
- 15ನೇ ಆವೃತ್ತಿಯ ಏಷ್ಯಾ ಕಪ್ನಲ್ಲಿ ಒಟ್ಟು ಆರು ತಂಡ
- ಶ್ರೀಲಂಕಾ- ಅಫ್ಘಾನಿಸ್ತಾನ ನಡುವೆ ಮೊದಲ ಪಂದ್ಯ
ಪ್ರತಿಷ್ಠಿತ ಏಷ್ಯಾಕಪ್ ಟಿ20 ಟೂರ್ನಿ ಶನಿವಾರದಿಂದ ಯುಎಇನಲ್ಲಿ ಆರಂಭವಾಗಲಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ– ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಪೂರ್ವ ನಿಗದಿಯಂತೆ ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪರಾಷ್ಟ್ರದಲ್ಲಿ ತಲೆದೋರಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಟೂರ್ನಿ ಯುಎಇಗೆ ಸ್ಥಳಾಂತರವಾಗಿದೆ. ಆಗಸ್ಟ್ 28ರ ಭಾನುವಾರದಂದು ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿರುವ ಭಾರತ- ಪಾಕಿಸ್ತಾನ ತಂಡಗಳ ನಡುವಿನ ʻಹೈವೋಲ್ಟೇಜ್ʼ ಕದನ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಭಾರತ, ಈ ಬಾರಿ ಹ್ಯಾಟ್ರಿಕ್ ಸಾಧಿಸುವ ತವಕದಲ್ಲಿದೆ.
ಆರು ತಂಡ, ಎರಡು ಗುಂಪು
15ನೇ ಆವೃತ್ತಿಯ ಏಷ್ಯಾಕಪ್ನಲ್ಲಿ ಒಟ್ಟು ಆರು ತಂಡಗಳು ಪಾಲ್ಗೊಳ್ಳುತ್ತಿವೆ. ಈ ತಂಡಗಳನ್ನು ಎ ಮತ್ತು ಬಿ ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ತಂಡಗಳು ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಗ್ರೂಪ್ ಹಂತದ ಬಳಿಕ ಸೂಪರ್ 4 ಹಂತದ ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದಲ್ಲಿ ಆರು ಪಂದ್ಯಗಳು ನಡೆದರೆ, ಸೂಪರ್ 4 ಹಂತದಲ್ಲಿ ಫೈನಲ್ ಸೇರಿ ಏಳು ಪಂದ್ಯಗಳು ನಡೆಯಲಿವೆ.
ಗ್ರೂಪ್ ಎ | ಭಾರತ, ಪಾಕಿಸ್ತಾನ, ಹಾಂಕಾಂಗ್
ಗ್ರೂಪ್ ಬಿ | ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ
Hello DUBAI 🇦🇪
— BCCI (@BCCI) August 24, 2022
Hugs, smiles and warm-ups as we begin prep for #AsiaCup2022 #AsiaCup | #TeamIndia 🇮🇳 pic.twitter.com/bVo2TWa1sz
ಗ್ರೂಪ್ ಹಂತ
ಆರಂಭದಲ್ಲಿ ಗ್ರೂಪ್ ಹಂತದಲ್ಲಿ ಮೂರೂ ತಂಡಗಳು ಆಯಾ ಗುಂಪಿನಲ್ಲಿರುವ ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿವೆ. ಹೆಚ್ಚು ಅಂಕ ಅಥವಾ ನೆಟ್ ರನ್ರೇಟ್ ಹೊಂದಿರುವ ಅಗ್ರ 2 ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದರೆ, ಎರಡೂ ಗುಂಪಿನಿಂದ ತಲಾ ಒಂದು ತಂಡ ಟೂರ್ನಿಯಿಂದ ಹೊರನಡೆಯಲಿವೆ.
ಸೂಪರ್ 4 ಹಂತ
ಸೂಪರ್ 4 ಹಂತದಲ್ಲಿ ನಾಲ್ಕು ತಂಡಗಳು ಇರಲಿದ್ದು, ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಒಂದು ತಂಡವು ಉಳಿದ ಮೂರು ರಾಷ್ಟ್ರಗಳ ವಿರುದ್ಧ ತಲಾ ಒಂದು ಪಂದ್ಯಗಳನ್ನಾಡಲಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳು ಸೆಪ್ಟಂಬರ್ 11ರಂದು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಶಾರ್ಜಾದಲ್ಲಿ ಮೂರು ಪಂದ್ಯ
ಸಾಮಾನ್ಯವಾಗಿ ಯುಎಇಯಲ್ಲಿ ಕ್ರಿಕೆಟ್ ಟೂರ್ನಿಗಳು ಆಯೋಜನೆಗೊಂಡರೆ ಮೂರು ಪ್ರಮುಖ ನಗರಗಳಲ್ಲಿ ಪಂದ್ಯಗಳು ನಡೆಯುತ್ತವೆ. ಆದರೆ ಈ ಬಾರಿ ದುಬೈ ಮತ್ತು ಶಾರ್ಜಾ ಮೈದಾನಗಳಲ್ಲಿ ಮಾತ್ರ ಪಂದ್ಯಗಳು ನಡೆಯಲಿದ್ದು, ಅಬುಧಾಬಿ ಮೈದಾನವನ್ನು ಕೈಬಿಡಲಾಗಿದೆ. ದುಬೈನಿಂದ ಅಬುಧಾಬಿಗೆ ಸುಮಾರು 140 ಕಿಲೋಮೀಟರ್ ದೂರವಿದ್ದು, ಆಟಗಾರರಿಗೆ ಪ್ರಯಾಣದ ಪ್ರಯಾಸ ತಪ್ಪಿಸಲು ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆಯಿದೆ.
ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳಿದ್ದು, ಇದರಲ್ಲಿ ಮೂರು ಪಂದ್ಯ ಶಾರ್ಜಾದಲ್ಲಿ ಮತ್ತು ಉಳಿದ 10 ಪಂದ್ಯಗಳು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿವೆ. ಬೇರೆ ಮಾದರಿಗಳಿಗೆ ಹೋಲಿಸಿದರೆ ಶಾರ್ಜಾದ ಮೈದಾನ ಚಿಕ್ಕದಾಗಿದ್ದು, ಇಲ್ಲಿ ನಡೆಯುವ ಪಂದ್ಯಗಳಲ್ಲಿ ರನ್ ಹೊಳೆಯೇ ಹರಿಯುವ ನಿರೀಕ್ಷೆ ಇದೆ. ಮತ್ತೊಂದೆಡೆ ದುಬೈ ಮೈದಾನದ ಪಿಚ್ ಹೆಚ್ಚು ತಿರುವುಗಳನ್ನು ಪಡೆಯುವುದರಿಂದ ಸ್ಪಿನ್ನರ್ಗಳಿಗೆ ಸಹಾಯವಾಗಲಿದೆ.