17 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಇಂಗ್ಲೆಂಡ್‌ ತಂಡಕ್ಕೆ ಮೊದಲ ಗೆಲುವು

  • 7 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್‌ ಶುಭಾರಂಭ
  • 1538 ದಿನದ ಬಳಿಕ ಅಲೆಕ್ಸ್‌ ಹೇಲ್ಸ್‌ ಮೊದಲ ಅರ್ಧಶತಕ

ಸುದೀರ್ಘ 17 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್‌ ತಂಡ, ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. 7 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಮೊಯಿನ್‌ ಅಲಿ ಸಾರಥ್ಯದ ಆಂಗ್ಲ ಪಡೆ, ಅತಿಥೇಯ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಭರ್ಜರಿಯಾಗಿಯೇ ಮಣಿಸಿದೆ.

ಕರಾಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕಿಸ್ತಾನ, ಆರಂಭಿಕ ಮುಹಮ್ಮದ್‌ ರಿಝ್ವಾನ್‌ ಗಳಿಸಿದ ಅರ್ಧಶತಕದ (68 ರನ್‌) ನೆರವಿನಿಂದ 7 ವಿಕೆಟ್‌ ನಷ್ಟದಲ್ಲಿ 158 ರನ್‌ ಗಳಿಸಿತ್ತು. ಸಾಮಾನ್ಯ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌, ಅಲೆಕ್ಸ್‌ ಹೇಲ್ಸ್‌ (53 ರನ್‌) ಮತ್ತು ಹ್ಯಾರಿ ಬ್ರೂಕ್‌ ಗಳಿಸಿದ 42 ರನ್‌ಗಳ ನೆರವಿನಿಂದ 19.4 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತು.

 4 ವರ್ಷಗಳ ಬಳಿಕ ಮೊದಲ ಅರ್ಧಶತಕ

ಸುಮಾರು ಮೂರು ವರ್ಷಗಳ ಬಳಿಕ ಇಂಗ್ಲೆಂಡ್‌ ರಾಷ್ಟ್ರೀಯ ತಂಡಕ್ಕೆ ಮರಳಿರುವ ಬ್ಯಾಟ್ಸ್‌ಮನ್‌ ಅಲೆಕ್ಸ್‌ ಹೇಲ್ಸ್‌, ಪುನರಾಗಮನದ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದರು. ಇದು ನಾಲ್ಕೂವರೆ ವರ್ಷಗಳ (1538 ದಿನ) ಬಳಿಕ ಹೇಲ್ಸ್‌ ಬ್ಯಾಟ್‌ನಿಂದ ದಾಖಲಾದ ಮೊದಲ ಅರ್ಧಶತಕ. 40 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 53 ರನ್‌ ಗಳಿಸಿದ ಹೇಲ್ಸ್‌, ಆಸಿಫ್‌ ರೌಫ್‌ ಬೌಲಿಂಗ್‌ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. 2018ರ ಜುಲೈನಲ್ಲಿ ಕೊನೆಯದಾಗಿ ಅಲೆಕ್ಸ್‌, ಹೇಲ್ಸ್‌ 50 ರನ್‌ಗಳ ಗಡಿ ದಾಟಿದ್ದರು.

ಕೊನೆಯ ಓವರ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ ಹ್ಯಾರಿ ಬ್ರೂಕ್‌, 25 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 42 ರನ್‌ ಗಳಿಸಿ ಅಜೇಯರಾಗುಳಿದರು. ಇದು ಬ್ರೂಕ್‌ ವೃತ್ತಿ ಜೀವನದ 5ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಗಿತ್ತು.

ಪಾಕಿಸ್ತಾನದ ಪರ ಉಸ್ಮಾನ್‌ ಖಾದಿರ್‌ 2 ವಿಕೆಟ್‌, ಶಹನವಾಝ್‌ ದಹಾನಿ ಮತ್ತು ಹ್ಯಾರಿಸ್‌ ರೌಫ್‌ ತಲಾ 1 ವಿಕೆಟ್‌ ಪಡೆದರು. 7 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ಇದೇ ಮೈದಾನದಲ್ಲಿ ಸೆಪ್ಟಂಬರ್‌ 22, ಗುರುವಾರದಂದು ನಡೆಯಲಿದೆ.

ಈ ಸುದ್ದಿ ಓದಿದ್ದೀರಾ ? : ಪಾಠ ಕಲಿಯದ ರೋಹಿತ್| ಮೂರು ಬಾರಿ ಲಯ ತಪ್ಪಿದ ಭುವನೇಶ್ವರ್‌ ಎಸೆದ 19ನೇ ಓವರ್‌

ಮೊಯಿನ್‌ ಅಲಿ ಸಾರ‍ಥ್ಯ

ಇಂಗ್ಲೆಂಡ್ ಕ್ರಿಕೆಟ್‌ ತಂಡದ ಪೂರ್ಣಾವಧಿ ನಾಯಕ ಜಾಸ್‌ ಬಟ್ಲರ್‌ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದು, ಈ ಹಿನ್ನೆಲೆಯಲ್ಲಿ ನಾಯಕನ ಜವಾಬ್ದಾರಿ ಮೊಯಿನ್‌ ಅಲಿ ಹೆಗಲೇರಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್‌ ಮಾರ್ಗನ್‌ ನಿವೃತ್ತಿ ಘೋಷಿಸಿದ ಬಳಿಕ, ಮೊಯಿನ್‌ ಅಲಿ ಅವರನ್ನು ಇಂಗ್ಲೆಂಡ್‌ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಈ ನಡುವೆ ನಾಲ್ಕು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅಲಿ ಇಂಗ್ಲೆಂಡ್‌ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 36 ವರ್ಷದ ಮೊಯಿನ್‌ ಅಲಿ, ಪಾಕಿಸ್ತಾನ ಪ್ರೀಮಿಯರ್‌ ಲೀಗ್‌ನಲ್ಲಿ ಆಡಿದ ಅನುಭವವನ್ನೂ ಹೊಂದಿದ್ದಾರೆ.

2005ರಲ್ಲಿ ಇಂಗ್ಲೆಂಡ್‌ ತಂಡ ಕೊನೆಯದಾಗಿ ಪಾಕಿಸ್ತಾನದಲ್ಲಿ ಪಂದ್ಯವನ್ನಾಡಿತ್ತು. ಆ ಬಳಿಕ ಭದ್ರತೆಯ ಕಾರಣವೊಡ್ಡಿ ಪಾಕ್‌ ಪ್ರವಾಸದಿಂದ ಆಂಗ್ಲನ್ನರು ಹಿಂದೆ ಸರಿದಿದ್ದರು. ಈ ನಡುವೆ ನಿಗದಿಯಾಗಿದ್ದ ಎಲ್ಲ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು

ನಿಮಗೆ ಏನು ಅನ್ನಿಸ್ತು?
0 ವೋಟ್