ಜನ ಪರ್ಯಾಯ ಬಜೆಟ್ ಅಧಿವೇಶನ | ಮೋದಿಯನ್ನೇ ಮಂಡಿಯೂರುವಂತೆ ಮಾಡಿದ ರೈತ ಶಕ್ತಿ

Yogendra Yadav

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ರೈತ, ದಲಿತ, ಕಾರ್ಮಿಕ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯದಲ್ಲಿ ಮೂರು ದಿನಗಳ ಜನ ಪರ್ಯಾಯ ಬಜೆಟ್ ಅಧಿವೇಶನಕ್ಕೆ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ಡೊಳ್ಳು ಬಾರಿಸಿ ಚಾಲನೆ ನೀಡಿ, ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಹೊರವಲಯದಲ್ಲಿ ವರ್ಷಗಳ ಕಾಲ ನಡೆದ ರೈತ ಪ್ರತಿಭಟನೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಮಂಡಿಯೂರುವಂತೆ ಮಾಡಿರುವುದು ರೈತ ಹೋರಾಟದ ಶಕ್ತಿ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಾಯಕ ಯೋಗೇಂದ್ರ ಯಾದವ್ ತಿಳಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ರೈತ, ದಲಿತ, ಕಾರ್ಮಿಕ, ಯುವಜನ ಹಾಗೂ ಮಹಿಳಾ ಸಂಘಟನೆಗಳ ಸಮನ್ವಯದಲ್ಲಿ ಆಯೋಜಿಸಿರುವ ʼಜನ ಪರ್ಯಾಯ ಬಜೆಟ್ ಅಧಿವೇಶನʼವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ  ಮಾತನಾಡಿದ ಅವರು, “ನಮ್ಮ ಹೋರಾಟದ ಹಾದಿಗೆ ಪ್ರೇರಣೆ ನೀಡಿದ ಕರ್ನಾಟಕದ ರೈತ ನಾಯಕ ಪ್ರೊ. ಎಂಡಿ ನಂಜುಂಡಸ್ವಾಮಿ ಹಾಗೂ ಶಾಂತವೇರಿ ಗೋಪಾಲಗೌಡರ ನೆಲದಲ್ಲಿ ಇಂಥ ಐತಿಹಾಸಿಕ ಸಂಘಟನೆ ರೂಪುಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ನಮ್ಮ ಸಾಧನೆಗಳೇ ನಮ್ಮ ಸವಾಲು

ವಿವಾದಿತ ಕೃಷಿ ಕಾಯ್ದೆಗಳನ್ನು ಮೋದಿ ಸರ್ಕಾರ ಹಿಂಪಡೆದಿದ್ದರೂ ಹಿಂಬಾಗಿಲಿನ ಮೂಲಕ ರಾಜ್ಯಗಳಲ್ಲಿ ಜಾರಿ ಮಾಡುತ್ತಿದೆ. ಕರ್ನಾಟಕದಲ್ಲಿ ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಜಾನುವಾರು ಕಾಯ್ದೆ ಜಾರಿಯಲ್ಲಿರುವುದು ಇದಕ್ಕೆ ಸಾಕ್ಷಿ. ಪ್ರಧಾನಿಯವರು ಕನಿಷ್ಠ ಬೆಂಬಲ ಬೆಲೆ ಘೋಷಿಸುವುದಾಗಿ ಹೇಳಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದಿದೆ. ಏಪ್ರಿಲ್ 11ರಂದು ಉತ್ತರ ಪ್ರದೇಶದಲ್ಲಿ ಈ ಕುರಿತು ರೈತರು ಆಂದೋಲನಕ್ಕೆ ಕರೆ ನೀಡಿದ್ದಾರೆ. ಕರ್ನಾಟಕ ಕೂಡ ಈ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ವಿನಂತಿಸಿಕೊಂಡರು.

ಜನ ಪರ್ಯಾಯ ಅಧಿವೇಶನಕ್ಕೆ ದಲಿತ ಹಾಗೂ ಕಾರ್ಮಿಕ ಸಂಘಟನೆಗಳು ಒಂದಾಗಿರುವುದು ಹೆಮ್ಮೆಯ ಸಂಗತಿ. ದೇಶಕ್ಕೆ ಕರ್ನಾಟಕ ನಡೆ ಮಾದರಿಯಾಗಲಿ. ನಂಜುಂಡಸ್ವಾಮಿ ಕಾಲದಲ್ಲೂ ಈ ಒಗ್ಗಟ್ಟೂ ಇರಲಿಲ್ಲ. ಇದು ಹೀಗೆ ಮುಂದುವರಿದಲ್ಲಿ ನಮ್ಮನ್ನು ಯಾರು ಸೋಲಿಸಲಾರರು ಎಂದರು.

ಎಸ್‌ಕೆಎಂ ನಾಯಕಿ ಕವಿತಾ ಕುರುಗಂಟಿ ಮಾತನಾಡಿ, “ದೆಹಲಿಯ ಚಾರಿತ್ರಿಕ ಹೋರಾಟವನ್ನು ಯಾರು ಮರೆತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದನ್ನು ನಿರ್ಲಕ್ಷಿಸಿದರೆ ಅವರಿಗೂ ತಕ್ಕ ಪಾಠ ಕಲಿಸಬೇಕಾಗುತ್ತದೆ. ಕೂಡಲೇ ಸಿಎಂ ಅವರು ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದರು.

ಕೆಆರ್‌ಎಸ್‌ಎಸ್‌ ಕಾರ್ಯಾಧ್ಯಕ್ಷ ಜೆಎಂ ವೀರಸಂಗಯ್ಯ ಮಾತನಾಡಿ, “ಕಾರ್ಪೋರೆಟ್ ಕಂಪನಿಗಳಿಗೆ ಸರ್ಕಾರ ಅನುಕೂಲ ಮಾಡಿಕೊಡಲು ಶ್ರಮಿಸುತ್ತಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲಾಗಿದೆ. ರೈತ ಸಂಘಟನೆಗಳ ಕಾರ್ಯಕರ್ತರು ಕೊಡಗಿಗೆ ನುಗ್ಗಿ ಎಲ್ಲ ಮೀಟರ್‌ಗಳನ್ನು ಕಿತ್ತೊಗೆಯುತ್ತೇವೆ” ಎಂದು ಎಚ್ಚರಿಸಿದರು.

ಮುಂದುವರಿದು, “ರೈತರಿಗೆ ಕೇವಲ ಸಾವಿರ ಅಂಕಿಯಲ್ಲಿ ಅನುದಾನ ನೀಡಲಾಗುತ್ತಿದೆ. ಕರ್ನಾಟಕದಲ್ಲೇ ಶೇ. 65 ರಷ್ಟು ರೈತರು ಇದ್ದಾರೆ. ವಾಸ್ತವ ಹೀಗಿರುವಾಗ 1.35 ಲಕ್ಷ ಕೋಟಿ ರೈತರಿಗೆ ಅನುದಾನ ಮೀಸಲಿಡಬೇಕು” ಎಂದು ಒತ್ತಾಯಿಸಿದರು.

ಜನಾಂದೋಲನ ಮಹಾಮೈತ್ರಿ (ಜೆಎಂಎಂ) ರಾಜ್ಯಾಧ್ಯಕ್ಷರಾದ ಎಸ್‌ಆರ್ ಹಿರೇಮಠ ಮಾತನಾಡಿ, “ಪ್ರಜಾಪ್ರಭುತ್ವದ ನೈಜ ಮಾಲೀಕರು ನಾವು. ಶ್ರಮಜೀವಿಗಳನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳಬೇಕು. ಮೂರು ವಿವಾದಿತ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯದೇ ಇದ್ದಲ್ಲಿ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ನಾವು ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಆರ್‌ಎಸ್‌ಎಸ್‌ ರಾಜ್ಯಾಧ್ಯಕ್ಷ ಬಡಗಲಪುರದ ನಾಗೇಂದ್ರ, “ಬರುವ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಪಕ್ಷಾತೀತವಾಗಿ ಎಲ್ಲರೂ ಒಂದುಗೂಡಿ ರಾಜಕೀಯ ನಾಯಕರಿಗೆ ತಕ್ಕ ಉತ್ತರ ನೀಡುತ್ತೇವೆ,” ಎಂದು ವಿವರಿಸಿದರು. 

ಕಾರ್ಯಕ್ರಮದಲ್ಲಿ ಬಿಕೆಎಸ್ ರಾಜ್ಯಾಧ್ಯಕ್ಷ ಸಿದ್ದನಗೌಡ ಮೋದಗಿ, ಕೆಪಿಆರ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜು, ಜೆಎಂಎಸ್ ರಾಜ್ಯ ಅಧ್ಯಕ್ಷೆ ದೇವಿ, ಡಿಎಸ್ಎಸ್ ನಾಯಕ ಗುರುಪ್ರಸಾದ್ ಕೆರಗೋಡು ಇತರರು ಇದ್ದರು. ಕರ್ನಾಟಕ ಹಲವಾರು ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಮಹಿಳೆಯರು ಭಾಗಿಯಾಗಿದ್ದರು.

ನಿಮಗೆ ಏನು ಅನ್ನಿಸ್ತು?
3 ವೋಟ್