
- ಗ್ರೂಪ್ ಹಂತದ ಪಂದ್ಯಗಳ ಸಮಯದಲ್ಲಿ ಬದಲಾವಣೆ
- ರಾತ್ರಿ 8.30 ಮತ್ತು 12.30ಕ್ಕೆ ಏಕಕಾಲದಲ್ಲಿ ಎರಡು ಪಂದ್ಯ
ಕತಾರ್ನಲ್ಲಿ ನಡೆಯುತ್ತಿರುವ 22ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಎಲ್ಲಾ 32 ತಂಡಗಳು ತಲಾ ಎರಡು ಪಂದ್ಯಗಳನ್ನು ಮುಗಿಸಿವೆ. ಅದಾಗಿಯೂ ಹಾಲಿ ಚಾಂಪಿಯನ್ ಫ್ರಾನ್ಸ್, ಬ್ರೆಜಿಲ್ ಹಾಗೂ ಪೋರ್ಚುಗಲ್ ಸೇರಿದಂತೆ ಕೇವಲ 3 ತಂಡಗಳಷ್ಟೇ ಇದುವರೆಗೆ 16 ಘಟ್ಟಕ್ಕೆ ಅರ್ಹತೆ ಪಡೆದಿದೆ. ಆತಿಥೇಯ ಕತಾರ್ ಮತ್ತು ಕೆನಡಾ ತಂಡಗಳು ಅಧಿಕೃತವಾಗಿ ವಿಶ್ವಕಪ್ ಟೂರ್ನಿಯಿಂದ ಹೊರನಡೆದಿದೆ.
ಅರ್ಜೆಂಟಿನಾ, ಜರ್ಮನಿ, ಇಂಗ್ಲೆಂಡ್ ಸೇರಿದಂತೆ 27 ತಂಡಗಳಿಗೆ ಗ್ರೂಪ್ ಹಂತದ ಅಂತಿಮ ಪಂದ್ಯದ ಫಲಿತಾಂಶ, ಟೂರ್ನಿಯಲ್ಲಿ ಅಳಿವು-ಉಳಿವನ್ನು ನಿರ್ಧರಿಸಲಿದೆ. ಮಂಗಳವಾರದಿಂದ ಗ್ರೂಪ್ ಹಂತದ ಪಂದ್ಯಗಳು ನಡೆಯುವ ಸಮಯದಲ್ಲಿ ಬದಲಾವಣೆಯಾಗಿದೆ.
ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಇದುವರೆಗೂ ಪ್ರತಿನಿತ್ಯ ಪ್ರತ್ಯೇಕ ಸಮಯದಲ್ಲಿ ತಲಾ 4 ಪಂದ್ಯಗಳು ನಡೆಯುತ್ತಿದ್ದವು. ಮಧ್ಯಾಹ್ನ 3.30, ಸಂಜೆ 6.30, ರಾತ್ರಿ 9.30 ಹಾಗೂ ಮಧ್ಯರಾತ್ರಿ 12.30ಕ್ಕೆ ಪಂದ್ಯಗಳು ಆರಂಭವಾಗುತ್ತಿದ್ದವು. ಆದರೆ ಮಂಗಳವಾರದಿಂದ (ನವೆಂಬರ್ 29) ಈ ಸಮಯದಲ್ಲಿ ಬದಲಾವಣೆಯಾಗಲಿದೆ. ಮಧ್ಯಾಹ್ನ 3.30 ಮತ್ತು ಸಂಜೆ 6.30ರ ಬದಲು ರಾತ್ರಿ 8.30 ಮತ್ತು ಮಧ್ಯರಾತ್ರಿ 12.30ಕ್ಕೆ ಏಕಕಾಲದಲ್ಲಿ ಒಂದೇ ಗುಂಪಿನ ಎರಡೆರಡು ಪಂದ್ಯಗಳು ನಡೆಯಲಿವೆ.
ಈ ಸುದ್ದಿಯನ್ನು ಓದಿದ್ದೀರಾ ? : ಫಿಫಾ ವಿಶ್ವಕಪ್ | ಒಂದೇ ದಿನದಲ್ಲಿ 14 ಗೋಲು; 27 ತಂಡಗಳ ಭವಿಷ್ಯ ನಿರ್ಧರಿಸಲಿದೆ ಅಂತಿಮ ಪಂದ್ಯ!
1982ರ ಫಿಫಾ ವಿಶ್ವಕಪ್ ಟೂರ್ನಿಯ ಬಳಿಕ ಗ್ರೂಪ್ ಹಂತದ ಅಂತಿಮ ಪಂದ್ಯಗಳನ್ನು ಏಕಕಾಲದಲ್ಲಿ ನಡೆಸುವ ವ್ಯವಸ್ಥೆ ಜಾರಿಯಲ್ಲಿದೆ. ಸೋಲು- ಗೆಲುವಿನಾಚೆಗೆ ತಮ್ಮದೇ ಗುಂಪಿನ ಉಳಿದ ತಂಡಗಳ ಫಲಿತಾಂಶಗಳೂ ಸಹ, ಮುಂದಿನ ಸುತ್ತು ಪ್ರವೇಶಿಸಲು ನಿರ್ಣಾಯಕವಾಗುವ ಬಹುತೇಕ ಸಂದರ್ಭಗಳು, ಗ್ರೂಪ್ ಹಂತದ ಅಂತಿಮ ಪಂದ್ಯಗಳ ವೇಳೆ ನಿರ್ಮಾಣವಾಗುತ್ತದೆ. ಹೀಗಾಗಿ ಯಾವುದೇ ತಂಡ, ಇತರ ಪಂದ್ಯಗಳ ಫಲಿತಾಂಶದ ಅನುಕೂಲ ಪಡೆಯದೇ ಇರಲು ಫಿಫಾ, ಏಕಕಾಲದಲ್ಲಿ ಪಂದ್ಯಗಳನ್ನು ಆಯೋಜಿಸುತ್ತಿದೆ.
FIFA World Cup: The 'Disgrace of Gijon' that forced FIFA to hold all final group-stage matches at the same time@FIFAWorldCup https://t.co/zqqalRXQ1s#FIFAWorldCup #Qatar2022 #SportsTakFifaUpdates pic.twitter.com/Fb73ra4B5d
— Sports Tak (@sports_tak) November 29, 2022
ಮಂಗಳವಾರದ ಪಂದ್ಯಗಳ ವೇಳಾಪಟ್ಟಿ
- ಗ್ರೂಪ್ A | ಇಕ್ವೆಡಾರ್ vs ಸೆನೆಗಲ್ | ಪಂದ್ಯ ಪ್ರಾರಂಭ; ರಾತ್ರಿ 8.30 | ಖಲೀಫಾ ಇಂಟರ್ನ್ಯಾಷನಲ್ ಸ್ಟೇಡಿಯಂ
- ಗ್ರೂಪ್ A | ನೆದರ್ಲ್ಯಾಂಡ್ಸ್ vs ಕತಾರ್ | ಪಂದ್ಯ ಪ್ರಾರಂಭ; ರಾತ್ರಿ 8.30 | ಅಲ್ ಬೈತ್ ಸ್ಟೇಡಿಯಂ
- ಗ್ರೂಪ್ B | ವೇಲ್ಸ್ vs ಇಂಗ್ಲೆಂಡ್ | ಪಂದ್ಯ ಪ್ರಾರಂಭ; ಮಧ್ಯರಾತ್ರಿ 12.30 | ಅಹ್ಮದ್ ಬಿನ್ ಅಲಿ ಸ್ಟೇಡಿಯಂ
- ಗ್ರೂಪ್ B | ಇರಾನ್ vs ಅಮೆರಿಕ | ಪಂದ್ಯ ಪ್ರಾರಂಭ; ಮಧ್ಯರಾತ್ರಿ 12.30 | ಅಲ್ ತುಮಾಮ ಸ್ಟೇಡಿಯಂ