ಕಾರ್ಖಾನೆಗಾಗಿ ಜಮೀನು ಕಳೆದುಕೊಂಡ 30 ರೈತರು| ದಾಖಲೆಯಿದ್ದರೂ ಗಮನ ಹರಿಸದ ಅಧಿಕಾರಿಗಳು

ಕಾರ್ಖಾನೆ ನಿರ್ಮಿಸುವ ಉದ್ದೇಶದಿಂದ ಸುಮಾರು 30 ರೈತರ ಜಮೀನನ್ನು ರುಕ್ಮಿಣಿ ರಾಮ ಎಂಬ ಕಂಪನಿಯು ಖರೀದಿಸಿತ್ತು. ಈಗ ಕಾರ್ಖಾನೆ ನಿರ್ಮಿಸದೆ ಆ ಜಮೀನನ್ನು ಲಾಭಗಳಿಸುವ ಉದ್ದೇಶದಿಂದ ಮಾರುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟಿಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ವರದಾಪುರದಲ್ಲಿ  ಸುಮಾರು 30 ರೈತರ ಜಮೀನನ್ನು ರುಕ್ಮಿಣಿ ರಾಮ ಎಂಬ ಕಂಪನಿಯು ಕಾರ್ಖಾನೆಯನ್ನು ನಿರ್ಮಿಸುವ ಉದ್ದೇಶದಿಂದ ಖರೀದಿ ಮಾಡಿತ್ತು. ಆದರೆ ಸುಮಾರು ವರ್ಷಗಳು ಕಳೆದರೂ ಕಂಪನಿಯು ಕಾರ್ಖಾನೆಯನ್ನು ಪ್ರಾರಂಭಿಸಿಲ್ಲ. ಕಾರ್ಖಾನೆ ಪ್ರಾರಂಭಿಸಿದ ನಂತರ ಭೂಮಿ ಕಳೆದುಕೊಂಡ ರೈತರಿಗೆ ಕೆಲಸ ನೀಡುವ ಭರವಸೆಯನ್ನು ಸಂಸ್ಥೆ ನೀಡಿತ್ತು. ಆದರೆ ಕಾರ್ಖಾನೆ ಪ್ರಾರಂಭಿಸದೆ ಈ ಜಮೀನನ್ನು ಬೇರೆಯವರಿಗೆ ರುಕ್ಮಿಣಿ ರಾಮ್ ಕಂಪನಿಯು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. 

"ರೈತ ಸಂಘಟನೆಯ ಕಾರ್ಯಕರ್ತರು  ಕಂಪನಿಯ ವಿರುದ್ಧ ಧರಣಿ ಸತ್ಯಾಗ್ರಹ ಹಮ್ಮಿಕೊಂಡು 6 ದಿನ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. 12 ವರ್ಷದ ಹಿಂದೆ ಖಾಸಗಿ ಕಾರ್ಖಾನೆ ಮಾಲೀಕರು 96 ಎಕರೆ ಜಮೀನನ್ನು ಕಾರ್ಖಾನೆ ಉದ್ದೇಶಕ್ಕೆ ಖರೀದಿಸಿದ್ದರು. ಆದರೆ, ಮೂರು ವರ್ಷದ ಬಳಿಕ ಕಾರ್ಖಾನೆಯೂ ಇಲ್ಲ, ಜಮೀನೂ ಇಲ್ಲ. ಆದರೆ ಜಮೀನನ್ನು ಲಾಭ ಗಳಿಸುವ ಉದ್ದೇಶಕ್ಕಾಗಿ ಮಾರಲಾಗುತ್ತಿದೆ" ಎಂದು ರೈತರು ದೂರಿದ್ದಾರೆ.

ಈ  ಕುರಿತು ಜಿಲ್ಲಾಧಿಕಾರಿ ಕಚೇರಿಗೆ ಡಿಸೆಂಬರ್ ತಿಂಗಳಲ್ಲಿ ಪಾದಯಾತ್ರೆ ಹಮ್ಮಿಕೊಂಡು ಪ್ರತಿಭಟನೆ ನಡೆಸಿದಾಗ ಜಿಲ್ಲಾಧಿಕಾರಿಯವರು 15 ದಿನ ಕಾಲಾವಕಾಶ ಕೊಡಿ ಎಲ್ಲವನ್ನು ಸರಿಪಡಿಸುತ್ತೇನೆ ಎಂದು ಭರವಸೆ ಕೂಡ ನೀಡಿದ್ದರು. ಹಾಗೆ ಭರವಸೆ ನೀಡಿ ಮೂರು ತಿಂಗಳು ಕಳೆದಿದೆ, ಈಗ ಸಂಬಂಧವಿಲ್ಲದಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ರೈತರು ಆರೋಪಿಸಿದ್ದಾರೆ.

ಅನ್ಯಾಯದ ವಿರುದ್ಧ ನಡೆಸುತ್ತಿರುವ ಧರಣಿಗೆ ಸ್ಪಂದಿಸುತ್ತಿಲ್ಲ. ಎಲ್ಲಾ ದಾಖಲೆಗಳು ಕಣ್ಣ ಮುಂದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಹೋರಾಟಗಾರ ಗೋಣಿಬಸಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರ ಸಂಗಯ್ಯ, ತಾಲ್ಲೂಕು ಅಧ್ಯಕ್ಷರಾದ  ಗೋಣಿ ಬಸಪ್ಪ, ಮಹೇಶ್ವರ ಮಹಾ ಸ್ವಾಮಿಗಳು ಇನ್ನಿತರರು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್