
- ಶನಿವಾರದಿಂದ ಸೂಪರ್ 4 ಹಂತದ ಪಂದ್ಯಗಳು ಆರಂಭ
- ಸೆಪ್ಟಂಬರ್ 4ರಂದು ಭಾರತ– ಪಾಕಿಸ್ತಾನ ಮುಖಾಮುಖಿ
ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ– ಪಾಕಿಸ್ತಾನ ಮುಖಾಮುಖಿಗೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ. ಟೂರ್ನಿಯಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಪರಸ್ಪರ ಎದುರಾಗಿದ್ದ ಸಾಂಪ್ರದಾಯಿಕ ಎದುರಾಳಿಗಳು, ಇದೀಗ ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಸವಾಲಿಗೆ ಸಜ್ಜಾಗಲಿದ್ದಾರೆ.
ಏಷ್ಯಾ ಕಪ್ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಡೆದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ, ದುರ್ಬಲ ಹಾಂಕಾಂಗ್ ತಂಡವನ್ನು ದಾಖಲೆಯ 155 ರನ್ಗಳ ಅಂತರದಲ್ಲಿ ಮಣಿಸಿತ್ತು. ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, ಎರಡು ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನತ್ತುವ ವೇಳೆ, ಕ್ರಿಕೆಟ್ ಶಿಶು ಹಾಂಕಾಂಗ್, ಕೇವಲ 38 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿ ದಾಖಲಾಯಿತು.
ಆ ಮೂಲಕ 'ಎ' ಗುಂಪಿನಿಂದ ಎರಡನೇ ತಂಡವಾಗಿ ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಿತು. ಇದಕ್ಕೂ ಮೊದಲು 'ಎ' ಗ್ರೂಪ್ನಿಂದ ಟೀಮ್ ಇಂಡಿಯಾ, ಪಾಕಿಸ್ತಾನ ಮತ್ತು ಹಾಂಕಾಂಗ್ ತಂಡಗಳನ್ನು ಮಣಿಸಿ ಮೊದಲನೇ ತಂಡವಾಗಿ ಮುಂದಿನ ಹಂತಕ್ಕೆ ಅರ್ಹತೆ ಪಡೆದಿತ್ತು. ಮತ್ತೊಂದೆಡೆ 'ಬಿ' ಗುಂಪಿನಿಂದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೂಪರ್ 4 ಹಂತ ಪ್ರವೇಶಿಸಿವೆ.
ಸೂಪರ್ 4 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿವೆ. ಎಲ್ಲಾ ನಾಲ್ಕು ತಂಡಗಳು ತಲಾ ಒಂದು ಬಾರಿ ಸೂಪರ್ 4 ಹಂತದಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಪರಸ್ಪರ ಎದುರಾಗಲಿವೆ. ಸೆಪ್ಟಂಬರ್ 4ರಂದು ದುಬೈನಲ್ಲಿ ಭಾರತ– ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ನಡೆಯಲಿದೆ.
🇦🇫 Afghanistan
— ESPNcricinfo (@ESPNcricinfo) September 2, 2022
🇮🇳 India
🇱🇰 Sri Lanka
🇵🇰 Pakistan
Who is taking home the #AsiaCup2022 🏆 ?
ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಭಾರತ, ಪಾಕಿಸ್ತಾನ ತಂಡವನ್ನು 5 ವಿಕೆಟ್ಗಳ ಅಂತರದಲ್ಲಿ ರೋಚಕವಾಗಿ ಮಣಿಸಿತ್ತು. ಆದರೆ ಈ ಪಂದ್ಯದಲ್ಲಿ ಭಾರತದ ಗೆಲುವಿನ ರುವಾರಿಯಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಏಷ್ಯಾ ಕಪ್ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದು ರೋಹಿತ್ ಪಾಳಯಕ್ಕೆ ಹಿನ್ನಡೆಯುಂಟು ಮಾಡಿದೆ. ಜಡೇಜಾ ಸ್ಥಾನಕ್ಕೆ ಮತ್ತೋರ್ವ ಆಲ್ರೌಂಡರ್ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೂಪರ್ 4 ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಶಾರ್ಜಾದಲ್ಲಿ ಮತ್ತು ಉಳಿದ ಐದು ಪಂದ್ಯಗಳು ದುಬೈನಲ್ಲಿ ನಡೆಯಲಿದೆ.
ಸೂಪರ್ 4 ಹಂತದ ಪಂದ್ಯಗಳು
ಸೆಪ್ಟಂಬರ್ 3: ಅಫ್ಘಾನಿಸ್ತಾನ vs ಶ್ರೀಲಂಕಾ, ಶಾರ್ಜಾ
ಸೆಪ್ಟಂಬರ್ 4: ಭಾರತ vs ಪಾಕಿಸ್ತಾನ, ದುಬೈ
ಸೆಪ್ಟೆಂಬರ್ 6: ಅಫ್ಘಾನಿಸ್ತಾನ vs ಭಾರತ, ದುಬೈ,
ಸೆಪ್ಟೆಂಬರ್ 7: ಪಾಕಿಸ್ತಾನ vs ಶ್ರೀಲಂಕಾ, ದುಬೈ,
ಸೆಪ್ಟೆಂಬರ್ 8: ಭಾರತ vs ಶ್ರೀಲಂಕಾ, ದುಬೈ,
ಸೆಪ್ಟೆಂಬರ್ 9: ಅಫ್ಘಾನಿಸ್ತಾನ vs ಪಾಕಿಸ್ತಾನ