ಟಿ20 ವಿಶ್ವಕಪ್‌ ಆರಂಭಕ್ಕೆ ಮುನ್ನವೇ ಆಘಾತ; ಟೀಮ್‌ ಇಂಡಿಯಾದ ಪ್ರಮುಖ ಬೌಲರ್‌ ಔಟ್‌

  • ಬೆನ್ನು ನೋವಿನಿಂದ ಬಳಲುತ್ತಿರುವ ಜಸ್‌ಪ್ರೀತ್‌ ಬುಮ್ರಾ
  • ವಿಶ್ವಕಪ್‌ಗೆ ಬುಮ್ರಾ ಬದಲಿ ಬೌಲರ್‌ ಆಯ್ಕೆ ಕಷ್ಟವಾಗಲಿದೆ

ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಟೀಮ್‌ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಅಕ್ಟೋಬರ್‌ ತಿಂಗಳಿನಲ್ಲಿ ಆಸ್ಟ್ರೇಲಿಯದಲ್ಲಿ ಚುಟುಕು ಕ್ರಿಕೆಟ್‌ನ ಮಹಾಕೂಟಕ್ಕೆ ಚಾಲನೆ ದೊರೆಯಲಿದೆ. ಇದಕ್ಕೂ ಮೊದಲು ಹಲವು ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಳ್ಳುತ್ತಿರುವ ಟೀಮ್‌ ಇಂಡಿಯಾಗೆ ತೀವ್ರ ಹಿನ್ನಡೆಯಾಗುವ ಸುದ್ದಿಯೊಂದು ಇದೀಗ ಹೊರಬಿದ್ದಿದೆ.

ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಟೀಮ್‌ ಇಂಡಿಯಾದ ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ, ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಇಂಗ್ಲೆಂಡ್‌ ವಿರುದ್ಧದ ಸರಣಿಯ ಬಳಿಕ ಬುಮ್ರಾ, ಟೀಮ್‌ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆಗಸ್ಟ್ 27ರಿಂದ ಯುಎಇಯಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಬುಮ್ರಾ ಅಲಭ್ಯರಾಗಿದ್ದಾರೆ. ಇದು ಭಾರತ ತಂಡಕ್ಕೆ ಬಹುದೊಡ್ಡ ಹಿನ್ನಡೆ ಆಗಿದೆ. ಬುಮ್ರಾ ಸದ್ಯ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.

ಏಷ್ಯಾ ಕಪ್‌ ಮುಗಿದ ಬೆನ್ನಲ್ಲೇ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ ಬುಮ್ರಾ ಗಾಯದ ಸಮಸ್ಯೆ ಆಯ್ಕೆಗಾರರನ್ನು ಚಿಂತೆಗೀಡುಮಾಡಿದೆ. ಈ ಕುರಿತು ಪ್ರಮುಖ ಕ್ರೀಡಾ ವೆಬ್‌ಸೈಟ್‌ ಇನ್‌ಸೈಡ್‌ ಸ್ಪೋರ್ಟ್ಸ್‌ಗೆ ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿಯ ಹಿರಿಯ ಸದಸ್ಯರೊಬ್ಬರು, "ಇದು ಟೀಮ್‌ ಇಂಡಿಯಾಗೆ ಸಂಬಂಧಿಸಿದ ಕಳವಳಕಾರಿ ಬೆಳವಣಿಗೆ. ಸದ್ಯ ಬುಮ್ರಾ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅತ್ಯುತ್ತಮ ವೈದ್ಯಕೀಯ ಸಲಹೆ ಪಡೆಯುತ್ತಿದ್ದಾರೆ. ಪದೇ ಪದೇ ಮರುಕಳಿಸುತ್ತಿರುವ ಗಾಯದ ಸಮಸ್ಯೆ ಚಿಂತೆಗೀಡುಮಾಡಿದೆ. ವಿಶ್ವಕಪ್‌ ಆರಂಭವಾಗಲು ಕೇವಲ ಎರಡು ತಿಂಗಳುಗಳಷ್ಟೇ ಬಾಕಿಯಿದೆ.  ಈ ಅತ್ಯಲ್ಪ ಸಮಯದಲ್ಲಿ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಮರಳುವ ವಿಶ್ವಾಸವಿಲ್ಲ. ಅದಾಗಿಯೂ ನಾವು ಅವರ ಆರೋಗ್ಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಜಿಂಬಾಬ್ವೆ ಪ್ರವಾಸಕ್ಕೆ ಕನ್ನಡಿಗ ರಾಹುಲ್‌ ಸಾರಥ್ಯ

ಬುಮ್ರಾ ಬದಲಿ ಆಯ್ಕೆ ಕಷ್ಟ

Image

ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಬುಮ್ರಾ ಭಾರತದ ಟ್ರಂಪ್‌ ಕಾರ್ಡ್‌ ಆಗಿದ್ದಾರೆ. ವಿಕೆಟ್‌ ಪಡೆಯುವುದರ ಜೊತೆಗೆ ರನ್‌ಗಳನ್ನು ನಿಯಂತ್ರಿಸುವ ಮೂಲಕ ಬುಮ್ರಾ, ಭಾರತದ ಪಾಲಿಗೆ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ಬುಮ್ರಾ ತಂಡದಿಂದ ಹೊರಗುಳಿದರೆ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಬೌಲರ್‌ಗಳ ಕೊರತೆ ಖಂಡಿತವಾಗಿಯೂ ಟೀಮ್‌ ಇಂಡಿಯಾವನ್ನು ಕಾಡಲಿದೆ. ಬುಮ್ರಾ ಬದಲು ಹಿರಿಯ ಬೌಲರ್‌ಗಳಾದ ಮುಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌ ಅಥವಾ ಯುವ ಬೌಲರ್‌ಗಳಾದ ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಬೌಲರ್‌ಗಳು ಅಂತಿಮ ಓವರ್‌ಗಳಲ್ಲಿ ಪರಿಣಾಮಕಾರಿಯಾಗಬಲ್ಲರು ಎಂಬುದನ್ನು ದೃಢವಾಗಿ ಹೇಳಲು ಸಾಧ್ಯವಿಲ್ಲ.

ನಿಮಗೆ ಏನು ಅನ್ನಿಸ್ತು?
0 ವೋಟ್