
- ಗಾಯದ ಕಾರಣ ಏಷ್ಯಾಕಪ್ನಿಂದ ಹೊರಗುಳಿದ ಶಾಹಿನ್
- ಆಟಗಾರರ ಭೇಟಿಗೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ
ಏಷ್ಯಾ ಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತ, ಪಾಕಿಸ್ತಾನ ಸೇರಿದಂತೆ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಎಲ್ಲ ಆರು ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಶನಿವಾರ ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ–ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಎಲ್ಲರೂ ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಕದನ ಭಾನುವಾರ ನಡೆಯಲಿದೆ. ಪಂದ್ಯದ ಟಿಕೆಟ್ಗಳ ಮಾರಾಟ ಪ್ರಾರಂಭವಾದ ಕೆಲ ಗಂಟೆಗಳಲ್ಲೇ ʻಹಾಟ್ ಕೇಕ್ʼ ರೀತಿಯಲ್ಲಿ ಮಾರಾಟವಾಗಿದೆ. ಈ ನಡುವೆ ಅಭ್ಯಾಸ ನಡೆಸಲು ದುಬೈನ ಐಸಿಸಿ ಅಕಾಡೆಮಿಗೆ ತೆರಳುತ್ತಿರುವ ವೇಳೆ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ವೇಗದ ಬೌಲರ್ ಶಾಹಿನ್ ಅಫ್ರಿದಿ ಭೇಟಿಯಾಗಿದ್ದು, ಇಬ್ಬರು ಕೆಲಕಾಲ ಮಾತುಕತೆ ನಡೆಸಿದ್ದಾರೆ.
ʻನೀವು ಶೀಘ್ರದಲ್ಲೇ ಕಮ್ಬ್ಯಾಕ್ ಮಾಡುವಂತಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆʼ ಎಂದು ಶಾಹಿನ್ ಅಫ್ರಿದಿ, ಕೊಹ್ಲಿ ಭೇಟಿ ವೇಳೆ ಹೇಳಿದ್ದಾರೆ. ಇದೇ ವೇಳೆ ಗಾಯದಿಂದ ಶೀಘ್ರ ಚೇತರಿಸಿಕೊಂಡು ಕ್ರಿಕೆಟ್ ಮರಳುವಂತಾಗಿ ಎಂದು ಕೊಹ್ಲಿ ಶಾಹಿನ್ ಅಫ್ರಿದಿಗೆ ಶುಭ ಹಾರೈಸಿದ್ದಾರೆ.
ಯುಜುವೇಂದ್ರ ಚಹಾಲ್, ರಿಷಬ್ ಪಂತ್ ಹಾಗೂ ಕೆಎಲ್ ರಾಹುಲ್ ಕೂಡ ಶಾಹಿನ್ ಅಫ್ರಿದಿ ಭೇಟಿಯಾಗಿ ಕಾಲಿನ ಗಾಯದ ಕುರಿತು ವಿಚಾರಿಸಿದ್ದಾರೆ. ಆಟಗಾರರ ನಡುವಿನ ಮಾತುಕತೆಯ ವಿಡಿಯೋವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ತನ್ನ ಅಧಿಕೃತ ಟ್ವಿಟರ್, ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋ ವೈರಲ್ ಆಗಿದ್ದು, ಮೈದಾನದಲ್ಲಿ ಬದ್ಧ ವೈರಿಗಳಾಗಿರುವ ಆಟಗಾರರು ಮೈದಾನದಾಚೆಗೆ ಉತ್ತಮ ಮಿತ್ರರಾಗಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
Stars align ahead of the #AsiaCup2022 🤩
— Pakistan Cricket (@TheRealPCB) August 25, 2022
A high-profile meet and greet on the sidelines 👏 pic.twitter.com/c5vsNCi6xw
ಈ ಸುದ್ದಿ ಓದಿದ್ದೀರಾ ? : ವಿಶ್ವ ಬ್ಯಾಡ್ಮಿಂಟನ್ | ಭಾರತಕ್ಕೆ ಪದಕ ಖಚಿತಪಡಿಸಿದ ಸಾತ್ವಿಕ್- ಚಿರಾಗ್ ಶೆಟ್ಟಿ
2019ರ ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧ ಕೋಲ್ಕತಾದ ಈಡನ್ ಗಾರ್ಡನ್ಸ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊನೆಯದಾಗಿ ಶತಕ ಬಾರಿಸಿದ್ದರು. ಅದಾದ ಬಳಿಕ ಬ್ಯಾಟಿಂಗ್ನಲ್ಲಿ ಮಂಕಾಗಿರುವ ಮಾಜಿ ನಾಯಕ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶತಕ ಬಾರಿಸದೆ 1,000ಕ್ಕೂ ಹೆಚ್ಚು ದಿನಗಳಾಗಿವೆ. ಇತ್ತೀಚೆಗೆ ನಡೆದ ವೆಸ್ಟ್ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಹೀಗಾಗಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಲೇಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
ಶಾಹಿನ್ ಏಷ್ಯಾ ಕಪ್ನಿಂದ ಹೊರಕ್ಕೆ
ಮೊಣಕಾಲು ಗಾಯದ ಕಾರಣ ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಶಾಹಿನ್ ಅಫ್ರಿದಿ ಈಗಾಗಲೇ ಏಷ್ಯಾ ಕಪ್ ಟೂರ್ನಿಯಿಂದ ಹೊರಗುಳಿದಿದ್ದಾರೆ. 2000 ಮತ್ತು 2012ರ ಆವೃತ್ತಿಗಳಲ್ಲಿ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಪಾಕಿಸ್ತಾನಕ್ಕೆ, ಅಫ್ರಿದಿ ಅಲಭ್ಯತೆ ಆಘಾತವನ್ನುಂಟು ಮಾಡಿದೆ.
ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದ ವೇಳೆ ಶಾಹಿನ್ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ಆ ಬಳಿಕ ನೆದರ್ಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಅಫ್ರಿದಿ ತಂಡದಲ್ಲಿ ಸ್ಥಾನ ಪಡೆದಿದ್ದರಾದರೂ ಆಡಿರಲಿಲ್ಲ.