ಏಷ್ಯಾ ಕಪ್‌| ಟೀಮ್‌ ಇಂಡಿಯಾ- ಪಾಕಿಸ್ತಾನ ಪಂದ್ಯದ ಟಿಕೆಟ್‌ ಬೆಲೆ ₹1.20 ಲಕ್ಷ

  • ಭಾನುವಾರ ದುಬೈನಲ್ಲಿ ನಡೆಯಲಿರುವ ಹೈವೋಲ್ಟೇಜ್‌ ಪಂದ್ಯ
  • ₹54 ಸಾವಿರ ಬೆಲೆಯ ಟಿಕೆಟ್‌ ʻಬ್ಲ್ಯಾಕ್‌ʼನಲ್ಲಿ ₹1.20 ಲಕ್ಷಕ್ಕೆ ಮಾರಾಟ

15ನೇ ಆವೃತ್ತಿಯ ಏಷ್ಯಾ ಕಪ್‌ ಟಿ20 ಟೂರ್ನಿಗೆ ಶನಿವಾರ ದುಬೈನಲ್ಲಿ ಚಾಲನೆ ದೊರೆಯಲಿದೆ. ಆರು ರಾಷ್ಟ್ರಗಳು ಭಾಗವಹಿಸುತ್ತಿರುವ ಟೂರ್ನಿಯಲ್ಲಿ ಭಾನುವಾರ ನಡೆಯುವ ಹೈವೋಲ್ಟೇಜ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ- ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಭಾರತೀಯರು ಮತ್ತು ಪಾಕಿಸ್ತಾನಿಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ದುಬೈ ನಗರದಲ್ಲಿ ಈ ಮಹತ್ವದ ಪಂದ್ಯದ ಟಿಕೆಟ್‌ಗಾಗಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಮೊದಲ ಹಂತದ ಟಿಕೆಟ್‌ ಮಾರಾಟ ಆಗಸ್ಟ್ 15ರಂದು ಪ್ರಾರಂಭವಾಗಿತ್ತಾದರೂ, ಕೇವಲ ಮೂರು ಗಂಟೆಗಳಲ್ಲೇ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಆಗಸ್ಟ್‌ 17ರಂದು ಎರಡನೇ ಹಂತದ ಟಿಕೆಟ್‌ ಮಾರಾಟ ಪ್ರಕ್ರಿಯೆಗಳು ಪ್ರಾರಂಭವಾಗಿತ್ತು. ಆದರೆ ಈ ವೇಳೆ ಯುಎಇ ಕ್ರಿಕೆಟ್‌ ಬೋರ್ಡ್‌ ಹೊಸ ಷರತ್ತೊಂದನ್ನು ಮುಂದಿಟ್ಟಿತ್ತು. ಭಾರತ– ಪಾಕಿಸ್ತಾನ ಪಂದ್ಯ ವೀಕ್ಷಿಸಲು ಬಯಸುವ ಅಭಿಮಾನಿಗಳು, ಹೆಚ್ಚುವರಿಯಾಗಿ ಏಷ್ಯಾಕಪ್‌ನ ಇತರ ಪಂದ್ಯವೊಂದರ ಟಿಕೆಟ್‌ ಕೂಡ ಖರೀದಿಸಬೇಕಿತ್ತು. ಅದಾಗಿಯೂ ಟಿಕೆಟ್‌ಗಳೆಲ್ಲವೂ ಖಾಲಿಯಾಗಿವೆ.

Eedina App

ಟಿಕೆಟ್‌ ಮಾರಾಟ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್‌ನಲ್ಲೇ ನಡೆದಿತ್ತು. 5 ಲಕ್ಷಕ್ಕೂ ಹೆಚ್ಚು ಮಂದಿ ಟಿಕೆಟ್‌ ಖರೀದಿಸಲು ಆನ್‌ಲೈನ್‌ ಸರತಿಯಲ್ಲಿ ಕಾಯುತ್ತಿದ್ದರು ಎಂದು ಗಲ್ಫ್‌ ಮಾಧ್ಯಮಗಳು ವರದಿ ಮಾಡಿದೆ.

ಟಿಕೆಟ್‌ ಬೆಲೆ ₹1.20 ಲಕ್ಷ

AV Eye Hospital ad

ಭಾನುವಾರ ನಡೆಯಲಿರುವ ಪಂದ್ಯದ ಟಿಕೆಟ್‌ಗಳೆಲ್ಲವೂ ಈಗಾಗಲೇ ಮಾರಾಟವಾಗಿದ್ದರೂ, ಅಭಿಮಾನಿಗಳು ಹೇಗಾದರೂ ಮಾಡಿ ಟಿಕೆಟ್‌ ಪಡೆಯಲೇಬೇಕೆಂಬ ಪಣ ತೊಟ್ಟಿದ್ದಾರೆ. ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಟಿಕೆಟ್‌ ಹೊಂದಿರುವವರು ತಾವು ಖರೀದಿಸಿದ ಟಿಕೆಟ್‌ ಅನ್ನು ಮೂಲ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದಕ್ಕಾಗಿ ಕ್ಲಾಸಿಫೈಡ್ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜಾಹೀರಾತನ್ನು ನೀಡುತ್ತಿದ್ದಾರೆ. 2,500 ದಿರ್ಹಂ (₹54 ಸಾವಿರ) ಬೆಲೆಯ ಪ್ರೀಮಿಯಂ ಟಿಕೆಟ್‌ಗಳು ಇದೀಗ ʻಬ್ಲ್ಯಾಕ್‌ʼನಲ್ಲಿ 5500 ದಿರ್ಹಮ್‌ಗಳಿಗೆ (ಸುಮಾರು ₹1.20 ಲಕ್ಷ) ಮಾರಾಟ ಮಾಡಲಾಗುತ್ತಿದೆ. 250 ದಿರ್ಹಂ (₹5400) ಮುಖಬೆಲೆಯ ಸಾಮಾನ್ಯ ಟಿಕೆಟ್‌ಗಳನ್ನು 2,500 ದಿರ್ಹಂಗೆ (ಸುಮಾರು ₹54000 ) ಮಾರಾಟ ಮಾಡಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ ? : ಏಷ್ಯಾ ಕಪ್‌ | ಹ್ಯಾಟ್ರಿಕ್‌ ಕಪ್ ತವಕದಲ್ಲಿ ಟೀಮ್‌ ಇಂಡಿಯಾ

ಆದರೆ ಈ ಬೆಳವಣಿಗೆಯನ್ನು ಗಮನಿಸಿರುವ ಏಷ್ಯಾಕಪ್ ಟಿಕೆಟ್‌ ಮಾರಾಟ ಪಾಲುದಾರ ಸಂಸ್ಥೆ ‘ಪ್ಲಾಟಿನಂ ಲಿಸ್ಟ್’, ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.  ʻಇತರ ಮಾರ್ಗಗಳʼ ಮೂಲಕ ಖರೀದಿಸಿದ ಇಂತಹ ಟಿಕೆಟ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಈ ಟಿಕೆಟ್‌ಗಳ ಮೂಲಕ ಮೈದಾನ ಪ್ರವೇಶಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ನಾಲ್ಕು ಕಂಪ್ಯೂಟರ್‌ಗಳಲ್ಲಿ ಪ್ರಯತ್ನಿಸಿದೆ: ಸಾದ್ ಅಹ್ಮದ್

ಇಂಡೋ- ಪಾಕ್‌ ಹೈ ಕದನದ ಟಿಕೆಟ್‌ ಪಡೆಯುವಲ್ಲಿ  ಯಶಸ್ವಿಯಾಗಿರುವ, ಶಾರ್ಜಾ ನಿವಾಸಿ ಸಾದ್ ಅಹ್ಮದ್, ʻನಾನುಬೆಳಿಗ್ಗೆ 8 ಗಂಟೆಗೆ ಏಕಕಾಲಕ್ಕೆ ನಾಲ್ಕು ಕಂಪ್ಯೂಟರ್‌ಗಳಲ್ಲಿ ವೆಬ್ ಸೈಟ್ ತೆರೆದೆ. 20 ನಿಮಿಷದಲ್ಲಿ ಟಿಕೆಟ್ ಸಿಕ್ಕಿತು ಎಂದಿದ್ದಾರೆ. ದುಬೈನಲ್ಲಿ ನೆಲೆಸಿರುವ ವಿಶಾಲ್ ಸಿಂಗ್, ಆನ್‌ಲೈನ್ ಸರತಿ ಸಾಲಿನಲ್ಲಿ 4 ಗಂಟೆಗಳ ನಂತರ ಕೇವಲ ಒಂದು ಪ್ರೀಮಿಯಂ ಟಿಕೆಟ್ ಪಡೆಯಲು ಸಾಧ್ಯವಾಯಿತು ಎಂದು ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app