ಕಂಬಳದ ʻಉಸೇನ್‌ ಬೋಲ್ಟ್‌ʼ ವಿರುದ್ಧ ವಂಚನೆಯ ದೂರು | ಏನಿದು ಪ್ರಕರಣ ?

  • ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ ಆರೋಪ
  • ʻಕಂಬಳದ ಫಲಿತಾಂಶ ಘೋಷಿಸುವ ಸಂಸ್ಥೆಗೆ ಮಾನ್ಯತೆಯಿಲ್ಲʼ

ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಕೋಣಗಳ ಓಟದ ಸ್ಪರ್ಧೆ ಕಂಬಳದ ಓಟಗಾರ ಶ್ರೀನಿವಾಸ್ ಗೌಡ ಸೇರಿದಂತೆ ಮೂವರ ವಿರುದ್ಧ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ, ದ.ಕ. ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್‌ ಶೆಟ್ಟಿ ಎಂಬುವವರು, ಶ್ರೀನಿವಾಸ ಗೌಡ, ಗುಣಪಾಲ ಕಡಂಬ ಮತ್ತು ರತ್ನಾಕರ ವಿರುದ್ಧ ದೂರು ದಾಖಲಿಸಿದ್ದಾರೆ.  

ಕಂಬಳ ಕ್ರೀಡೆಯ ವೇಗ ನಿರ್ಣಯಕ್ಕೆ ಬಳಸಲಾದ ತಂತ್ರಜ್ಞಾನ ನಂಬಲು ಅನರ್ಹವಾಗಿದೆ. ಲೇಸರ್‌ ಬೀಮ್‌ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್‌ ಸಂಸ್ಥೆಗೆ ಯಾವುದೇ ಅಧಿಕೃತ ಮಾನ್ಯತೆಯಿಲ್ಲ. ಹೀಗೆ ದೊರೆತ ತೀರ್ಪಿನ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಶ್ರೀನಿವಾಸ ಗೌಡ ಅವರು ಉಸೇನ್‌ ಬೋಲ್ಟ್‌ ದಾಖಲೆ ಮುರಿದದ್ದೇ ಸುಳ್ಳು ಎಂದು ಪರೋಕ್ಷವಾಗಿ ಲೋಕೇಶ್‌ ಶೆಟ್ಟಿ ಆರೋಪಿಸಿದ್ದಾರೆ. ಕಂಬಳ ಅಕಾಡಮಿಯ ಗುಣಪಾಲ ಕಡಂಬ ಎರಡನೇ ಮತ್ತು ಸ್ಕೈ ವೀವ್‌ ಸಂಸ್ಥೆಯ ಮಾಲೀಕ ರತ್ನಾಕರ್‌ ಅವರನ್ನು ಮೂರನೇ ಆರೋಪಿಯನ್ನಾಗಿ ಹೆಸರಿಸಲಾಗಿದೆ.  ಪೊಲೀಸರು ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಲೋಕೇಶ್ ತಿಳಿಸಿದ್ದಾರೆ.

ಶ್ರೀನಿವಾಸ ಗೌಡ ಅವರು ಉಸೇನ್ ಬೋಲ್ಟ್ ದಾಖಲೆ ಮುರಿದಿದ್ದಾರೆ ಎಂದು ನಕಲಿ ದಾಖಲೆ ಸೃಷ್ಟಿಸಿ ದೇಣಿಗೆ ರೂಪದಲ್ಲಿ ಲಕ್ಷಾಂತರ ಹಣ ಸಂಗ್ರಹ ಮಾಡಿದ್ದಾರೆ. ಕಂಬಳ ಅಭಿಮಾನಿಗಳು, ಮಾಧ್ಯಮ, ಜನಪ್ರತಿನಿಧಿಗಳು, ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮೋಸದಿಂದ ನಡೆದುಕೊಂಡಿದ್ದಾರೆ. ಈ ಮೂಲಕ ಮೂವರೂ ಆರೋಪಿಗಳು ನಕಲಿ ದಾಖಲೆ ಮತ್ತು ದತ್ತಾಂಶ ಸೃಷ್ಟಿಸುವ ಮೂಲಕ ಸರ್ಕಾರ ಮತ್ತು ಸಾರ್ವಜನಿಕ ವಲಯದಿಂದ ಲಕ್ಷಾಂತರ ರೂ. ದೇಣಿಗೆ ಪಡೆದು ಯಾವುದೇ ಲೆಕ್ಕಪತ್ರ ಮಾಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Image

ಈ ಸುದ್ದಿ ಓದಿದ್ದೀರಾ ? : ಒಂದು ನಿಮಿಷದ ಓದು | ಮಿಡ್ಲ್​​ಸೆಕ್ಸ್​ ಪರ ಕಣಕ್ಕಿಳಿದ ಅರ್ಜುನ್ ತೆಂಡುಲ್ಕರ್

2020ರ ಫೆ.1ರಂದು ನಡೆದ ಐಕಳ ಕಂಬಳದಲ್ಲಿ ಶ್ರೀನಿವಾಸ ಗೌಡರು, 100 ಮೀ. ದೂರವನ್ನು 9.55 ಸೆಕೆಂಡ್‌ನಲ್ಲಿ ಕ್ರಮಿಸಿ, ಅಂತರರಾಷ್ಟ್ರೀಯ ವೇಗದ ಚಾಂಪಿಯನ್‌, ಜಮೈಕಾದ  ಉಸೇನ್‌ ಬೋಲ್ಡ್‌ ಅವರ ದಾಖಲೆಯನ್ನು (9.58 ಸೆಕೆಂಡ್‌) ಮುರಿದಿದ್ದರು. ಈ ವಿಚಾರ ದೇಶದಾದ್ಯಂತ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಕಂಬಳ ಓಟಗಾರರನ್ನು ತರಬೇತಿಗೊಳಿಸಿ ಕ್ರೀಡಾಕ್ಷೇತ್ರದಲ್ಲಿ ಬಳಸಿಕೊಳ್ಳಬೇಕು ಎನ್ನುವ ಮಾತುಗಳೂ ಕೇಳಿಬಂದಿದ್ದವು. ಶ್ರೀನಿವಾಸ ಗೌಡ ಅವರನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ದೆಹಲಿಗೆ ಆಹ್ವಾನಿಸಿ ಅಭಿನಂದಿಸಿದ್ದರು. ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕೂಡ ಅಭಿನಂದಿಸಿದ್ದರು. ರಾಜ್ಯ ಸರ್ಕಾರ ಸೇರಿ ದೇಶದ ಹಲವು ಸಂಸ್ಥೆಗಳಿಂದ ಶ್ರೀನಿವಾಸ ಗೌಡ ಅವರಿಗೆ ನೆರವು ಮತ್ತು ಗೌರವ ಸಂದಾಯವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್