ಕೆಕೆಆರ್‌ ಮುಖ್ಯ ಕೋಚ್‌ ಆಗಿ ʻಚಾಣಕ್ಯʼ ಚಂದ್ರಕಾಂತ್​ ಪಂಡಿತ್ ನೇಮಕ

  • ಬ್ರೆಂಡನ್‌ ಮೆಕಲಂ ಸ್ಥಾನಕ್ಕೆ ಚಂದ್ರಕಾಂತ್​ ಪಂಡಿತ್ ನೇಮಕ
  • ದೇಶಿ ಕ್ರಿಕೆಟ್‌ನಲ್ಲಿ ಕೋಚ್‌ ಆಗಿ ಅಮೋಘ ಯಶಸ್ಸು ಕಂಡಿರುವ ಪಂಡಿತ್  

ಐಪಿಎಲ್‌ನ ಎರಡು ಬಾರಿಯ ಚಾಂಪಿಯನ್‌ ತಂಡ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ನೂತನ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್​ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕೆಕೆಆರ್‌ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿದೆ. ಬ್ರೆಂಡನ್‌ ಮೆಕಲಂ ಇಂಗ್ಲೆಂಡ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕವಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚಂದ್ರಕಾಂತ್​ ಪಂಡಿತ್ ಅವರನ್ನು ನೇಮಿಸಲಾಗಿದೆ.

ದೇಶಿ ಕ್ರಿಕೆಟ್‌ನಲ್ಲಿ ʻಚಾಣಕ್ಯʼ ಖ್ಯಾತಿಯ ಕೋಚ್‌ ಆಗಿ ಚಂದ್ರಕಾಂತ್​ ಪಂಡಿತ್ ಅಮೋಘ ಯಶಸ್ಸು ಕಂಡಿದ್ದಾರೆ. ಪಂಡಿತ್‌ ನೇತೃತ್ವದಲ್ಲಿ ಈ ಬಾರಿ ಮಧ್ಯಪ್ರದೇಶ ತಂಡ, ಮೊತ್ತಮೊದಲ ಬಾರಿಗೆ ರಣಜಿ ಟ್ರೋಫಿ ಗೆದ್ದು ಬೀಗಿತ್ತು. ಚಂದ್ರಕಾಂತ್ ಪಂಡಿತ್, 1986ರಿಂದ 1992ರ ಅವಧಿಯಲ್ಲಿ ಭಾರತದ ಪರ 5 ಟೆಸ್ಟ್​​, 36 ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.

'ಕೆಕೆಆರ್‌ ಕೋಚ್‌ ಜವಾಬ್ದಾರಿ ದೊಡ್ಡ ಗೌರವ ಮತ್ತು ಸವಾಲುʼ ಎಂದು ಪ್ರತಿಕ್ರಿಯಿಸಿರುವ ಪಂಡಿತ್, ʻಪ್ರತಿಭಾನ್ವಿತ ಆಟಗಾರರು, ಸಿಬ್ಬಂದಿ ಜೊತೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆʼ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದ್ರಕಾಂತ್​ ಪಂಡಿತ್ ನೇಮಕದ ಕುರಿತು ಪ್ರತಿಕ್ರಿಯಿಸಿರುವ ಕೆಕೆಆರ್​​ ಸಿಇಒ ವೆಂಕಿ ಮೈಸೂರು, ʻನಮ್ಮ ಪ್ರಯಾಣದ ಮುಂದಿನ ಹಂತದಲ್ಲಿ ಚಂದ್ರಕಾಂತ್,​​ ನೈಟ್​​ ರೈಡರ್ಸ್​​ ಕುಟುಂಬ ಸೇರುತ್ತಿದ್ದಾರೆ. ಅವರು ಏನು ಮಾಡಿದ್ದಾರೆ ಎಂಬುವುದಕ್ಕೆ ದೇಶೀಯ ಕ್ರಿಕೆಟ್ ದಾಖಲೆಗಳೇ ಸಾಕ್ಷಿ. ಇದೀಗ ನಾಯಕ ಶ್ರೇಯಸ್​ ಅಯ್ಯರ್​ ಅವರ ಜೊತೆಗಿನ ಪಾಲುದಾರಿಕೆಗೆ ಎದುರು ನೋಡುತ್ತಿದ್ದೇವೆʼ ಎಂದಿದ್ದಾರೆ.

ರಣಜಿ ಟ್ರೋಫಿಯ ಇತಿಹಾಸದಲ್ಲೇ ಅತ್ಯಂತ ದುರ್ಬಲ ತಂಡವೆಂದೇ ಪರಿಗಣಿಸಲ್ಪಟ್ಟಿದ್ದ ವಿದರ್ಭ ತಂಡವು, ಚಂದ್ರಶೇಖರ್‌ ಪಂಡಿತ್‌ ಅವರ ಮಾರ್ಗದರ್ಶನದಲ್ಲಿ ಎರಡು ಬಾರಿ ಚಾಂಪಿಯನ್‌ ಆಗುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಚಂದ್ರಕಾಂತ್ ಅವರ ನೇಮಕಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿ, ಶುಭ ಹಾರೈಸಿದ್ದಾರೆ.

ಈ ಸುದ್ದಿ ಓದಿದ್ದೀರಾ ? : 'ಪ್ರೋತ್ಸಾಹ ಕೊಡಿ' ಎಂದ ಕ್ರೀಡಾಪಟುವಿಗೆ ಸಿಎಂ ಬೊಮ್ಮಾಯಿ ಅವಮಾನ: ನೆಟ್ಟಿಗರ ಆಕ್ರೋಶ

2017- 18 ಮತ್ತು 2018- 19ರ ಸಾಲಿನಲ್ಲಿ ಪ್ರತಿಷ್ಠಿತ ದೇಶೀಯ ಟೂರ್ನಿಯ ಚಾಂಪಿಯನ್‌ ಎನ್ನುವ ಹೆಗ್ಗಳಿಕೆಯನ್ನು ವಿದರ್ಭ ತನ್ನದಾಗಿಸಿಕೊಳ್ಳುವಲ್ಲಿ ಕೋಚ್‌ ಚಂದ್ರಶೇಖರ್‌ ಪಂಡಿತ್‌ ಅವರ ಕೊಡುಗೆ ನಿರ್ಣಾಯಕ ಪಾತ್ರವಹಿಸಿತ್ತು. ಅಲ್ಲಿಯವರೆಗೆ ವಿದರ್ಭ ತಂಡವನ್ನು ಕೂಟದಲ್ಲಿ ಆಟುಕ್ಕುಂಟು- ಲೆಕ್ಕಕ್ಕಿಲ್ಲ ಎಂದೇ ಪರಿಗಣಿಸಲಾಗಿತ್ತು. ಆದರೆ ಯಾರೂ ಊಹಿಸದ ರೀತಿಯಲ್ಲಿ ತಂಡವನ್ನು ಸಜ್ಜುಗೊಳಿಸಿ, ಯುವ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬಿದ್ದ ಪಂಡಿತ್‌, ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದರು. ಇದಕ್ಕೂ ಮೊದಲು 2003 ಮತ್ತು 2004ರಲ್ಲಿ ಮುಂಬೈ ಎರಡು ಬಾರಿ ರಣಜಿ ಚಾಂಪಿಯನ್‌ ಆಗಲು ಪಂಡಿತ್ ಮಾರ್ಗದರ್ಶನ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್