ಚೆಸ್‌ ಒಲಿಂಪಿಯಾಡ್‌ | ಗೆಲುವಿನ ಹಾದಿಗೆ ಭಾರತ

  • ಮೊದಲ ಮೂರು ಪಂದ್ಯವನ್ನು ಜಯಿಸಿದ್ದ ಭಾರತ
  • ಭಾರತ ‘ಬಿ’ ತಂಡ ಗೆಲುವಿನ ಓಟ ಮುಂದುವರಿಸಿದೆ

ಭಾರತ ‘ಎ’ ತಂಡದವರು ಚೆಸ್‌ ಒಲಿಂಪಿಯಾಡ್‌ನಲ್ಲಿ ಗೆಲುವಿನ ಹಾದಿಗೆ ಮರಳಿದ್ದು, ಐದನೇ ಸುತ್ತಿನಲ್ಲಿ 2.5–1.5 ಪಾಯಿಂಟ್‌ಗಳಿಂದ ರೊಮೇನಿಯ ತಂಡವನ್ನು ಸೋಲಿಸಿದೆ.

ಮೊದಲ ಮೂರು ಪಂದ್ಯ ಜಯಿಸಿದ್ದ ಭಾರತ, ನಾಲ್ಕನೇ ಪಂದ್ಯದಲ್ಲಿ ಫ್ರಾನ್ಸ್‌ ಜತೆ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಮಂಗಳವಾರ ನಡೆದ ಐದನೇ ಸುತ್ತಿನಲ್ಲಿ ಅರ್ಜುನ್‌ ಎರಿಗೈಸಿ ಅವರು ರೊಮೇನಿಯದ ಎಮಿಲಿಯನ್ ಪಾಲಿಗ್ರಸ್ ಅವರನ್ನು ಮಣಿಸಿ ಪೂರ್ಣ ಪಾಯಿಂಟ್‌ ಗಳಿಸಿದರು. ಪಿ ಹರಿಕೃಷ್ಣ, ವಿದಿತ್‌ ಸಂತೋಷ್ ಗುಜರಾತಿ ಮತ್ತು ಎಸ್‌ ಎಲ್‌ ನಾರಾಯಣನ್‌ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು.

ಭಾರತ ‘ಬಿ’ ತಂಡ ಗೆಲುವಿನ ಓಟ ಮುಂದುವರಿದಿದ್ದು, 2.5–1.5 ಪಾಯಿಂಟ್‌ಗಳಿಂದ ಸ್ಪೇನ್‌ ಎದುರು ಗೆಲುವು ಸಾದಿಸಿದೆ. ಆರ್‌ ಪ್ರಗ್ನಾನಂದ ಸೋಲು ಅನುಭವಿಸಿದರೂ ಡಿ ಗುಕೇಶ್‌ ಮತ್ತು ಬಿ ಅಧಿಬನ್‌ ಅವರು ಎದುರಾಳಿಗಳನ್ನು ಮಣಿಸಿದರು.

ಗುಕೇಶ್ ಅವರು ವಿಶ್ವ ಚಾಂಪಿಯನ್‌ಷಿಪ್ ಮಾಜಿ ಚಾಲೆಂಜರ್‌ ಅಲೆಕ್ಸಿ ಶಿರೊವ್ ಅವರಿಗೆ ಸೋಲುಣಿಸಿದರು. ಇತ್ತೀಚೆಗಷ್ಟೇ 2,700 ಇಎಲ್‌ಒ ಲೈವ್‌ ರೇಟಿಂಗ್ಸ್ ದಾಟಿರುವ ಭಾರತ ಆಟಗಾರ, ಇಲ್ಲಿ ಅದ್ಭುತ ಆಟವಾಡಿ ಅಜೇಯ ಓಟ ಮುಂದುವರಿಸಿದರು. ಇದು ಅವರಿಗೆ ಟೂರ್ನಿಯಲ್ಲಿ ಸತತ ಐದನೇ ಜಯ.

ಈ ಗೆಲುವಿನ ಬಳಿಕ ಗುಕೇಶ್‌ ಲೈವ್ ರೇಟಿಂಗ್ಸ್‌ನಲ್ಲಿ ವಿದಿತ್ ಅವರನ್ನು ಹಿಂದಿಕ್ಕಿದರು. ಆ ಮೂಲಕ ವಿಶ್ವನಾಥನ್ ಆನಂದ್‌ ಮತ್ತು ಪೆಂಟಾಲ ಹರಿಕೃಷ್ಣ ಬಳಿಕ ಅತಿ ಹೆಚ್ಚು ರೇಟಿಂಗ್ಸ್ ಹೊಂದಿರುವ ಆಟಗಾರ ಎನಿಸಿಕೊಂಡಿದ್ದಾರೆ.

"ಶಿರೊವ್ ಅವರ ತಪ್ಪುನಡೆಯಿಂದ ನಾನು ಉತ್ತಮ ಸ್ಥಿತಿ ತಲುಪಿದೆ. ತರುವಾಯ ಅವರಿಗೆ ಸೋಲುಣಿಸಿದೆ. ಶಿರೊವ್ ಅವರಂತಹ ಆಟಗಾರನ ಎದುರು ಆಡುವುದೇ ಅದ್ಭುತ ಸಂಗತಿ. ಅವರನ್ನು ಸೋಲಿಸಿದ್ದು ಇನ್ನೂ ವಿಶೇಷ" ಎಂದು ಪಂದ್ಯದ ಬಳಿಕ ಗುಕೇಶ್ ನುಡಿದರು. ಅಧಿಬನ್ ಅವರು ಗ್ರ್ಯಾಂಡ್‌ಮಾಸ್ಟರ್‌ ಎಡುರ್ಡೊ ಇಟ್ಟುರಿಜಗಾ ಅವರನ್ನು ಮಣಿಸಿದರು. ನಿಹಾಲ್‌ ಸರೀನ್‌ ಅವರು ಆ್ಯಂಟನ್‌ ಗಿಜಾರ್ ಅವರೊಂದಿಗೆ ಡ್ರಾ ಸಾಧಿಸಿದರು. ಭಾರತ ‘ಸಿ’ ತಂಡ 2.5–1.5 ಪಾಯಿಂಟ್‌ಗಳಿಂದ ಚಿಲಿ ತಂಡವನ್ನು ಸೋಲಿಸಿತು.

ಮಹಿಳೆಯರ ವಿಭಾಗದಲ್ಲಿ ‘ಎ’ ತಂಡ 2.5–1.5 ಪಾಯಿಂಟ್‌ಗಳಿಂದ ಫ್ರಾನ್ಸ್‌ ಎದುರು ಗೆದ್ದಿದೆ. ತಾನಿಯಾ ಸಚ್‌ದೇವ್‌ ಗೆಲುವಿನ ಪಾಯಿಂಟ್ಸ್ ಗಳಿಸಿಕೊಟ್ಟರು. ‘ಬಿ’ ತಂಡ 1–3 ರಲ್ಲಿ ಜಾರ್ಜಿಯಾ ಕೈಯಲ್ಲಿ ಪರಾಭವಗೊಂಡರೆ, ‘ಸಿ’ ತಂಡ ಬ್ರೆಜಿಲ್‌ ಜತೆ 2–2ರಲ್ಲಿ ಡ್ರಾ ಮಾಡಿಕೊಂಡಿತು.

ನಿಮಗೆ ಏನು ಅನ್ನಿಸ್ತು?
0 ವೋಟ್