ರನೌಟ್‌ ʻವಿವಾದʼ | ಬೆಂಬಲಕ್ಕೆ ನಿಂತ ಇಂಗ್ಲೆಂಡ್‌ ಪುರುಷ ಆಟಗಾರರಿಗೆ ನಿಯಮ ನೆನಪಿಸಿದ ನೆಟ್ಟಿಗರು

  • ಟ್ವಿಟರ್‌ನಲ್ಲಿ ಬಿರುಸಿನ ಪರ- ವಿರೋಧ ಚರ್ಚೆ
  • ದೀಪ್ತಿ ಶರ್ಮಾ ರನೌಟ್‌ ಬಳಿಕ ಅಶ್ವಿನ್‌ ವೈರಲ್

ಇಂಗ್ಲೆಂಡ್‌ ಮಹಿಳಾ ತಂಡವನ್ನು ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲೂ ಮಣಿಸುವ ಮೂಲಕ ಹರ್ಮನ್‌ಪ್ರೀತ್‌ ಕೌರ್‌ ಬಳಗ ಐತಿಹಾಸಿಕ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿದೆ. ಲಾರ್ಡ್ಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ, ಕಾಟೆ ಕ್ರೀಸ್‌ ಬಳಗವನ್ನು 16 ರನ್‌ಗಳಿಂದ ಮಣಿಸಿತು.

ಆದರೆ ಪಂದ್ಯ ಮುಗಿದ ಬಳಿಕ ಟ್ವಿಟರ್‌ನಲ್ಲಿ ಆರಂಭವಾಗಿರುವ ಪರ- ವಿರೋಧ ಚರ್ಚೆ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಬಹುತೇಕ ಮಂದಿ ದೀಪ್ತಿ ಶರ್ಮಾ ಮಾಡಿದ ರನೌಟ್‌ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಇದು ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ನಡೆ ಎಂದಿದ್ದಾರೆ.

ಏನಿದು ವಿವಾದ?

ಇಂಗ್ಲೆಂಡ್‌ ಗೆಲುವಿಗೆ ಏಕಾಂಕಿ ಹೋರಾಟ ನಡೆಸಿದ್ದ ಚಾರ್ಲಿ ಡೀನ್‌, ಕೊನೆಯವರಾಗಿ ರನೌಟ್‌‌ (ಮಂಕಡಿಂಗ್) ರೂಪದಲ್ಲಿ ನಿರ್ಗಮಿಸಿದ್ದರು. ದೀಪ್ತಿ ಶರ್ಮಾ ಬೌಲಿಂಗ್‌ ವೇಳೆ ನಾನ್‌ಸ್ಟ್ರೈಕ್‌ನಲ್ಲಿದ್ದ ಡೀನ್‌, ಬೌಲ್‌ ಮಾಡುವ ಮೊದಲೇ ಕ್ರೀಸ್‌ ಬಿಟ್ಟಿದ್ದರು. ಈ ವೇಳೆ ಶರ್ಮಾ, ಚೆಂಡನ್ನು ವಿಕೆಟ್‌ಗೆ ತಾಗಿಸಿದರು. ಡೀನ್‌ ಕ್ರೀಸ್‌ನಲ್ಲಿರಲಿಲ್ಲ. ಮೂರನೇ ಅಂಪೈರ್‌ ಔಟ್‌ ತೀರ್ಪು ನೀಡಿದರು. ಈ ರೀತಿಯಾಗಿ ರನೌಟ್‌ ಮಾಡುವುದನ್ನು ಈವರೆಗೂ ‘ಮಂಕಡಿಂಗ್’ ಎಂದು ಕರೆಯಲಾಗುತ್ತಿತ್ತು. ಆದರೆ ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿಯಮಗಳಲ್ಲಿ ತಿದ್ದುಪಡಿ ಮಾಡಿದ್ದು, ನಾನ್‌ ಸ್ಟ್ರೈಕರ್ ತುದಿಯಲ್ಲಿರುವವರನ್ನು ರನೌಟ್ ಮಾಡುವುದಕ್ಕೆ ಅವಕಾಶ ಕಲ್ಪಿಸಿದೆ.

AV Eye Hospital ad

ಮಂಕಡಿಂಗ್‌ ರನೌಟ್‌ಗೆ ನಾಲ್ಕು ಬಾರಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಾಕ್ಷಿಯಾಗಿದೆ. ಆದರೆ ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್‌ ಒಬ್ಬಾಕೆ ಈ ರೀತಿಯಾಗಿ ನಿರ್ಗಮಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಮೂರನೇ ಅಂಪೈರ್‌ ತೀರ್ಪು ಬರುತ್ತಲೇ ಸಹ ಆಟಗಾತಿ ಫ್ರೇಯ ಡೇವಿಸ್‌ ಅವರನ್ನು ತಬ್ಬಿಕೊಂಡು ಚಾರ್ಲಿ ಡೀನ್‌ ಮೈದಾನದಲ್ಲೇ ಅಳಲು ಆರಂಭಿಸಿದರು. ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರೂ ಸಹ ಭಾರತ ಪಂದ್ಯ ಗೆದ್ದ ರೀತಿಯನ್ನು ಗೇಲಿ ಮಾಡಲು ಆರಂಭಿಸಿದ್ದರು. ಅದು ಅಲ್ಲಿಗೇ ನಿಲ್ಲಲಿಲ್ಲ

ಮಹಿಳಾ ತಂಡದ ಬೆಂಬಲಕ್ಕೆ ನಿಂತ ಪುರುಷ ತಂಡ

ಇಂಗ್ಲೆಂಡ್ ಕ್ರಿಕೆಟಿಗರಾದ ಜೇಮ್ಸ್‌ ಆಂಡರ್‌ಸನ್, ಸ್ಟುವರ್ಟ್‌ ಬ್ರಾಡ್, ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ ಕೆಲವರು ದೀಪ್ತಿ ಶರ್ಮಾ ನಡೆಯನ್ನು ಟೀಕಿಸಿದ್ದಾರೆ. "ಕ್ರಿಕೆಟ್ ಆಡುವ ಯಾರೂ ಕೂಡಾ ಇದನ್ನು ಒಪ್ಪಲು ಸಾಧ್ಯವಿಲ್ಲ, ಇದು ಕ್ರಿಕೆಟ್ ಅಲ್ಲ" ಎಂದು ಸ್ಯಾಮ್ ಬಿಲ್ಲಿಂಗ್ಸ್‌ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್‌ನ ಹಿರಿಯ ಬೌಲರ್‌ ಜೇಮ್ಸ್ ಆಂಡರ್‌ಸನ್‌, "ಬೌಲಿಂಗ್ ಮಾಡುವ ಉದ್ದೇಶವೇ ಇರುವಂತೆ ಕಾಣುತ್ತಿಲ್ಲ" ಎಂದು ಕೋಪದ ಎಮೋಜಿ ಬಳಸಿ ಟ್ವೀಟ್ ಮಾಡಿದ್ದಾರೆ.

ಭಾರತದ ಮಾಜಿ ಆರಂಭಿಕರಾದ ವಾಸೀಂ ಜಾಫರ್, ವಿರೇಂದ್ರ ಸೆಹ್ವಾಗ್ ಹಾಗೂ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್, ಸೇರಿದಂತೆ ಹಲವು ಕ್ರಿಕೆಟಿಗರು ದೀಪ್ತಿ ಶರ್ಮಾ ಅವರ ರನೌಟ್ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 

ತುಂಬಾ ಸರಳ ಎಂದ ವಾಸೀಂ ಜಾಫರ್

"ಇದು ತುಂಬಾ ಸರಳ, ಬೌಲರ್ ಬೌಲಿಂಗ್ ಮಾಡಲು ಓಡಿ ಬರುತ್ತಿದ್ದಂತೆಯೇ ಸ್ಟ್ರೈಕ್‌ನಲ್ಲಿರುವ ಬ್ಯಾಟರ್ ಹಾಗೂ ನಾನ್‌ ಸ್ಟ್ರೈಕರ್‌ನಲ್ಲಿರುವ ಬ್ಯಾಟರ್‌ ಚೆಂಡಿನ ಮೇಲೆ ಗಮನ ಕೊಡಬೇಕು. ಒಂಚೂರು ಅಜಾಗರೂಕತೆ ತೋರಿದರೂ ಎದುರಾಳಿ ನಿಮ್ಮನ್ನು ಔಟ್ ಮಾಡುತ್ತಾರೆ. ಅದು ಯಾವುದೇ ಬದಿಯಲ್ಲಾದರೂ ಔಟ್ ಆಗುವ ಸಾಧ್ಯತೆ ಇರುತ್ತದೆ" ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.

ಕಾಲೆಳೆದ ವಿರೇಂದ್ರ ಸೆಹ್ವಾಗ್

ಕ್ರಿಕೆಟ್‌ ಕಂಡುಹಿಡಿದವರೇ ನಿಯಮ ಮರೆತಿದ್ದಾರೆ ಎಂದು ವಿರೇಂದ್ರ ಸೆಹ್ವಾಗ್ ನಾನ್‌ ಸ್ಟ್ರೈಕ್ ರನೌಟ್‌ ನಿಯಮದ ಮಾಹಿತಿಯೊಂದಿಗೆ ಟ್ವೀಟ್ ಮಾಡಿ ಆಂಗ್ಲ ಆಟಗಾರರ ಕಾಲೆಳೆದಿದ್ದಾರೆ.

ದೀಪ್ತಿ ಶರ್ಮಾ ʻಹೀರೋʼ ಎಂದ ಅಶ್ವಿನ್‌

ಮಹಿಳಾ ಕ್ರಿಕೆಟಿಗರು ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಂದ್ಯ ಮುಗಿದ ನಂತರ ಟ್ವಿಟರ್‌ನಲ್ಲಿ 'ಅಶ್ವಿನ್‌' ಯಾಕೆ ಟ್ರೆಂಡ್ ಆಗಿದ್ದಾರೆ ಎನ್ನುವ ಬಗ್ಗೆ ಹಲವರು ಚಿಂತಿಸಿದ್ದರು. "ಇಂದು ರಾತ್ರಿ ನಿಜವಾದ ಬೌಲಿಂಗ್ ಹೀರೋ ದೀಪ್ತಿ ಶರ್ಮಾ" ಎಂದು ಟ್ವೀಟ್ ಮಾಡುವ ಮೂಲಕ ದೀಪ್ತಿ ಅವರ ಕ್ರಮವನ್ನು ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಮರ್ಥಿಸಿಕೊಂಡಿದ್ದರು. ಅದೇ ಕಾರಣಕ್ಕೆ ಅವರು ಟ್ವಿಟರ್ ಟ್ರೆಂಡ್ ಆಗಿದ್ದಾರೆ.

ಪದೇ ಪದೇ ನೆನಪಾಗುವ ಅಶ್ವಿನ್‌ ʻಮಂಕಂಡಿಗ್‌ʼ !

2019ರ ಐಪಿಎಲ್‌ ಆವೃತ್ತಿಯಲ್ಲಿ ರವಿಚಂದ್ರನ್ ಅಶ್ವಿನ್‌, ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾಗ, ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು 'ಮಂಕಡಿಂಗ್' ರನೌಟ್ ಮಾಡಿದ್ದರು. ಇದಾದ ಬಳಿಕ ಈ ರೀತಿಯ ಘಟನೆ ನಡೆದಾಗಲೆಲ್ಲಾ ಕ್ರಿಕೆಟ್ ಅಭಿಮಾನಿಗಳು ರವಿಚಂದ್ರನ್ ಅಶ್ವಿನ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ರನೌಟ್‌ ಮಾಡಿದ್ದು ದೀಪ್ತಿ ಶರ್ಮಾ ಆಗಿದ್ದರೂ ಸಹ ಅಶ್ವಿನ್‌ ಟ್ರೆಂಡಿಂಗ್‌ನಲ್ಲಿದ್ದಾರೆ

ನಿಮಗೆ ಏನು ಅನ್ನಿಸ್ತು?
0 ವೋಟ್
eedina app