- ರಾಷ್ಟ್ರೀಯ ಆಯ್ಕೆ ಸಮಿತಿ ವಿರ್ಸಜನೆ
- ನೂತನ ಸಮಿತಿ ರಚನೆಗೆ ಅರ್ಜಿ ಆಹ್ವಾನ
ಟಿ20 ವಿಶ್ವಕಪ್ ಸೆಮಿಫೈನಲ್ ಸೋಲಿನ ಬೆನ್ನಲ್ಲೇ ಮಹತ್ವದ ಬದಲಾವಣೆಗಳ ಸುಳಿವು ನೀಡಿದ್ದ ಬಿಸಿಸಿಐ ಇದೀಗ ʻಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗʼ ಮಾಡಿದೆ.
ಚೇತನ್ ಶರ್ಮಾ ನೇತೃತ್ವದ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿ ವಜಾಗೊಳಿಸಿರುವ ಕ್ರಿಕೆಟ್ ಮಂಡಳಿ, ಐವರು ಸದಸ್ಯರ ನೂತನ ಸಮಿತಿಗೆ ರಚನೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಚೇತನ್ ಶರ್ಮಾ (ಉತ್ತರ ವಲಯ), ಸುನಿಲ್ ಜೋಶಿ (ದಕ್ಷಿಣ ವಲಯ), ದೇಬಶಿಶ್ ಮೊಹಂತಿ (ಪೂರ್ವ ವಲಯ) ಹಾಗೂ ಹರ್ವಿಂದರ್ ಸಿಂಗ್ (ಮಧ್ಯ ವಲಯ) ಅವರನ್ನು ವಜಾಗೊಳಿಸಲಾಗಿದೆ. ಈ ಕುರಿತ ಅಧಿಕೃತ ಆದೇಶ ಇನ್ನಷ್ಟೇ ಈ ಸದಸ್ಯರ ಕೈಸೇರಬೇಕಿದೆ. ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನವನ್ನು ವೀಕ್ಷಿಸುತ್ತಿರುವುದರ ನಡುವೆಯೇ ಆಯ್ಕೆ ಸಮಿತಿಯನ್ನು ಬಿಸಿಸಿಐ ಬರ್ಖಾಸ್ತುಗೊಳಿಸಿದೆ.
BCCI sacks Chief Selector Chetan Sharma & the entire national selection committee
— ANI (@ANI) November 18, 2022
ಹಿರಿಯರ ತಂಡ ಆಯ್ಕೆ ಸಮಿತಿಯ ಮುಖ್ಯಸ್ಥ ಮತ್ತು ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸುವವರಿಗೆ ಬಿಸಿಸಿಐ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಕನಿಷ್ಠ 7 ಟೆಸ್ಟ್ ಪಂದ್ಯ ಅಥವಾ 30 ಪ್ರಥಮ ದರ್ಜೆ ಪಂದ್ಯ ಅಥವಾ ಕನಿಷ್ಠ 10 ಅಂತಾರಾಷ್ಟ್ರೀಯ ಏಕದಿನ ಪಂದ್ಯ ಅಥವಾ 20 ಪ್ರಥಮ ದರ್ಜೆ ಪಂದ್ಯ ಆಡಿದ ಅನುಭವವನ್ನು ಹೊಂದಿರಬೇಕು ಎಂದು ಬಿಸಿಸಿಐ ಹೇಳಿದೆ.
2020ರ ಡಿಸೆಂಬರ್ನಲ್ಲಿ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾರ ಅವಧಿಯು ಇನ್ನೇನು ಮುಕ್ತಾಯಗೊಳ್ಳಲಿತ್ತು. ಆದರೆ ಉಳಿದ ಮೂವರು ಸದಸ್ಯರು ಎರಡು ವರ್ಷಗಳ ಹಿಂದಷ್ಟೇ ನೇಮಕವಾಗಿದ್ದರು. ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಅನುಭವಿಸಿದ ಹೀನಾಯ ಸೋಲಿಗೆ ಸಮಿತಿಯ ಎಲ್ಲಾ ಸದಸ್ಯರ ತಲೆದಂಡವಾಗಿದೆ.
4 ವರ್ಷಗಳ ಅವಧಿ ಪೂರ್ಣಗೊಳ್ಳುವ ಮೊದಲೇ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಘಟನೆ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಎಂ ಎಸ್ ಧೋನಿ ಟೀಮ್ ಇಂಡಿಯಾ ನಾಯಕತ್ವ ಸ್ಥಾನ ವಹಿಸುವ ಮೊದಲು ಈ ರೀತಿಯ ಬೆಳವಣಿಗೆಗಳು ನಡೆದಿದ್ದವು.
As per reports, BCCI has sacked the entire selection committee including Chairman of the selection committee of Indian cricket Chetan Sharma.
— Sportskeeda (@Sportskeeda) November 18, 2022
📸: Chetan Sharma #crickettwitter #india pic.twitter.com/7q9SF6n2Fc
ಈ ಸುದ್ದಿಯನ್ನು ಓದಿದ್ದೀರಾ ? : ಕತಾರ್ ಫಿಫಾ ವಿಶ್ವಕಪ್ | ಪಂದ್ಯ ನಡೆಯುವ ಕ್ರೀಡಾಂಗಣಗಳ ಸುತ್ತ ಬಿಯರ್ ಮಾರಾಟ ನಿಷೇಧ
ಕಳೆದ ಬಾರಿ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ ನಾಕೌಟ್ ಹಂತಕ್ಕೇರಲು ವಿರಾಟ್ ಕೊಹ್ಲಿ ಸಾರಥ್ಯದ ಬ್ಲೂಬಾಯ್ಸ್ ವಿಫಲರಾಗಿದ್ದರು. ಆಸ್ಟ್ರೇಲಿಯದಲ್ಲಿ ಭಾರತ ತಂಡ ಅಂತಿಮ 4ರ ಘಟ್ಟ ಪ್ರವೇಶಿಸಿದ್ದರಾದರೂ, 10 ವಿಕೆಟ್ಗಳ ಭಾರಿ ಅಂತರದ ಸೋಲು ಕಾಣುವ ಮೂಲಕ ಟೀಮ್ ಇಂಡಿಯಾ ಟೂರ್ನಿಯಿಂದ ಹೊರನಡೆದಿತ್ತು.
ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾಗಿದ್ದ ತಂಡದ ಕುರಿತು ಆರಂಭದಲ್ಲೇ ಅಪಸ್ವರ ಕೇಳಿಬಂದಿತ್ತು. ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಟಿ20 ಪರಿಣಿತ ಯುವ ಬೌಲರ್ಗಳ ಬದಲು ಭುವನೇಶ್ವರ್ ಕುಮಾರ್, ಮುಹಮ್ಮದ್ ಶಮಿಯವರನ್ನು ಆಯ್ಕೆ ಮಾಡಲಾಗಿತ್ತು.
ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬೆನ್ನಲ್ಲೇ ಕಳಪೆ ಪ್ರದರ್ಶನ ನೀಡಿದರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಕೆಲ ಆಟಗಾರರು ತಂಡದಿಂದ ಹೊರಬೀಳುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.