ರಾಜ್ಯದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ, ಕಡಿವಾಣಕ್ಕಿಲ್ಲ ಪೊಲೀಸ್ ಬಲ

ಮೂರು ವರ್ಷದ ಅವಧಿಯಲ್ಲಿ 7,835 ಸೈಬರ್ ಅಪರಾಧ ಪ್ರಕರಣಗಳಲ್ಲಿ 1,243 ಮಂದಿಯನ್ನು ಬಂಧಿಸಲಾಗಿದ್ದರೂ ಕೇವಲ 75 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. ಏನಿದು ಸೈಬರ್ ಅಪರಾಧ?

ವರ್ಷ ಕಳೆದಂತೆ ಸೈಬರ್ ದಾಳಿಗೆ ತುತ್ತಾಗುತ್ತಿರುವವರ ಸಂಖ್ಯೆ ದ್ವಿಗುಣವಾಗುತ್ತಲೇ ಇದೆ. ಸ್ವತಃ ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಇತ್ತೀಚೆಗೆ ಸದನದಲ್ಲಿ, “ಕಳೆದ ಮೂರು ವರ್ಷದಲ್ಲಿ ರೂ. 221.17 ಕೋಟಿ ಸೈಬರ್ ವಂಚನೆಯಾಗಿದೆ” ಎಂದು ಮಾಹಿತಿ ನೀಡಿದ್ದಾರೆ. 2019-2022ರ ನಡುವೆ ಫೆಬ್ರವರಿಯವರೆಗೆ ಕರ್ನಾಟಕದಲ್ಲಿ ಆನ್‌ಲೈನ್ ಫಿಶಿಂಗ್, ಒಟಿಪಿ ಮತ್ತು ಸಾಮಾಜಿಕ ಮಾಧ್ಯಮಗಳ ವಂಚನೆಗಳು ಮೊದಲಾಗಿ 32,286 ಪ್ರಕರಣಗಳು ದಾಖಲಾಗಿವೆ. ಈ ಅವಧಿಯಲ್ಲಿ 7,835 ಪ್ರಕರಣಗಳನ್ನು ಪರಿಹರಿಸಲಾಗಿದೆ ಮತ್ತು 1,243 ಮಂದಿಯನ್ನು ಬಂಧಿಸಲಾಗಿದ್ದು, ಕೇವಲ 75 ಮಂದಿಗೆ ಮಾತ್ರ ಶಿಕ್ಷೆಯಾಗಿದೆ.

Eedina App

“ಸೈಬರ್ ಕ್ರೈಂ ಪ್ರಕರಣಗಳನ್ನು ತನಿಖೆ ನಡೆಸುವ ಸಲುವಾಗಿಯೇ ಬೆಂಗಳೂರು ಈಶಾನ್ಯ ವಿಭಾಗದಲ್ಲಿ ಒಂದು ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದೆ. ಈ ಠಾಣೆಯಲ್ಲಿ 25 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲರಿಗೂ ಸೂಕ್ತ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಸೈಬರ್ ಕ್ರೈಂಗೆ ಕಡಿವಾಣ ಹಾಕಲು ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ. ಬೆಂಗಳೂರಿನ ಉಳಿದ ವಿಭಾಗಳಲ್ಲೂ ಇದೇ ಪರಿಸ್ಥಿತಿ ಇದೆ” ಎಂದು ‘ಈದಿನ’ದ ಜೊತೆಗೆ ಮಾತನಾಡಿದ ಪೊಲೀಸ್ ಉಪ-ಆಯುಕ್ತ ಈಶಾನ್ಯ ವಿಭಾಗದ ಅನೂಪ್ ಬಿ ಶೆಟ್ಟಿ ಹೇಳಿದ್ದಾರೆ.

ಹಾಗಾದ್ರೆ ಸೈಬರ್ ಕ್ರೈಂ ಎಂದರೇನು? ಈ ಬಗೆಯ ಅಪರಾಧಗಳಲ್ಲಿ ಎಷ್ಟು ವಿಧಗಳಿವೆ? ರಾಜ್ಯದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ದಾಖಲಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳು ಎಷ್ಟು? ಮಕ್ಕಳ ಮೇಲಾಗುತ್ತಿರುವ ಸೈಬರ್ ಕ್ರೈಂ ಅಂಕಿಅಂಶಗಳೇನು? ಸೈಬರ್ ಕ್ರೈಂ ಅಪರಾಧಿಗಳನ್ನು ಬೇಧಿಸಲು ಬೆಂಗಳೂರು ಪೊಲೀಸರು ಕೈಗೊಂಡಿರುವ ಕ್ರಮಗಳೇನು? ಇಲ್ಲಿದೆ ಮಾಹಿತಿ.

AV Eye Hospital ad

ಸೈಬರ್ ಕ್ರೈಂ

ಸೈಬರ್ ಅಪರಾಧ ಎಂಬುದು ಕಾನೂನು ಬಾಹಿರ ಕೃತ್ಯ ಎಂದು ಸರಳ ರೀತಿಯಲ್ಲಿ ನಾವು ಹೇಳಬಹುದಾದರೂ ಈ ಅಪರಾಧದಲ್ಲಿ ಕಂಪ್ಯೂಟರ್ ಒಂದು ಸಾಧನವಾಗಿ ಮತ್ತು ಗುರಿಯಾಗಿ ಬಳಕೆಯಾಗುತ್ತದೆ. ಇದರ ಮೂಲಕ ಕಳ್ಳತನ, ವಂಚನೆ, ಖೋಟಾ, ಮಾನಹಾನಿ ಮತ್ತು ಕಿಡಿಗೇಡಿತನದಂತಹ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ. ಇವೆಲ್ಲವೂ ಭಾರತೀಯ ದಂಡ ಸಂಹಿತೆ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ರ ಅಡಿಯಲ್ಲಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ.

ಉದಾಹರಣೆಗೆ

1) ಕಂಪ್ಯೂಟರ್ ಅನ್ನು ಟಾರ್ಗೆಟ್ ಆಗಿ: - ಇ ಕಂಪ್ಯೂಟರ್ ಇತರ ಕಂಪ್ಯೂಟರ್‌ಗಳ ಮೇಲೆ ಆಕ್ರಮಣ ಮಾಡಲು ಬಳಸುವುದು. ಉದಾ. ಹ್ಯಾಕಿಂಗ್, ವೈರಸ್ / ವರ್ಮ್ ದಾಳಿ, ಡಾಸ್ ದಾಳಿ ಇತ್ಯಾದಿ.

2) ಕಂಪ್ಯೂಟರ್ ಅನ್ನು ಆಯುಧವಾಗಿ: - ನೈಜ ಜಗತ್ತಿನ ಅಪರಾಧಗಳನ್ನು ಮಾಡಲು ಕಂಪ್ಯೂಟರ್ ಅನ್ನು ಬಳಸುವುದು. ಉದಾ: ಸೈಬರ್ ಭಯೋತ್ಪಾದನೆ, ಐಪಿಆರ್ ಉಲ್ಲಂಘನೆ, ಕ್ರೆಡಿಟ್ ಕಾರ್ಡ್ ವಂಚನೆಗಳು, ಇಎಫ್ಟಿ ವಂಚನೆಗಳು, ಅಶ್ಲೀಲತೆ ಇತ್ಯಾದಿ.

ಸೈಬರ್ ವಂಚನೆಯ ವಿಧಗಳು

1. ಸಿಮ್ ಸ್ವಾಪ್

ಸಿಮ್ ಸ್ವಾಪ್ ಅಡಿಯಲ್ಲಿ, ಮೋಸಗಾರರು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ವಿರುದ್ಧ ಮೊಬೈಲ್ ಸೇವಾ ಪೂರೈಕೆದಾರರ ಮೂಲಕ ಹೊಸ ಸಿಮ್ ಕಾರ್ಡ್ ಪಡೆಯುತ್ತಾರೆ. ಈ ಹೊಸ ಸಿಮ್ ಕಾರ್ಡ್ ಸಹಾಯದಿಂದ ಅವರು ನಿಮ್ಮ ಬ್ಯಾಂಕ್ ಖಾತೆಯ ಮೂಲಕ ಹಣಕಾಸಿನ ವಹಿವಾಟು ನಡೆಸಲು ಅಗತ್ಯವಾದ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಮತ್ತು ಇತರೆ ಸಂದೇಶಗಳನ್ನು ಪಡೆಯುವ ಮೂಲಕ ವಂಚನೆ ಎಸಗುತ್ತಾರೆ.

2. ವಿಶಿಂಗ್

ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗ್ರಾಹಕ ಐಡಿ, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್, ಎಟಿಎಂ ಪಿನ್, ಒಟಿಪಿ, ಕಾರ್ಡ್ ಮುಕ್ತಾಯ ದಿನಾಂಕ, ಸಿವಿವಿ ಇತ್ಯಾದಿಗಳನ್ನು ಫೋನ್ ಕರೆಯ ಮೂಲಕ ಪಡೆಯುವುದನ್ನು ವಿಶಿಂಗ್ ಎಂದು ಕರೆಯಲಾಗುತ್ತದೆ.

3. ಫಿಶಿಂಗ್

ಗ್ರಾಹಕ ಐಡಿ, ಐಪಿಐಎನ್, ಕ್ರೆಡಿಟ್ / ಡೆಬಿಟ್ ಕಾರ್ಡ್ ಸಂಖ್ಯೆ, ಕಾರ್ಡ್ ಮುಕ್ತಾಯ ದಿನಾಂಕ, ಸಿವಿವಿ ಸಂಖ್ಯೆ ಇತ್ಯಾದಿಗಳಂತಹ ವೈಯಕ್ತಿಕ ಮಾಹಿತಿಯನ್ನು ಕಾನೂನುಬದ್ಧ ಮೂಲದಿಂದ ಕಂಡುಬರುವ ಇಮೇಲ್‌ಗಳ ಮೂಲಕ ಕದಿಯುವುದನ್ನು ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ, ಫಿಶರ್‌ಗಳು ಫೋನ್ (ವಾಯ್ಸ್ ಫಿಶಿಂಗ್) ಮತ್ತು ಎಸ್ಎಂಎಸ್ (ಸ್ಮಿಶಿಂಗ್) ಅನ್ನು ಸಹ ಬಳಸುತ್ತಾರೆ.

4. ಅಶ್ಲೀಲ-ಕಿರುಕುಳ ಅಥವಾ ಆಕ್ರಮಣಕಾರಿ ವಿಷಯ

ಪ್ರಚೋದಿಸುವ, ಜನಾಂಗೀಯ, ಧರ್ಮನಿಂದೆಯ, ರಾಜಕೀಯವಾಗಿ ವಿಧ್ವಂಸಕ, ಮಾನಹಾನಿಕರ ಅಥವಾ ಅಪಪ್ರಚಾರದ ವಿಚಾರಗಳನ್ನು ಹರಡುವುದು, ಸಾಮಾಜಿಕ ಜಾಲತಾಣಗಳಲ್ಲಿ ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಅಶ್ಲೀಲ ಮತ್ತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡುವುದು. ಅಥವಾ ಮಾರ್ಪ್ ಮಾಡಿದ ಪೋಟೋಗಳ ಮೂಲಕ ಅವರಿಗೆ ಅವರಿಗೆ ಕಿರುಕುಳ ನೀಡುವುದು ಸೇರಿದಂತೆ ಎಲ್ಲಾ ಬಗೆಯ ಕೆಲಸಗಳೂ ಸಹ ಸೈಬರ್ ಅಪರಾಧದ ಅಡಿಯಲ್ಲಿ ಬರುತ್ತದೆ.

ಇದಲ್ಲದೆ, ಸರ್ಕಾರದ ವಿರುದ್ಧದ ಸೈಬರ್ ಭಯೋತ್ಪಾದನೆಯಂತಹ ಅಪರಾಧ. ಸೈಬರ್ ಅಶ್ಲೀಲತೆ, ಸೈಬರ್ ಹಿಂಬಾಲಿಕೆ, ಸೈಬರ್ ಮಾನಹಾನಿಯಂಥ ವ್ಯಕ್ತಿಗಳ ವಿರುದ್ಧದ ಅಪರಾಧ. ಆನ್‌ಲೈನ್ ಜೂಜು, ಬೌದ್ಧಿಕ ಆಸ್ತಿ ಉಲ್ಲಂಘನೆ, ಕ್ರೆಡಿಟ್ ಕಾರ್ಡ್ ವಂಚನೆ ಸೇರಿದಂತೆ ನಾನಾ ಅಪರಾಧಗಳು ಸಹ ಸೈಬರ್ ಅಪರಾಧ ಎನಿಸಿಕೊಳ್ಳುತ್ತದೆ.

ಮಕ್ಕಳ ಮೇಲೂ ಹೆಚ್ಚುತ್ತಿದೆ ಸೈಬರ್ ಅಪರಾಧ

ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ (NCRB- National Crime Records Bureau) ಮಾಹಿತಿ ಪ್ರಕಾರ 2020-2021 ರಲ್ಲಿ ಭಾರತದಲ್ಲಿ ಮಕ್ಕಳನ್ನು ಲೈಂಗಿಕವಾಗಿ ಅಶ್ಲೀಲವಾಗಿ ಚಿತ್ರಿಸುವ ಮತ್ತು ಅಂತರ್ಜಾಲದಲ್ಲಿಅದನ್ನು ಪ್ರಕಟಿಸಿರುವ ಸುಮಾರು 738 ಪ್ರಕರಣಗಳು ಕಂಡುಬಂದಿರುವುದು ನಿಜಕ್ಕೂ ಆಘಾತಕಾರಿ ವಿಚಾರ.

ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಲೇ ಇದೆ. 2019ಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ. 400ಕ್ಕೂ ಅಧಿಕ ಎನ್ನಲಾಗುತ್ತದೆ.

ಭಾರತದಲ್ಲಿ ಮಕ್ಕಳ ಮೇಲೆ ನಡೆದಿರುವ ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂಬುದು ಮತ್ತೊಂದು ಆಘಾತಕಾರಿ ವಿಚಾರ. ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳನ್ನು ವರದಿ ಮಾಡುವ ಪ್ರಮುಖ ಐದು ರಾಜ್ಯಗಳಲ್ಲಿ ಉತ್ತರ ಪ್ರದೇಶ (170) ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಸೈಬರ್ ಕ್ರೈಂ ಕಡಿವಾಣಕ್ಕೆ ಸಾಲದಾಗಿದೆ ಪೊಲೀಸ್ ಬಲ

ರಾಜ್ಯದ ಗೃಹ ಸಚಿವರೇ ಮಾಹಿತಿ ನೀಡಿರುವಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 221.7 ಕೋಟಿ ಸೈಬರ್ ವಂಚನೆ ಎಸಗಲಾಗಿದೆ. ಇದಲ್ಲದೆ, ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋ ಪ್ರಕಾರ 2019-2022ರ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 32,286 ಸೈಬರ್ ಪ್ರಕರಣಗಳು ದಾಖಲಾಗಿವೆ. ಇನ್ನೂ ದಾಖಲಾಗದೆ ಉಳಿದ ಪ್ರಕರಣಗಳ ಸಂಖ್ಯೆ ಅಸಂಖ್ಯಾತ.

ದಾಖಲಾಗಿರುವ ಪ್ರಕರಣಗಳ ಪೈಕಿ 7,835 ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 1243 ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಶಿಕ್ಷೆ ನೀಡಲು ಸಾಧ್ಯವಾದದ್ದು ಮಾತ್ರ ಕೇವಲ 75 ಜನರಿಗೆ ಮಾತ್ರ ಎಂಬ ಅಂಕಿಅಂಶ ಸೈಬರ್ ಅಪರಾಧಗಳ ತಡೆಯುವಲ್ಲಿ ನಮ್ಮ ಪೊಲೀಸ್ ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ಅಸಲಿಗೆ ರಾಜ್ಯದಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಸೈಬರ್ ಕ್ರೈಂ ವಿಭಾಗಕ್ಕೆಂದು ವಿಶೇಷ ತರಬೇತಿ ಪಡೆದ ಯಾವುದೇ ವಿಭಾಗವಾಗಲಿ ಸಿಬ್ಬಂದಿಗಳಾಗಲಿ ಇಲ್ಲ. ಬದಲಾಗಿ ಸಿಐಡಿ ಸೈಬರ್ ಕ್ರೈಂ ವಿಭಾಗವೇ ರಾಜ್ಯದ ಎಲ್ಲಾ ಸೈಬರ್ ಕ್ರೈಂ ಪ್ರಕರಣಗಳ ತನಿಖೆ ನಡೆಸುತ್ತದೆ. ಆದರೆ, ಸೈಬರ್ ಕ್ರೈಂ ವಿಭಾಗಕ್ಕೆ ಪ್ರತ್ಯೇಕ ಠಾಣೆ ಅಗತ್ಯ ಇದೆ ಎಂಬ ಕಾರಣಕ್ಕೆ 2015ರಲ್ಲಿ ಇನ್ಫೆಂಟ್ರಿ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿಯೇ ಬೆಂಗಳೂರು ನಗರ ಮತ್ತು ಕೇಂದ್ರ ವಲಯದ ನೂತನ ಸೈಬರ್ ಕ್ರೈಂ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಲಾಗಿತ್ತು.

ಪ್ರಸ್ತುತ ನಗರದ ಎಂಟು ವಲಯಗಳಲ್ಲಿ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ಕೇವಲ 8 ಪೊಲೀಸ್ ಠಾಣೆಗಳು ಮಾತ್ರ ಇವೆ. ಆದರೆ, ಬೆಂಗಳೂರಿನಂತಹ ಮಹಾನಗರದಲ್ಲಿ ಪ್ರತಿನಿತ್ಯ ದಾಖಲಾಗುತ್ತಿರುವ ಸೈಬರ್ ಅಪರಾಧಗಳ ವಿಚಾರಣೆ ನಡೆಸಲು ಕೇವಲ 8 ಪೊಲೀಸ್ ಠಾಣೆಗಳು ಸಾಲುವುದೇ ಎಂಬುದು ಮೊದಲ ಪ್ರಶ್ನೆ. ಇನ್ನೂ ಸೈಬರ್ ಆರೋಪಿಗಳನ್ನು ಪತ್ತೆಹಚ್ಚುವ ಸಂಬಂಧ ಈ ಪೊಲೀಸ್ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯೇ ಇಲ್ಲ. ಪೊಲೀಸರಿಗಿಂತ ಕಳ್ಳರೇ ಹೆಚ್ಚು ಚಾಣಾಕ್ಷರಾಗಿದ್ದು, ಇದೇ ಕಾರಣಕ್ಕೆ ಆರೋಪಿಗಳನ್ನು ಪತ್ತೆಹಚ್ಚಿ ತಕ್ಕ ಶಿಕ್ಷೆ ನೀಡಲು ನಮ್ಮ ಪೊಲೀಸ್ ವ್ಯವಸ್ಥೆಯಿಂದ ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಸೈಬರ್ ಕ್ರೈಂಗೆ ಒಳಗಾದಲ್ಲಿ ದೂರು ಸಲ್ಲಿಸುವುದು ಹೇಗೆ?

ಆನ್ಲೈನ್ ಅಥವಾ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದ ದೂರುಗಳನ್ನು ತಕ್ಷಣವೇ ದೂರು ಸಲ್ಲಿಸುವಂತಾಗಲು ಸರ್ಕಾರವು ಸೈಬರ್ ಅಪರಾಧಗಳಿಗೆ 'ಸೈಕಾರ್ಡ್' ಮತ್ತು https://cybercrime.gov.in (cycord.gov.in) ಎಂಬ ಜಾಲತಾಣವನ್ನು ತೆರೆದಿದೆ. ನಿಮಗೆ ಯಾವುದೇ ರೀತಿಯಲ್ಲಿನ ಆನ್‌ಲೈನ್ ಅಥವಾ ಸೈಬರ್ ಕ್ರೈಂ ವಂಚನೆಯಾದರೆ https://cybercrime.gov.in ಜಾಲತಾಣ ತೆರೆಯಿರಿ.

ನಂತರ ಅದರ ಮೇಲ್ಭಾಗದಲ್ಲಿ ಕಾಣಿಸುವ 'ರಿಪೋರ್ಟ್ ಸೈಬರ್ ಕ್ರೈಮ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಅದನ್ನು ಕ್ಲಿಕ್ ಮಾಡಿದ ನಂತರ ಮತ್ತೊಂದು ವರದಿ ಮಾಡುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ಮೇಲ್ ಎಲ್ಲವನ್ನು ನಮೂದಿಸಲು ಆಯ್ಕೆಗಳಿರುತ್ತವೆ. ಅವುಗಳೆಲ್ಲವನ್ನೂ ನೀಡಿ ಯಾವ ರೀತಿಯಲ್ಲಿ ವಂಚನೆಗೆ ಒಳಗಾಗಿದ್ದೀರಾ ಎಂಬುದನ್ನು ವಿವರವಾಗಿ ತಿಳಿಸಿ ಸಬ್ಮಿಟ್ ಮಾಡಿ.

ನಿಮಗೆ ಏನು ಅನ್ನಿಸ್ತು?
5 ವೋಟ್
eedina app