಿದೆ. 

Eedina App

ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಅವರ ಆರೋಗ್ಯವೂ ಕೂಡ ಅಷ್ಟೇ ಮುಖ್ಯ. ಈ ನಿಟ್ಟಿನಲ್ಲಿ ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನಿರ್ಜಲೀಕರಣ (ಡಿ ಹೈಡ್ರೇಷನ್) ಆಗದಂತೆ ತಡೆಯಲು ತಮ್ಮ ಶಾಲೆಯಲ್ಲಿ 'ವಾಟರ್ ಬೆಲ್' ಯೋಜನೆ ಹಮ್ಮಿಕೊಂಡು ಯಶಸ್ವಿಯಾಗಿದ್ದಾರೆ.

ಈ ವಿನೂತನ 'ವಾಟರ್ ಬೆಲ್' ಆರಂಭಿಸಿರುವುದು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಈ ಉಪಾಯದ ರೂವಾರಿ ಅಲ್ಲಿನ ಶಿಕ್ಷಕ ಸತೀಶ್ ಸಿ ಎಸ್ ಇವರಿಗೆ ಸಾಥ್ ನೀಡಿದವರು ಮುಖ್ಯ ಶಿಕ್ಷಕ ಮಂಜುನಾಥ್.

AV Eye Hospital ad

ದಿನಕ್ಕೆ 6 ಬಾರಿ ಅಂದರೆ ಗಂಟೆಗೊಮ್ಮೆ ಸೈರನ್ ಶಬ್ದದ ಮಾದರಿಯಲ್ಲಿ 'ವಾಟರ್ ಬೆಲ್' ಬಾರಿಸಲಾಗುತ್ತಿದೆ. ಅವಧಿಯಲ್ಲಿ ವಿದ್ಯಾರ್ಥಿಗಳು ತಾವು ತಂದ ನೀರಿನ ಬಾಟಲ್‌ಗಳಿಂದ ಹಾಗೂ ನೀರು ಶಾಲೆಯ ಫಿಲ್ಟರ್‌ನಿಂದ ಕುಡಿಯುವಂತೆ ಶಿಕ್ಷಕರು ನೋಡಿಕೊಳ್ಳುತ್ತಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜತೆಗೆ ನೀರನ್ನು ಕುಡಿಸುವ ಜವಾಬ್ದಾರಿಯನ್ನು ಶಿಕ್ಷಕರೇ ನೋಡಿಕೊಳ್ಳುತ್ತಿದ್ದಾರೆ. 

ವಾಟರ್ ಬೆಲ್ ಯೋಜನೆಯ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಶಿಕ್ಷಕ ಸಿ ಎಸ್ ಸತೀಶ್, "ದಿನೇ ದಿನೇ ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಹದಲ್ಲಿ ಸ್ಥಿರವಾದ ಉಷ್ಣತೆ ಕಾಪಾಡಲು ಕಷ್ಟವಾಗುತ್ತದೆ. ವಿದ್ಯಾರ್ಥಿಗಳು ಸೇರಿ ಎಲ್ಲರಿಗೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಈ ಸಂದರ್ಭದಲ್ಲಿ ನೀರು ಹೆಚ್ಚು ಕುಡಿಯಬೇಕಿದೆ. ಮನೆಯಿಂದ ಶಾಲೆಗೆ ಕಳುಹಿಸುವ ವೇಳೆ ಪೋಷಕರು ನೀಡುವ ವಾಟರ್ ಬಾಟಲ್ ಹಾಗೆಯೇ ಇರುತ್ತಿತ್ತು. ಮನೆಯಲ್ಲಾದರೆ ಮಕ್ಕಳು ಹಣ್ಣಿನ ರಸ, ಪಾನೀಯ ಸೇವಿಸುತ್ತಾರೆ. ಶಾಲಾ ಚಟುವಟಿಕೆಯಿಂದ ನೀರು ಕುಡಿಯುವುದನ್ನೇ ಮರೆತಿದ್ದಾರೆ ಎಂಬ ಅಳಲು ಪೋಷಕರದ್ದು. ಈ ಹಿನ್ನೆಲೆಯಲ್ಲಿ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸೈರನ್ ಶಬ್ದದ ಮಾದರಿಯಲ್ಲಿ 'ವಾಟರ್ ಬೆಲ್' ಬಾರಿಸುವ ಯೋಜನೆಯನ್ನು ಕಳೆದ 15 ದಿನಗಳ ಹಿಂದೆ ಆರಂಭಿಸಿದೆವು'' ಎಂದು ಹೇಳಿದ್ದಾರೆ.

ಶಿಕ್ಷಕ ಸಿ.ಎಸ್.ಸತೀಶ್
ಶಿಕ್ಷಕ ಸಿ ಎಸ್ ಸತೀಶ್

"ಮಕ್ಕಳಿಗೆ ಪದೇ ಪದೇ ನೀರು ಕುಡಿಯಲು ನೆನಪಿಸುವುದು ಕೆಲಸದ ಮಧ್ಯೆ ನಮಗೆ ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಗಂಟೆಗೊಮ್ಮೆ ಸೈರನ್ ಬಾರಿಸಿದಾಗ ಮಕ್ಕಳು ನೀರು ಕುಡಿಯುತ್ತಾರೆ. ಇದನ್ನು ಪ್ರಾಯೋಗಿಕವಾಗಿ ಆರಂಭಿಸಿದ ಬಳಿಕ ಮಕ್ಕಳು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಈಗ ಅವರಿಗೆ ಅಭ್ಯಾಸವಾಗಿದೆ. ಅಲ್ಲದೇ, ಪೋಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ" ಎಂದು ಶಿಕ್ಷಕ ಸತೀಶ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸೋಮವಾರಪೇಟೆ ತಾಲೂಕಿನ ಮುಳ್ಳೂರು ಎಂಬಲ್ಲಿರುವ ಈ ಸರಕಾರಿ ಶಾಲೆಯಲ್ಲಿ ಒಂದರಿಂದ 5ನೇ ತರಗತಿಯವರೆಗೆ ಒಟ್ಟು 31 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
6 ವೋಟ್
eedina app