ಟಿ20| ಮೊಹಾಲಿಯಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯ, 4 ವರ್ಷಗಳ ಬಳಿಕ ಮರಳಿದ ಉಮೇಶ್‌ ಯಾದವ್‌

  • 43 ತಿಂಗಳ ಬಳಿಕ ಮರಳಿದ ಉಮೇಶ್‌ ಯಾದವ್‌
  • ಬುಮ್ರಾಗೆ ವಿಶ್ರಾಂತಿ, ಹರ್ಷಲ್‌ ಪಟೇಲ್‌ಗೆ ಸ್ಥಾನ

ಭಾರತ- ಆಸ್ಟ್ರೇಲಿಯ ನಡುವಿನ ಮೂರು ಪಂದ್ಯಗಳ 20 ಸರಣಿಯ ಮೊದಲ ಪಂದ್ಯದಲ್ಲಿ, ಟಾಸ್‌ ಗೆದ್ದ ಆಸ್ಟ್ರೇಲಿಯ, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದೆ. ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಟೂರ್ನಿಗೆ ಸಜ್ಜಾಗಲು ಉಭಯ ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ.

ಬುಮ್ರಾಗೆ ವಿಶ್ರಾಂತಿ, ಹರ್ಷಲ್‌ ಪಟೇಲ್‌ಗೆ ಸ್ಥಾನ

ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರೂ ಸಹ, ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ, ಮಂಗಳವಾರದ ಪಂದ್ಯದಿಂದ ಹೊಗುಳಿದಿದ್ದಾರೆ. ರಿಸ್ಕ್‌ ತೆಗೆದುಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ಟೀಮ್‌ ಇಂಡಿಯಾ, ಬುಮ್ರಾಗೆ ವಿಶ್ರಾಂತಿ ನೀಡಿದೆ. ಆದರೆ ಹರ್ಷಲ್‌ ಪಟೇಲ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ವಿಕೆಟ್‌ ಕೀಪರ್‌ ಪೈಪೋಟಿಯಲ್ಲಿ ರಿಷಭ್‌ ಪಂತ್‌ ಬದಲು ದಿನೇಶ್‌ ಕಾರ್ತಿಕ್‌ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

43 ತಿಂಗಳ ಬಳಿಕ ಮರಳಿದ ಉಮೇಶ್‌ ಯಾದವ್‌

ಅಚ್ಚರಿಯ ಆಯ್ಕೆ ಎಂಬಂತೆ ವೇಗಿ ಉಮೇಶ್‌ ಯಾದವ್‌ ಬರೋಬ್ಬರಿ 43 ತಿಂಗಳುಗಳ ಬಳಿಕ ಟೀಮ್‌ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ. ಆಸ್ಟ್ರೇಲಿಯ ತಂಡದಲ್ಲಿ ಯುವ ಬ್ಯಾಟ್ಸ್‌ಮನ್‌ ಟಿಮ್‌ ಡೇವಿಡ್‌ ಚೊಚ್ಚಲ ಅವಕಾಶ ಪಡೆದಿದ್ದಾರೆ.

ಉಭಯ ತಂಡಗಳ ಆಡುವ ಹನ್ನೊಂದರ ಬಳಗ

ಭಾರತ XI: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್‌ ಕೀಪರ್), ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್

ಆಸ್ಟ್ರೇಲಿಯಾ XI: ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್‌ ಕೀಪರ್), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಸರಣಿಯ ಉಳಿದ ಎರಡು ಪಂದ್ಯಗಳು ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್‌ನಲ್ಲಿ (ಸೆಪ್ಟೆಂಬರ್ 25) ನಡೆಯಲಿವೆ.

ಆಸೀಸ್‌ ತಂಡದಲ್ಲಿ ಹಿರಿಯರಿಗೆ ವಿಶ್ರಾಂತಿ

ತಮ್ಮದೇ ನೆಲದಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಗೂ ಮುನ್ನ ಭಾರತಕ್ಕೆ ಬಂದಿಳಿದಿರುವ ಹಾಲಿ ಚಾಂಪಿಯನ್‌ ಆಸೀಸ್‌ ತಂಡ, ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿರುವುದು ವಿಶೇಷ. ಆರೋನ್‌ ಫಿಂಚ್‌ ನೇತೃತ್ವದ ಆಸ್ಟ್ರೇಲಿಯ ಪಾಳಯದಿಂದ ಡೇವಿಡ್‌ ವಾರ್ನರ್‌, ಮಿಚೆಲ್‌ ಸ್ಟಾರ್ಕ್‌, ಮಾರ್ಕಸ್‌ ಸ್ಟೋಯ್ನಿಸ್‌ ಹಾಗೂ ಮಿಷೆಲ್‌ ಮಾರ್ಷ್‌ ಹೊರಗುಳಿದಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್