ಜನಪರ್ಯಾಯ ಬಜೆಟ್ ಅಧಿವೇಶನ| ಸಂವಿಧಾನ ವಿರೋಧಿ ನೀತಿ ಜಾರಿ, ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Siddaramaiah

ಫ್ರೀಡಂ ಪಾರ್ಕ್‌ನಲ್ಲಿ ನಡೆದ ಜನಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ ಬಿಜೆಪಿ ಸರ್ಕಾರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸರ್ಕಾರ ಬಂದಲ್ಲಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಭರವಸೆ ನೀಡಿದರು.

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ಸಂವಿಧಾನವನ್ನು ನೇರವಾಗಿ ವಿರೋಧಿಸುವ ಬದಲು ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿ ಮಾಡುವ ಮೂಲಕ ತನ್ನ ಸಿದ್ಧಾಂತವನ್ನು ಕಾರ್ಯಗತಗೊಳಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಜನಪರ್ಯಾಯ ಬಜೆಟ್ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಅವರು, “ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಗಾಳಿಗೆ ತೂರಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಸರ್ಕಾರಕ್ಕೆ ಬಡವರ ಬಗ್ಗೆ, ಸಾಮಾನ್ಯ ಜನರ ಬಗ್ಗೆ ಮಾನವೀಯತೆಯೇ ಇಲ್ಲ. ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಜಾರಿ ಇರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸುತ್ತೇವೆ " ಎಂದು ಘೋಷಿಸಿದರು.

ಶ್ರೀಮಂತರು ಭೂಮಿ ಹೊಂದಲು ಅವಕಾಶ ನೀಡಿದ ಬಿಜೆಪಿ

ಭೂ ಸುಧಾರಣೆ ಕಾಯ್ದೆಯಲ್ಲಿ 79 (ಎ) ದಲ್ಲಿ ಕೃಷಿಕರಲ್ಲದವರಿಗೆ ಕೃಷಿ ಜಮೀನು ಖರೀದಿಸುವ ಅವಕಶಾವಿರಲಿಲ್ಲ. 79 (ಬಿ) ದಲ್ಲಿ ಕೃಷಿಕರಲ್ಲದವರು ಜಮೀನು ಇಟ್ಟುಕೊಳ್ಳುವ ಹಾಗಿರಲಿಲ್ಲ. 79 (ಸಿ) ಯಲ್ಲಿ ಅಂತಹ ತಪ್ಪುಗಳನ್ನು ಮಾಡಿದರೆ ದಂಡಿಸುವ ಅವಕಾಶವಿತ್ತು. ಆದರೆ, ಈ ಸರ್ಕಾರ ಎಲ್ಲ ನಿಯಮ ಕಿತ್ತುಹಾಕಿದ್ದು, ಶ್ರೀಮಂತರಿಗೆ ಭೂಮಿ ಹೊಂದುವ ಅವಕಾಶವನ್ನು ನೇರವಾಗಿ ಕಲ್ಪಿಸಿದೆ ಎಂದು ಆರೋಪಿಸಿದರು.

ಮುಂದುವರಿದು, “ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಭರವಸೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಅಂಬಾನಿ ಹಾಗೂ ಅದಾನಿಯ ಆದಾಯ ಹೆಚ್ಚಿಸಲು ಸಹಾಯ ಮಾಡಿದ್ದಾರೆ. ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ 15-20 ಸಾವಿರ ಕೋಟಿ ರೂ. ಬೆಲೆ ಬಾಳುವ ಸರ್ಕಾರಿ ಜಮೀನಿನ ಕುರಿತ ಪ್ರಕರಣಗಳು ವಜಾ ಆಗಿವೆ. ಅವರಿಗೆಲ್ಲ ಈಗ ಭೂಮಿ ಹೊಂದಲು ಮುಕ್ತ ಅವಕಾಶ ಸಿಕ್ಕಿದೆ,” ಎಂದರು.

ಇದನ್ನು ಓದಿದಿರಾ: ಜನ ಪರ್ಯಾಯ ಬಜೆಟ್ ಅಧಿವೇಶನ | ಮೋದಿಯನ್ನೇ ಮಂಡಿಯೂರುವಂತೆ ಮಾಡಿದ ರೈತ ಶಕ್ತಿ

ಹಸು ಸಾಕದವರು ಗೋ ಪಾಠ ಹೇಳುತ್ತಾರೆ

ಮಾಧ್ಯಮದ ಪ್ರಚಾರಕ್ಕಾಗಿ ನಕಲಿ ಗೋ ಭಕ್ತರು ಗೋ ಪೂಜೆ ಮಾಡುತ್ತಾರೆ. ಇವರು ಎಂದಿಗೂ ಗೋವಿನ ಸಗಣಿ ಎತ್ತಿದವರಲ್ಲ. ಇಂಥವರು ರೈತರಿಗೆ ಗೋ ಪಾಠ ಹೇಳುತ್ತ ಸಮಾಜದಲ್ಲಿ ಅಶಾಂತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಅನಾರೋಗ್ಯದ ಗೋವುಗಳನ್ನು ಸಾಕುವುದಾದರೂ ಹೇಗೆ? ಈ ಸರ್ಕಾರ ಗೋಮಾಂಶ ಆಮದು ಹಾಗೂ ರಫ್ತು ಮಾಡಲು ಉತ್ತೇಜನ ಕೊಡುತ್ತದೆ. ಆದರೆ ದನಗಳನ್ನು ಮಾರಲು ಅವಕಾಶ ನೀಡುವುದಿಲ್ಲ. ಇದು ಎಂಥ ದ್ವಿಮುಖ ನೀತಿ ಎಂದು ಸಿದ್ದರಾಮಯ್ಯ ಛೇಡಿಸಿದರು.  

Image
Siddaramaiah

ಸರ್ಕಾರಿ ಎಪಿಎಂಸಿಗಳು ಮುಚ್ಚುತ್ತವೆ

ರಾಜ್ಯದಲ್ಲಿ ಸರ್ಕಾರಿ ಎಪಿಎಂಸಿಗಳಿಂದ ಪ್ರತಿವರ್ಷ ಸರ್ಕಾರಕ್ಕೆ 600 ಕೋಟಿಗಿಂತ ಹೆಚ್ಚು ಸುಂಕ ಹರಿದು ಬರುತ್ತಿತ್ತು. ಆದರೆ ಕಳೆದ ವರ್ಷ ಕೇವಲ 200 ಕೋಟಿ ರೂ. ಸುಂಕ ಮಾತ್ರ ಹರಿದು ಬಂದಿದೆ. ಇದಕ್ಕೆಲ್ಲ ಕಾರಣ ಖಾಸಗಿ ಎಪಿಎಂಸಿಗಳು ರಾಜ್ಯದಲ್ಲಿ ಹುಟ್ಟುತ್ತಿರುವುದು. ಇದು ಹೀಗೆ ಮುಂದುವರಿದಲ್ಲಿ ರಾಜ್ಯದ ಸರ್ಕಾರಿ ಎಪಿಎಂಸಿಗಳು ಬಾಗಿಲು ಮುಚ್ಚುತ್ತವೆ ಎಂದು ಆತಂಕ ಅವರು ವ್ಯಕ್ತಪಡಿಸಿದರು.

ರಾಜ್ಯದ ತೆರಿಗೆ ಹಣ 3 ಲಕ್ಷ ಕೋಟಿ ರೂ

ಕರ್ನಾಟಕದಿಂದ ಪ್ರತಿ ವರ್ಷ 3 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿ ಕೇಂದ್ರಕ್ಕೆ ಹೋಗುತ್ತದೆ. ಈ ಹಣ ನಮ್ಮ ರಾಜ್ಯದ ಅಭಿವೃದ್ಧಿಗೆ ಬಳಕೆಯಾಗಬೇಕು. ಆದರೆ ಮೋದಿ ಸರ್ಕಾರ ಕೇವಲ ವರ್ಷಕ್ಕೆ 47 ಸಾವಿರ ಕೋಟಿ ರೂ. ಮಾತ್ರ ಹಿಂದಿರುಗಿಸುತ್ತಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಈ ಅನ್ಯಾಯವನ್ನು ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ. ಅಲ್ಲದೇ 15ನೇ ಹಣಕಾಸು ಆಯೋಗದ ವರದಿಯಲ್ಲಿ ಕೇಂದ್ರದಿಂದ ಬರಬೇಕಾದ ರಾಜ್ಯದ ಪಾಲಿನಲ್ಲಿ ಶೇ.1.07 ರಷ್ಟು ಕಡಿಮೆಯಾಗಿದೆ. ಇದರಿಂದ 30-40 ಸಾವಿರ ಕೋಟಿ ರೂ. ಖೋತಾ ಆಗಲಿದೆ ಎಂದರು. 

ನಿಮಗೆ ಏನು ಅನ್ನಿಸ್ತು?
0 ವೋಟ್