ದಲಿತ ಯುವಕನನ್ನು ಕೊಂದ ಹಂತಕರಿಗೆ ಜೀವಿತಾವಧಿ ಜೈಲು ಶಿಕ್ಷೆ

ಮೇಲ್ಜಾತಿಯ ಯುವತಿಯೊಂದಿಗೆ ಮಾತನಾಡಿದ್ದಕ್ಕಾಗಿ ಇಂಜಿನಿಯರಿಂಗ್ ವಿದ್ಯಾರ್ಥಿ ಗೋಕುಲ್‌ರಾಜ್‌ ಎಂಬ ದಲಿತ ಯುವಕನನ್ನು ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ 10 ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ

ತಮಿಳುನಾಡಿನಲ್ಲಿ ಜಾತಿ ಕಾರಣಕ್ಕಾಗಿ ಕೊಲೆಯಾದ ಯುವಕನ ಹತ್ಯೆ ಪ್ರಕರಣದಲ್ಲಿ 10 ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಮದ್ರಾಸ್‌ ಹೈಕೋರ್ಟ್ ತೀರ್ಪು ನೀಡಿದೆ. ತೀರ್ಪಿನ ಪ್ರಕಾರ, ಅಪರಾಧಿಗಳು ಜಾಮೀನು ಪಡೆಯಲು ಸಾಧ್ಯವಿಲ್ಲ ಮತ್ತು ಬದುಕಿರುವವರೆಗೂ ಜೈಲಿನಿಂದ ಹೊರ ಬರಲು ಅವಕಾಶವಿಲ್ಲ.

ಹತ್ಯೆಗೀಡಾದ ಸಂತ್ರಸ್ತ ಯುವಕ ಗೋಕುಲರಾಜ್ ಕೊನೆಯ ಬಾರಿಗೆ 2015ರ ಜೂನ್ 23 ರಂದು, ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡ್ನಲ್ಲಿರುವ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಗೌಂಡರ್ ಸಮುದಾಯದ ಯುವತಿಯೊಂದಿಗೆ ಕಾಣಿಸಿಕೊಂಡಿದ್ದರು. ಅದೇ ದಿನ ಆತನನ್ನು ಗೌಂಡರ್ ಸಮುದಾಯಕ್ಕೆ ಸೇರಿದ ಎಸ್‌. ಯುವರಾಜ್‌ ಎಂಬಾತ ನಡೆಸುತ್ತಿದ್ದ ಜಾತಿ ಸಂಘಟನೆಯ ದುರುಳರ ಗುಂಪೊಂದು ದೇವಸ್ಥಾನದಿಂದ ಅಪಹರಿಸಿತ್ತು. ಮರುದಿನ ಆತಣ ಶಿರಚ್ಛೇದ ಮಾಡಲಾಗಿದ್ದ ಮೃತದೇಹವು ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು.

ದೇವಸ್ಥಾನದಲ್ಲಿ ಮಾತನಾಡುತ್ತಿದ್ದ ದಲಿತ ಯುವಕನ ಜಾತಿ ಹಿನ್ನಲೆಯನ್ನು ತ್ವರಿತವಾಗಿ ತಿಳಿದುಕೊಂಡ ಎಸ್ ಯುವರಾಜ್ ಮತ್ತು ಆತನ ಸಹಚರರು ತಮ್ಮ ವಾಹನದಲ್ಲಿ ಅಪಹರಿಸಿ ಕೊಲೆ ಮಾಡಿದ್ದಾರೆ. ನಂತರ, ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಕುತಂತ್ರವನ್ನು ರೂಪಿಸಿದ್ದಾರೆ.

AV Eye Hospital ad

ದಲಿತ ಯುಕನಿಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೆ ನೀಡುವಂತೆ ಹಿಂಸಿಸಿದ್ದಾರೆ. ಆತನ ಹೇಳಿಕೆಯನ್ನು ಪೋನ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ಅಲ್ಲದೆ, ಆತ್ಮಹತ್ಯಾ ಪತ್ರವನ್ನೂ ಬರೆಸಿದ್ದಾರೆ. ನಂತರ, ಆತನ ಕತ್ತು ಹಿಸುಕಿ ಕೊಂದ ಹಂತಕರು, ಆತನ ತಲೆಯನ್ನು ತುಂಡರಿಸಿ, ಮುಂಡವನ್ನು ರೈಲ್ವೆ ಹಳಿ ಮೇಲೆ ಮತ್ತು ತಲೆಯನ್ನು ಸಮೀಪದಲ್ಲಿ ಎಸೆದಿದ್ದರು.

ಆತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ, ಕತ್ತು ಹಿಸುಕಿ, ಕತ್ತು ಸೀಳಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ದೇವಾಲಯದ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಧೀರನ್ ಚಿನ್ನಮಲೈ ಗೌಂಡರ್ ಪೆರವೈ ಎಂಬ ಸಂಘಟನೆಯನ್ನು ನಡೆಸುತ್ತಿದ್ದ ಯುವರಾಜ್, ಪ್ರಮುಖ ಶಂಕಿತನೆಂಬುದು ಗೊತ್ತಾಗಿತ್ತು. ಬಳಿಕ ಪೊಲೀಸರು ಯುವರಾಜ್ ಮತ್ತು ಆತನ 15 ಸಹಚರರ ವಿರುದ್ದ ಪ್ರಕರಣ ದಾಖಲಿಸಿ, ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಿದ್ದರು. ಆ ವೇಳಗೆ, ಯುವರಾಜ್ ತಲೆಮರೆಸಿಕೊಂಡಿದ್ದ. ಬಳಿಕ ಪೊಲೀಸರು ಆತನ ಕುರಿತು ಪತ್ರಿಕಾ ಜಾಹೀರಾತು ನೀಡಿದ್ದರು. ತಲೆಮರೆಸಿಕೊಂಡು ಮೂರು ತಿಂಗಳ ನಂತರ, ಟಿವಿ ವಾಹಿನಿಯೊಂದರಲ್ಲಿ ಕಾಣಿಸಿಕೊಂಡ ಯುವರಾಜ್, ತಾನು ಅಮಾಯಕ, ತನ್ನನ್ನು ಪೊಲೀಸರು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಹೇಳಿಕೊಂಡಿದ್ದ.

 ಬಳಿಕ ಆತನೇ ನಾಮಕ್ಕಲ್‌ನಲ್ಲಿ ಸಿಬಿ-ಸಿಐಡಿ ಮುಂದೆ ಶರಣಾಗಿದ್ದರು. ಈ ವೇಳೆಗಾಗಲೇ ಇಬ್ಬರು ಆರೋಪಿಗಳಾದ ಶಂಕರ್ ಮತ್ತು ಕುಮಾರ್ ಅವರು ಶ್ರೀವೈಕುಂಡಂನ ನ್ಯಾಯಾಲಯದ ಮುಂದೆ ಅಪರಾಧವನ್ನು ಒಪ್ಪಿಕೊಂಡಿದ್ದರು. 

ಮೇ 2016 ರಲ್ಲಿ ಮದ್ರಾಸ್ ಹೈಕೋರ್ಟ್ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತು. ಆರೋಪಿಯು ಸಾಕ್ಷಿಗಳಿಗೆ ಬೆದರಿಕೆ ಮತ್ತು ಸಾಕ್ಷ್ಯವನ್ನು ಹಾಳುಮಾಡುತ್ತಿರುವುದನ್ನು ಉಲ್ಲೇಖಿಸಿ ತಮಿಳುನಾಡು ಸರ್ಕಾರವು ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದುಗೊಳಿಸಿದ ಬಳಿಕ, 2016ರ ಆಗಸ್ಟ್‌ನಲ್ಲಿ ಯುವರಾಜ್‌ನನ್ನು ಪೊಲೀಸರು ಮತ್ತೆ ಬಂಧಿಸಿದರು.

ಪ್ರಕರಣದ ವಿಚಾರಣೆ 2018 ರಲ್ಲಿ ಪ್ರಾರಂಭವಾಯಿತು. 2019 ರಲ್ಲಿ ಹೈಕೋರ್ಟ್ ಎಸ್‌ಸಿ/ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ-1989 ರ ಅಡಿಯಲ್ಲಿ ದಾಖಲಿಸಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ಮಧುರೈನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ವಿ. ಗೋಕುಲ್‌ರಾಜ್‌ರನ್ನು ಮೇಲ್ಜಾತಿಗೆ ಸೇರಿದ ಯುವತಿಯ ಕುಟುಂಬದವರ ಕುಮ್ಮಕ್ಕಿನ ಮೇರೆಗೆ ಹತ್ಯೆ ಮಾಡಲಾಗಿಲ್ಲ. ಬದಲಾಗಿ, ಎಸ್. ಯುವರಾಜ್ ಎಂಬಾತನ ಗ್ಯಾಂಗ್, ತನ್ನದೇ ಸಮುದಾಯದ ಜಾತಿ ಸಂಘಟನೆ ನಡೆಸುತ್ತಿತ್ತು. ಆ ಗ್ಯಾಂಗ್‌ನ ಗೋಕುಲ್‌ರಾಜ್‌ ತಮ್ಮ ಜಾತಿಯ ಯುವತಿಯೊಂದಿಗೆ ದೇವಸ್ಥಾನದಲ್ಲಿ ಮಾತನಾಡುತ್ತಿದ್ದುದ್ದನ್ನು ಕಂಡು, ಈ ದುಷ್ಕೃತ್ಯ ಎಸಗಿದೆ ಎಂದು ವಿಚಾರಣೆಯ ವೇಳೆ ನ್ಯಾಯಾಲಯ ಗಮನಿಸಿತ್ತು.

ಮೂರು ವರ್ಷಗಳ ಕಾಲ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ನ್ಯಾಯಾಧೀಶ ಟಿ ಸಂಪತ್‌ಕುಮಾರ್ ಅವರ ವಿಶೇಷ ನ್ಯಾಯಾಲಯವು ಶನಿವಾರ ತೀರ್ಪು ನೀಡಿದ್ದು, ಪ್ರಕರಣದ 15 ಆರೋಪಿಗಳ ಪೈಕಿ ಐವರನ್ನು ಖುಲಾಸೆಗೊಳಿಸಿದೆ ಮತ್ತು 10 ಆರೋಪಿಗಳನ್ನು ಅಪರಾಧಿಗಳು ಎಂದು ತೀರ್ಪು ನೀಡಿದೆ.

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗಳನ್ನು ಉಲ್ಲೇಖಿಸಿ ತೀರ್ಪು ನೀಡಿರುವ ನ್ಯಾಯಾಲಯವು, ಅಪರಾಧಿಗಳಿಗೆ ಜೀವಿತಾವಧಿ ಶಿಕ್ಷೆ ವಿಧಿಸಿದೆ. ಅಪರಾಧಿಗಳು ತಮ್ಮ ಜೀವಮಾನದವರೆಗೂ ಜೈಲಿನಲ್ಲಿಯೇ ಇರಬೇಕು. ಅವರಿಗೆ ಜಾಮೀನು ನೀಡಲಾಗುವುದಿಲ್ಲ ಎಂದು ಕೋರ್ಟ್ ಒತ್ತಿಹೇಳಿದೆ.

ಅಪರಾಧಿಗಳನ್ನು ಯುವರಾಜ್, ಆತನ ಸಹೋದರ ತಂಗದುರೈ, ಅರುಣ್, ಕುಮಾರ್, ಶಂಕರ್, ಅರುಳ್ ವಸಂತಂ, ಸೆಲ್ವಕುಮಾರ್, ಸತೀಶ್‌ ಕುಮಾರ್, ರಘು ಅಲಿಯಾಸ್ ಶ್ರೀಧರ್ ಮತ್ತು ರಂಜಿತ್ ಎಂದು ಗುರುತಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app