ಮುಂದಿನ ವರ್ಷದಿಂದ ಮಹಿಳಾ ಐಪಿಎಲ್‌ ಆರಂಭ

  • 2023ರ ಮಾರ್ಚ್‌ ತಿಂಗಳಲ್ಲಿ ಮಹಿಳಾ ಐಪಿಎಲ್‌
  • ಚೊಚ್ಚಲ ಡಬ್ಲ್ಯುಐಪಿಎಲ್‌ನಲ್ಲಿ ಐದು ತಂಡಗಳು ಭಾಗಿ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾಗಿ ಬರೋಬ್ಬರಿ 15 ವರ್ಷಗಳೇ ಕಳೆದಿವೆ. ಭರ್ಜರಿ ಯಶಸ್ಸು ಪಡೆದಿರುವ ಈ ಟೂರ್ನಿ, ಒಂದು ಹಂತದವರೆಗೂ ಭಾರತದಲ್ಲಿ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿದೆ. 2008ರಲ್ಲಿ 8 ತಂಡಗಳೊಂದಿಗೆ ಆರಂಭವಾದ ಟೂರ್ನಿಯಲ್ಲಿ ಇದೀಗ ತಂಡಗಳ ಸಂಖ್ಯೆ 10ಕ್ಕೆ ಏರಿದೆ. ಪುರುಷ ಪ್ರಾಬಲ್ಯವೇ ಇದ್ದ ಈ ಟೂರ್ನಿಯಲ್ಲಿ, ಮುಂದಿನ ವರ್ಷದಿಂದ ಮಹಿಳಾ ಐಪಿಎಲ್‌ ಆರಂಭಿಸಲು ಬಿಸಿಸಿಐ ನಿರ್ಧರಿಸಿದೆ.

ಮಹಿಳಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಐಪಿಎಲ್‌) ಟಿ20 ಕ್ರಿಕೆಟ್‌ ಲೀಗ್‌ 2023ರ ಮಾರ್ಚ್‌ ತಿಂಗಳಲ್ಲಿ ನಡೆಯಲಿದೆ. ಐದು ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಫ್ರಾಂಚೈಸಿ ಪಡೆಯಲು ಹಲವು ಹೂಡಿಕೆದಾರರು ಆಸಕ್ತಿ ತೋರಿರುವ ಕಾರಣ ತಂಡಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. ಆದರೆ ಸದ್ಯ ಐಪಿಎಲ್‌ನ ಭಾಗವಾಗಿರುವ ಫ್ರಾಂಚೈಸಿಗಳೇ ಮಹಿಳಾ ತಂಡಗಳ ಮಾಲೀಕತ್ವ ಪಡೆಯಲಿದ್ದಾರೆ ಎಂದು ವರದಿಯಾಗಿದೆ.

ಐಪಿಎಲ್‌ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್‌, ರಾಜಸ್ತಾನ ರಾಯಲ್ಸ್‌ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌, ಡಬ್ಲ್ಯುಐಪಿಎಲ್‌ನಲ್ಲಿ ತಂಡಗಳನ್ನು ಖರೀದಿಸಲು ಉತ್ಸುಕತೆ ತೋರಿವೆ ಎಂದು ಮೂಲಗಳು ತಿಳಿಸಿವೆ. ಯುಟಿವಿ ಮುಖ್ಯಸ್ಥ ರೋನಿ ಸ್ಕ್ರೂವಾಲಾ ಅವರು ಕೂಡ ಡಬ್ಲ್ಯುಐಪಿಎಲ್‌ ಫ್ರಾಂಚೈಸಿ ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಟ್ವೀಟ್ ಮಾಡಿದ್ದರು.

"ಡಬ್ಲ್ಯುಐಪಿಎಲ್‌ ಚೊಚ್ಚಲ ಋತುವಿನ ಟೂರ್ನಿ ಮುಂದಿನ ವರ್ಷ ಮಾರ್ಚ್‌ ಮೊದಲ ವಾರ ಆರಂಭವಾಗಲಿದೆ. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ವೇಳಾಪಟ್ಟಿಯಲ್ಲಿ ಇತರ ಸರಣಿ, ಟೂರ್ನಿಗಳು ಇರುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ದಕ್ಷಿಣ ಆಫ್ರಿಕಾದಲ್ಲಿ ಮುಂದಿನ ಫೆಬ್ರವರಿ 9ರಿಂದ 26ರ ವರೆಗೆ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಆ ಟೂರ್ನಿಯ ಬೆನ್ನಲ್ಲೇ ಡಬ್ಲ್ಯುಐಪಿಎಲ್‌ ಆಯೋಜಿಸಲು ನಿರ್ಧರಿಸಲಾಗಿದೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಟಿ20 ಕ್ರಿಕೆಟ್‌ | ಡ್ವೇಯ್ನ್ ಬ್ರಾವೊಗೆ 600 ವಿಕೆಟ್‌ ಸಂಭ್ರಮ

ಮಹಿಳಾ ಐಪಿಎಲ್‌ ಆಯೋಜನೆಗಾಗಿ, ದೇಶೀಯ ಮಹಿಳಾ ಟೂರ್ನಿಗಳ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಲಾಗುವುದು ಎಂದು ಬಿಸಿಸಿಐ ತಿಳಿಸಿದೆ. 2018ರಿಂದ, ಬಿಸಿಸಿಐ ಮಹಿಳೆಯರ T20 ಚಾಲೆಂಜ್ ಅನ್ನು ಆಯೋಜಿಸುತ್ತಿದೆ. ಮೊದಲ ಋತುವಿನಲ್ಲಿ ಎರಡು ತಂಡಗಳ ನಡುವೆ ಏಕೈಕ ಪ್ರದರ್ಶನ ಪಂದ್ಯವನ್ನಷ್ಟೇ  ನಡೆದಿತ್ತು. ಆ ಬಳಿಕ ಪ್ರಸ್ತುತ ಮೂರು ತಂಡಗಳು T20 ಚಾಲೆಂಜ್‌ನಲ್ಲಿ ಪಾಲ್ಗೊಳ್ಳುತ್ತಿವೆ.

ನಿಮಗೆ ಏನು ಅನ್ನಿಸ್ತು?
0 ವೋಟ್