126 ವರ್ಷ ಹಳೆಯ ಅಣೆಕಟ್ಟು ಶಿಥಿಲ: ನೀರಿನ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ರೈತರ ಆಗ್ರಹ

26 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಮುಲ್ಲಪೆರಿಯಾರ್‌ ಅಣೆಕಟ್ಟು ಶಿಥಿಲಗೊಂಡಿದ್ದು,  142 ಅಡಿಗಳಿಗೆ ಮೀರಿ ನೀರು ಸಂಗ್ರಹಿಸಬಾರದು ಎಂದು ತಮಿಳುನಾಡಿನ ಮಧುರೈನ ವೈಗೈ ಜಲಾನಯನ ಪ್ರದೇಶದ ರೈತರು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ

 

ಕೇರಳದ ಮುಲ್ಲಪೆರಿಯಾರ್‌ನಲ್ಲಿ ಹೊಸ ಅಣೆಕಟ್ಟು ನಿರ್ಮಿಸಲು ಕೇರಳ ಸರ್ಕಾರ ಮುಂದಾಗಿದೆ. ಆದರೆ, ತಮಿಳುನಾಡು ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ, ಅಣೆಕಟ್ಟಿನ ನಿರ್ಮಾಣವು ಉಭಯ ರಾಜ್ಯಗಳ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಈ ನಡುವೆ, 1895ರಲ್ಲಿ ನಿರ್ಮಾಣವಾದ ಮುಲ್ಲಪೆರಿಯಾರ್‌ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು 142 ಅಡಿಗಳಿಗೆ ಸೀಮಿತಗೊಳಿಸಬೇಕು, ಹೆಚ್ಚಿನ ನೀರನ್ನು ಸಂಗ್ರಹಿಸಬಾರದು. ಹೆಚ್ಚು ನೀರನ್ನು ಸಂಗ್ರಹಿಸುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಒತ್ತಾಯಿಸಿ ತಮಿಳುನಾಡಿನ ಮಧುರೈ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 

ಫೆಡರೇಶನ್ ಆಫ್ ಮುಲ್ಲಪೆರಿಯಾರ್ ವೈಗೈ ಜಲಾನಯನ ರೈತ ಸಂಘದ ಸುಮಾರು 500 ರೈತರು ಮಧುರೈನ ನಟರಾಜ್ ಚಿತ್ರಮಂದಿರದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಮಧುರೈ, ಥೇಣಿ, ದಿಂಡಿಗಲ್, ರಾಮನಾಥಪುರ, ಶಿವಗಂಗಾ ಮತ್ತು ವಿರುಧುನಗರ ಜಿಲ್ಲೆಗಳ ಸುಮಾರು 5 ಲಕ್ಷ ಎಕರೆ ಕೃಷಿ ಭೂಮಿಯು ಅಣೆಕಟ್ಟೆಯ ನೀರನ್ನು ಅವಲಂಬಿಸಿದೆ. ಇದಲ್ಲದೆ, ಮುಲ್ಲಪೆರಿಯಾರ್ ಬಳಿ ಇರುವ ಪುಟ್ಟ ಅಣೆಕಟ್ಟನ್ನು ತ್ವರಿತ ಕ್ರಮಗಳ ಮೂಲಕ ಬಲಪಡಿಸಬೇಕು ಎಂದು ತಮಿಳುನಾಡು ಸರ್ಕಾರವನ್ನು ಫೆಡರೇಶನ್ ಒತ್ತಾಯಿಸಿದೆ.

"ಕಾಂಗ್ರೆಸ್‌ ಪಕ್ಷವು ಪಿಣರಾಯಿ ವಿಜಯನ್ ಸರ್ಕಾರದೊಂದಿಗೆ ಸೇರಿ ಅಣೆಕಟ್ಟು ಕೆಡವಲು ಪ್ರಯತ್ನಿಸುತ್ತಿದೆ.  ಅಣೆಕಟ್ಟಿನ ಬಳಿ ತೆರಳಲು ತಮಿಳುನಾಡಿನ ಇಂಜಿನಿಯರ್‌ಗಳಿಗೆ ಕೇರಳ ಸರ್ಕಾರ ಅವಕಾಶ ನೀಡುತ್ತಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ತಮಿಳುನಾಡು ಸರ್ಕಾರ ನೀಡಬೇಕು" ಎಂದು ತಮಿಳುನಾಡಿನ ರೈತರು ಸೋಮವಾರದಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮುಂದೆ ಬೇಡಿಕೆ ಇಟ್ಟಿದ್ದರು.

"ಮುಖ್ಯಮಂತ್ರಿ ಸ್ಟ್ಯಾಲಿನ್ ಅವರು ಮೌನ ಮುರಿಯಬೇಕು. ತಮಿಳುನಾಡಿನ ದಕ್ಷಿಣ ಜಿಲ್ಲೆಗಳ ಜೀವನಾಡಿಯಾಗಿರುವ ಅಣೆಕಟ್ಟು ವಿಚಾರದಲ್ಲಿ ಕೇರಳ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು. ಮೇಕೆದಾಟು ಅಣೆಕಟ್ಟು ಮತ್ತು ಮುಲ್ಲಪೆರಿಯಾರ್ ಅಣೆಕಟ್ಟು ಸಮಸ್ಯೆಗಳ ಕುರಿತು ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು. ಇಲ್ಲದಿದ್ದರೆ, ಕಾವೇರಿ ಡೆಲ್ಟಾ ಪ್ರದೇಶದ ರೈತರು ಮತ್ತು ದಕ್ಷಿಣ ಜಿಲ್ಲೆಗಳ ರೈತರು ಸರಣಿ ಪ್ರತಿಭಟನೆಗಳನ್ನು ನಡೆಸುತ್ತೇವೆ" ಎಂದು ಪೆರಿಯಾರ್ ವೈಗೈ ಜಲಾನಯನ ಪ್ರದೇಶದ ರೈತ ಸಂಘಟನೆಯ ಪಿ.ಆರ್. ಪಾಂಡಿಯನ್ ಹೇಳಿದ್ದರು.

ಅಲ್ಲದೆ, ಕೇರಳ ರಾಜ್ಯಪಾಲ ಮೊಹಮ್ಮದ್ ಆರಿಫ್ ಖಾನ್ ಅವರು ಕೇರಳ ವಿಧಾನಸಭೆಯನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, "ರಾಜ್ಯ ಸರ್ಕಾರವು ಮುಲ್ಲಪೆರಿಯಾರ್‌ನಲ್ಲಿ ಹೊಸ ಅಣೆಕಟ್ಟೆ ನಿರ್ಮಿಸಲಿದೆ" ಎಂದು ಘೋಷಿಸಿರುವುದನ್ನು ರೈತರು ಉಲ್ಲೇಖಿಸಿದ್ದಾರೆ. "ರಾಜ್ಯಪಾಲರು ಸಾಂವಿಧಾನಿಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಮಾತ್ರವಲ್ಲದೆ, ತಮಿಳುನಾಡಿನೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರುವ ಮಾತುಗಳನ್ನಾಡಿದ್ದಾರೆ. ಇದು ನ್ಯಾಯಾಲಯದ ನಿಂದನೆ. ತಮಿಳುನಾಡಿನ ರೈತರು ಕೇರಳದ ವಿರುದ್ಧ ಸರಣಿ ಪ್ರತಿಭಟನೆಗಳನ್ನು ನಡೆಸಲು ಮುಂದಾಗಿದ್ದೇವೆ" ಎಂದು ಪಾಂಡಿಯನ್ ಹೇಳಿದ್ದಾರೆ. 

ಮುಲ್ಲಪೆರಿಯಾರ್‌ನಲ್ಲಿ 126 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಅಣೆಕಟ್ಟು ಶಿಥಿಲಗೊಂಡಿದೆ ಎಂದು ಕೇರಳಿಗರು ಹೇಳುತ್ತಿದ್ದಾರೆ. ಮೊದಮೊದಲು ವಿಪಕ್ಷಗಳ ವಾದವನ್ನು ಅಲ್ಲಗಳೆದಿದ್ದ ಕೇರಳ ಸರ್ಕಾರ, ಅಣೆಕಟ್ಟು ಗಟ್ಟಿಯಾಗಿದೆ ಎಂದಿತ್ತು. ಆದರೆ, ಇದೀಗ ಸರ್ಕಾರ ಹೊಸ ಅಣೆಕಟ್ಟೆ ನಿರ್ಮಿಸಲು ಮುಂದಾಗಿದೆ. ಅದಕ್ಕಾಗಿ, ಕಾರ್ಯಯೋಜನೆಯನ್ನೂ ರಚಿಸಿದೆ. ಆದರೆ, ತಮಿಳುನಾಡು ಈ ಯೋಜನೆಯನ್ನು ವಿರೋಧಿಸಿದ್ದು, ಹೊಸ ಅಣೆಕಟ್ಟು ಕಟ್ಟಿದರೆ, ತಮಿಳುನಾಡಿಗೆ ಸಿಗಬೇಕಿದ್ದ ನೀರಿನ ಪಾಲು ಕಡಿಮೆಯಾಗುತ್ತದೆ ಎಂದು ತಮಿಳುನಾಡಿನ ರೈತರು ಆರೋಪಿಸಿದ್ದಾರೆ.

Image

ತಮಿಳುನಾಡಿಗೆ ಒದಗಿಸಲಾಗುತ್ತಿರುವ ಈಗಿನ ನೀರಿನ ಪ್ರಮಾಣದಲ್ಲಿ ಯಾವುದೇ ರೀತಿಯಲ್ಲೂ ಕಡಿಮೆಯಾಗಂತೆ ಮತ್ತು ಕೇರಳದ ಜನರ ಸುರಕ್ಷತೆಯನ್ನು ಖಾತರಿಪಡಿಸುವಂತೆ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ ಎಂದು ಕೇರಳ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ತಿಳಿಸಿದ್ದಾರೆ.  ಅಣೆಕಟ್ಟು ನಿರ್ಮಾಣದಿಂದ ಪರಿಸರದ ಮೇಲಾಗುವ ಸಾಧಕ- ಬಾಧಕಗಳ ಬಗಿಗಿನ ಅಧ್ಯಯನಕ್ಕೆ 2018 ರಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಷರತ್ತುಬದ್ಧ ಒಪ್ಪಿಗೆ ನೀಡಿತ್ತು. ಅದನ್ನು ರೂಪುರೇಷೆಗಳು ಮತ್ತು ನಿಯಮಗಳನ್ನು ನಿಗದಿಪಡಿಸಲಾಗಿದೆ. ಹೈದರಾಬಾದ್ ಮೂಲದ ಕಂಪನಿಯೊಂದು ವಿವರಗಳನ್ನು ಸಂಗ್ರಹಿಸಿ ಕರಡು ವರದಿಯನ್ನು ಸಿದ್ಧಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್