ಕೆರಿಬಿಯನ್ನರಿಗೆ ಜಯ ನಿರಾಕರಿಸಿದ ಅಕ್ಷರ್‌ ಪಟೇಲ್‌

Cricket
  • ಅಕ್ಷರ್‌ ಪಟೇಲ್‌ ಕೆಚ್ಚೆದೆಯ ಹೋರಾಟಕ್ಕೆ ಒಲಿದ ಜಯ
  • 12 ದ್ವಿಪಕ್ಷೀಯ ಸರಣಿ ಗೆದ್ದು ದಾಖಲೆ ನಿರ್ಮಿಸಿದ ಭಾರತ

ಏಳನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ವಿಂಡೀಸ್‌ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌, ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಎರಡು ವಿಕೆಟ್‌ಗಳ ಅಮೋಘ ಜಯ ತಂದುಕೊಟ್ಟಿದ್ದಾರೆ. ಅಂತಿಮ ಓವರ್‌ವರೆಗೂ ಸಾಗಿದ ರೋಚಕ ಕದನದಲ್ಲಿ ಭಾರತ, ಕೇವಲ ಎರಡು ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲುವ ಮೂಲಕ, 3 ಪಂದ್ಯಗಳ ಏಕದಿನ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಗೆದ್ದುಕೊಂಡು ನೂತನ ದಾಖಲೆ ನಿರ್ಮಿಸಿದೆ.

ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಗೆಲುವಿಗಾಗಿ ವೆಸ್ಟ್‌ ಇಂಡೀಸ್‌ 312 ರನ್‌ಗಳ ಸವಾಲಿನ ಗುರಿ ನೀಡಿತ್ತು. ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌ ಹಾಗೂ ಕೊನೆಯ ಹಂತದಲ್ಲಿ ಅಕ್ಷರ್‌ ಪಟೇಲ್‌ ಬಿರುಸಿನ ಅರ್ಧಶತಕ ಸಿಡಿಸಿದ ಪರಿಣಾಮ ಭಾರತ 49.4 ಓವರ್‌ಗಳಲ್ಲಿ ಜಯದ ನಿಟ್ಟುಸಿರು ಬಿಡುವಂತಾಯಿತು.

ಅಂತಿಮ 10 ಓವರ್‌ಗಳಲ್ಲಿ ಭಾರತ ಗೆಲುವಿಗೆ 100 ರನ್‌ಗಳ ಅಗತ್ಯವಿತ್ತು. ಆದರೆ ಅದಾಗಲೇ ಅಗ್ರ ಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿಕೊಂಡಿದ್ದರು. ಈ ವೇಳೆ  ಕ್ರೀಸ್‌ನಲ್ಲಿ ಭದ್ರವಾಗಿ ನೆಲೆನಿಂತು ಸ್ಫೋಟಕ ಬ್ಯಾಟ್‌ ಬೀಸಿದ ಅಕ್ಷರ್‌ ಪಟೇಲ್‌ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿಸಿದರು. ಎದುರಿಸಿದ 35 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್‌ಗಳ ಮೂಲಕ ಅಜೇಯ 64 ರನ್‌ ಗಳಿಸುವ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ತಂದಿತ್ತರು. ಇದಕ್ಕೂ ಮೊದಲು  ಬೌಲಿಂಗ್‌ನಲ್ಲೂ 1 ವಿಕೆಟ್‌ ಪಡೆದು ಮಿಂಚಿದ್ದ ಅಕ್ಷರ್‌ಗೆ ಸಹಜವಾಗಿಯೇ ಪಂದ್ಯಶ್ರೇಷ್ಠ ಗೌರವ ಒಲಿಯಿತು. ದೀಪಕ್‌ ಹೂಡಾ 33 ಮತ್ತು ಆವೇಶ್‌ ಖಾನ್‌ 10 ರನ್‌ ಗಳಿಸಿ ಪಟೇಲ್‌ಗೆ ಸಾಥ್‌ ನೀಡಿದರು. ಶುಕ್ರವಾರ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲೂ ಟೀಮ್‌ ಇಂಡಿಯಾ 3 ರನ್‌ಗಳ ರೋಚಕ ಜಯ ಸಾಧಿಸಿತ್ತು.

12 ದ್ವಿಪಕ್ಷೀಯ ಸರಣಿ ಗೆದ್ದು ದಾಖಲೆ

3 ಪಂದ್ಯಗಳ ಏಕದಿನ ಸರಣಿಯಲ್ಲಿ 2- 0 ಮುನ್ನಡೆ ಸಾಧಿಸಿರುವ ಟೀಮ್‌ ಇಂಡಿಯಾ, ಆ ಮೂಲಕ ವೆಸ್ಟ್‌ ಇಂಡೀಸ್‌ ವಿರುದ್ಧ ಸತತ 12ನೇ ದ್ವಿಪಕ್ಷೀಯ ಏಕದಿನ ಕ್ರಿಕೆಟ್‌ ಸರಣಿ ಗೆದ್ದ ಸಾಧನೆ ಮಾಡಿದೆ. ಯಾವುದೇ ಒಂದು ತಂಡದ ವಿರುದ್ಧ ಅತಿಹೆಚ್ಚು ಏಕದಿನ ಸರಣಿ ಗೆದ್ದಿರುವ ನೂತನ ವಿಶ್ವ ದಾಖಲೆ ಇದಾಗಿದೆ. ಇದಕ್ಕೂ ಮೊದಲು ಪಾಕಿಸ್ತಾನ ತಂಡ ಜಿಂಬಾಬ್ವೆ ಎದುರು 11 ಸತತ ಏಕದಿನ ಸರಣಿ ಗೆದ್ದ ವಿಶ್ವ ದಾಖಲೆ ಹೊಂದಿತ್ತು. ವಿಶೇಷವೆಂದರೆ 2007ರ ಬಳಿಕ ಭಾರತ ತಂಡ ಕೆರಿಬಿಯನ್ನರ ವಿರುದ್ಧ ಏಕದಿನ ಸರಣಿಯಲ್ಲಿ ಸೋಲರಿಯದ ಸರದಾರನಾಗಿ ಮುನ್ನಡೆಯುತ್ತಲೇ ಬಂದಿದೆ.

ಈ ಸುದ್ದಿ ಓದಿದ್ದೀರಾ ? : ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ; ಹಾಸ್ಯ ನಟ ದೀಪೇಶ್‌ ಭಾನ್‌ ಸಾವು

ಹೋಪ್‌ ದಾಖಲೆಯ ಶತಕ

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ವೆಸ್ಟ್‌ ಇಂಡೀಸ್‌ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದಲ್ಲಿ 311 ರನ್‌ಗಳ ಸವಾಲಿನ ಮೊತ್ತ ಪೇರಿಸಿತ್ತು. ವೃತ್ತಿಬದುಕಿನ 100ನೇ ಏಕದಿನ ಪಂದ್ಯವನ್ನಾಡಿದ ವಿಂಡೀಸ್‌ ಆರಂಭಿಕ ಶಾಯ್ ಹೋಪ್‌, ಮೋಹಕ ಶತಕ‌ ದಾಖಲಿಸುವ ಮೂಲಕ ಅತಿಥೇಯರು ಬೃಹತ್‌ ಮೊತ್ತ ದಾಖಲಿಸುವಲ್ಲಿ ನೆರವಾದರು. ಸಿಕ್ಸರ್‌ ಸಿಡಿಸುವ ಮೂಲಕ ಹೋಪ್‌, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 13ನೇ ಶತಕ ಪೂರ್ತಿಗೊಳಿಸಿದ್ದು ವಿಶೇಷವಾಗಿತ್ತು.

ಮತ್ತೋರ್ವ ಆರಂಭಿಕ ಕೈಲ್‌ ಮೇಯರ್ಸ್‌ 39 ರನ್‌, ಶಾಮ್ರಾ ಬ್ರೂಕ್ಸ್‌ 35 ರನ್‌ ಹಾಗೂ ನಾಯಕ ನಿಕೋಲಸ್‌ ಪೂರನ್‌ 74 ರನ್‌ಗಳ ಅಮೂಲ್ಯ ಕೊಡುಗೆ ಸಲ್ಲಿಸಿದರು.  ಭಾರತದ ಪರ ಬೌಲಿಂಗ್‌ನಲ್ಲಿ ಶಾರ್ದುಲ್‌ ಠಾಕೂರ್‌ 54 ರನ್‌ ನೀಡಿ 3 ವಿಕೆಟ್‌ ಪಡೆದರೆ, ದೀಪಕ್‌ ಹೂಡಾ, ಅಕ್ಷರ್‌ ಪಟೇಲ್‌ ಹಾಗೂ ಯಜುವೇಂದ್ರ ಚಾಹಲ್‌ ತಲಾ ಒಂದು ವಿಕೆಟ್‌ ಪಡೆದರು. ಸರಣಿಯ ಅಂತಿಮ ಮತ್ತು ಔಪಚಾರಿಕ ಪಂದ್ಯ ಬುಧವಾರ ಇದೇ ಮೈದಾನದಲ್ಲಿ ನಡೆಯಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app