ಟಿ20 | ಟೀಮ್ ಇಂಡಿಯಾ ನೀಡಿದ್ದ ಕಠಿಣ ಗುರಿಯನ್ನು ಸುಲಭವಾಗಿಯೇ 'ಚೇಸ್‌' ಮಾಡಿದ ಆಸ್ಟ್ರೇಲಿಯಾ!

  • 19. 2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿದ ಆಸೀಸ್‌
  • 101 ರನ್ನು ಬಿಟ್ಟು ಕೊಟ್ಟು ದುಬಾರಿಯಾದ ಭುವನೇಶ್ವರ್‌, ಹರ್ಷಲ್‌ ಪಟೇಲ್‌ 

209 ರನ್‌ಗಳ ಕಠಿಣ ಗುರಿಯನ್ನೇ ಮುಂದಿಟ್ಟಿದ್ದರೂ, ಧೃತಿಗೆಡದ ಹಾಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ, 6 ವಿಕೆಟ್‌ ನಷ್ಟದಲ್ಲಿ 19. 2 ಓವರ್‌ಗಳಲ್ಲಿ 211 ರನ್‌ಗಳಿಸುವ ಮೂಲಕ ಟೀಮ್ ಇಂಡಿಯಾ ವಿರುದ್ಧದ ಸರಣಿಯಲ್ಲಿ ಶುಭಾರಂಭ ಮಾಡಿದೆ.

ಮೊಹಾಲಿಯಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪ್ರಮುಖ ಬೌಲರ್‌ಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ ಭಾರತದ ಪಾಲಿಗೆ ವಿಲನ್‌ಗಳಾದರು. ಇವರಿಬ್ಬರು ಕೇವಲ 8 ಓವರ್‌ಗಳಲ್ಲಿ 101 ರನ್‌ ಬಿಟ್ಟುಕೊಟ್ಟು, ಒಂದೇ ಒಂದು ವಿಕೆಟ್‌ ಪಡೆಯುವಲ್ಲೂ ವಿಫಲರಾದರು.

209 ರನ್‌ಗಳ ಸವಾಲಿನ ಗುರಿ ಬೆನ್ನಟ್ಟುವ ವೇಳೆ ಆರಂಭದಲ್ಲಿಯೇ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಸ್ಪೋಟಕ ಆರಂಭ ಒದಗಿಸಿದ್ದರು. ಆರೋನ್‌ ಫಿಂಚ್‌ (22 ರನ್‌ 13 ಎಸೆತ), ಕ್ಯಾಮರೂನ್‌ ಗ್ರೀನ್‌ (61 ರನ್‌, 30 ಎಸೆತ), ಸ್ಟೀವ್‌ ಸ್ಮಿತ್‌ 35 ರನ್‌ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಕೀಪರ್‌ ಮ್ಯಾಥ್ಯೂ ವೇಡ್‌ 21 ಎಸೆತಗಳಲ್ಲಿ 45 ರನ್‌ಗಳಿಸಿ ಅಜೇಯರಾಗುಳಿಯುವ ಮೂಲಕ ತಂಡವನ್ನು ಗೆಲುವಿನ ಗುರಿ ದಾಟಿಸಿದರು.   

ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶುಕ್ರವಾರ ನಾಗ್ಪುರದಲ್ಲಿ ನಡೆಯಲಿದೆ

ಆಸ್ಟ್ರೇಲಿಯಾ ಗೆಲುವಿಗೆ ರನ್‌ ಗುರಿ 209 ರನ್‌ಗಳ ಕಠಿಣ ಗುರಿ

ಇದಕ್ಕೂ ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಮ್‌ ಇಂಡಿಯಾ, 6 ವಿಕೆಟ್‌ ನಷ್ಟದಲ್ಲಿ 208 ರನ್‌ಗಳಿಸಿತ್ತು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಳಿಸಿದ ಅತ್ಯಧಿಕ ಮೊತ್ತ ಇದಾಗಿದೆ.

ಆರಂಭಿಕ ಕೆಎಲ್‌ ರಾಹುಲ್‌ ( 55 ರನ್‌) ಮತ್ತು ಹಾರ್ದಿಕ್‌ ಪಾಂಡ್ಯ ಗಳಿಸಿದ ಅಬ್ಬರದ ಅರ್ಧಶತಕ ( 71 ರನ್‌* ರನ್‌,  ನಾಯಕ ರೋಹಿತ್‌ ಶರ್ಮಾ 11 ರನ್‌,  ಮತ್ತು ವಿರಾಟ್‌ ಕೊಹ್ಲಿ ಕೇವಲ 2 ರನ್‌ಗಳಿಸುವಷ್ಟರಲ್ಲೇ ವಿಕೆಟ್‌ ಒಪ್ಪಿಸಿದರು.

ಪಾಂಡ್ಯಾ ಅಬ್ಬರ

5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಹಾರ್ದಿಕ್‌ ಪಾಂಡ್ಯಾ, ಆಸ್ಟೇಲಿಯಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 30 ಎಸೆತಗಳನ್ನು ಎದುರಿಸಿದ ಪಾಂಡ್ಯಾ, 5 ಸಿಕ್ಸರ್‌ ಮತ್ತು 7 ಬೌಂಡರಿಗಳ ನೆರವಿನೊಂದಿಗೆ 71 ರನ್‌ಗಳಿಸಿ ಅಜೇಯರಾಗುಳಿದರು. 20ನೇ ಓವರ್‌ನ ಅಂತಿಮ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್‌ ಬಾರಿಸಿದ ಪಾಂಡ್ಯಾ, ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಏಷ್ಯಾ ಕಪ್‌ನಲ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದ ರಾಹುಲ್‌, ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಗಳಿಸಿ ಮಿಂಚಿದರು. 35 ಎಸೆತಗಳಲ್ಲಿ 3 ಸಿಕ್ಸರ್‌ ಮತ್ತು 4 ಬೌಂಡರಿಗಳ ನೆರವಿನೊಂದಿಗೆ 55 ರನ್‌ಗಳಿಸಿ ಹ್ಯಾಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು.

ಆಸ್ಟ್ರೇಲಿಯಾ ಪರ ಬೌಲಿಂಗ್‌ನಲ್ಲಿ ನಾಥನ್‌ ಎಲ್ಲಿಸ್‌ ಮೂರು ವಿಕೆಟ್‌, ಹ್ಯಾಝಲ್‌ವುಡ್‌ 2 ಹಾಗೂ ಕ್ಯಾಮರೂನ್‌ ಗ್ರೀನ್‌ 1 ವಿಕೆಟ್‌ ಪಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್