'ಪ್ರೋತ್ಸಾಹ ಕೊಡಿ' ಎಂದ ಕ್ರೀಡಾಪಟುವಿಗೆ ಸಿಎಂ ಬೊಮ್ಮಾಯಿ ಅವಮಾನ: ನೆಟ್ಟಿಗರ ಆಕ್ರೋಶ

  • ಸರ್ಕಾರಿ ಉದ್ಯೋಗ ಕೊಡುವ ಮೂಲಕ ಪ್ರೋತ್ಸಾಹ ನೀಡಿ; ಗುರುರಾಜ್ ಪೂಜಾರಿ
  • ದೇಶಕ್ಕೆ, ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಎಂಬುದನ್ನು ಕೇಳಿಕೊಳ್ಳಿ ಎಂದ  ಸಿಎಂ

ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿ, ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೊಡಿ ಎಂದು ಕೇಳಿದ ಕನ್ನಡಿಗ ಕ್ರೀಡಾಪಟು ಗುರುರಾಜ್ ಪೂಜಾರಿಯವರನ್ನು ಅವಮಾನಿಸುವ ರೀತಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ವಿಜೇತರಿಗೆ ಮತ್ತು ಭಾಗವಹಿಸಿದ ಕ್ರೀಡಾಪಟುಗಳಿಗೆ ವಿಧಾನಸೌಧದ ಬಾಂಕ್ವೆಟ್‌ ಹಾಲ್‌ನಲ್ಲಿ ಮಂಗಳವಾರ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ತಮ್ಮ ಸ್ಥಾನದ ಘನತೆ ಮರೆತು ಮಾತನಾಡಿದ್ದಾರೆ.

ಮೊದಲು ಸನ್ಮಾನ ಸ್ವೀಕರಿಸಿ ಮಾತನಾಡಿದ್ದ ಗುರುರಾಜ್ ಪೂಜಾರಿ, 'ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕಡಿಮೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕು. ಜೊತೆಗೆ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆಯೂ ಯೋಚಿಸಬೇಕು' ಎಂದು ಹೇಳಿದ್ದರು.

ಆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಬ್ಬ ಕ್ರೀಡಾಪಟುವಾಗಿ ದೇಶಕ್ಕೆ, ರಾಜ್ಯಕ್ಕೆ  ನಿಮ್ಮ ಕೊಡುಗೆ ಏನು ಎಂಬುದನ್ನು ಕೇಳಿಕೊಳ್ಳಿ. ಸರ್ಕಾರ ಏನು ಮಾಡಬೇಕೆಂದು ಹೇಳುವ ಮುನ್ನ ನೀವೇನು ಮಾಡಬೇಕೆಂದು ಮೊದಲು ತೀರ್ಮಾನ ಮಾಡಿ. ನೌಕರಿಗಾಗಿ ಕ್ರೀಡೆಯನ್ನು ಆಡುವುದಲ್ಲ. ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಬೇಕು. ಮೊದಲು ಆಟವಾಡುವುದನ್ನು ಕಲಿಯಿರಿ ಎಂದು ಅಮಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ.

Image

ಬೊಮ್ಮಾಯಿ ಹೇಳಿಕೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. "ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು. ಇಂದು ರಾಜ್ಯದಲ್ಲಿ ಕ್ರೀಡೆ ಸೇರಿದಂತೆ ಯುವಜನರಿಗೆ ಪ್ರೋತ್ಸಾಹ ಕಡಿಮೆ ಇದೆ‌. ಅಲ್ಲದೆ, ನಿರುದ್ಯೋಗವೂ ಕಾಡುತ್ತಿದೆ. ಕ್ರೀಡೆಯಿಂದ ಜೀವನ ಕಟ್ಟಿಕೊಳ್ಳಬಹುದಾದ ವಾತಾವರಣವೂ ರಾಜ್ಯದಲ್ಲಿಲ್ಲ. ಈ ಕಾರಣಕ್ಕಾಗಿಯೇ ಕ್ರೀಡಾಪಟು ಪ್ರೋತ್ಸಾಹ ನೀಡಬೇಕೆಂದು ಕೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಬೇಜವಾಬ್ದಾರಿತನದಿಂದ ಮಾತನಾಡಿರುವುದು ಖಂಡನೀಯ" ಎಂದು ಸಂತೋಷ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಮ್ಯಾಂಚೆಸ್ಟರ್‌ ಯುನೈಟೆಡ್‌ ಖರೀದಿ ಟ್ವೀಟ್‌: 'ತಮಾಷೆ' ಎಂದ ಎಲಾನ್‌ ಮಸ್ಕ್‌

ಗುರುರಾಜ್ ಪೂಜಾರಿ ಮಾತು

ʻಕರ್ನಾಟಕದ ಕ್ರೀಡಾಪಟುಗಳಿಗೆ ಮತ್ತಷ್ಟು ಬೆಂಬಲ ಸಿಕ್ಕರೆ ಇನ್ನೂ ಹೆಚ್ಚು ಪದಕ ಗೆಲ್ಲಲು ನೆರವಾಗುತ್ತದೆ. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಒಟ್ಟು 61 ಪದಕಗಳನ್ನು ಗೆದ್ದಿದ್ದಾರೆ.  ಇದರಲ್ಲಿ ಕರ್ನಾಟಕದ ಮೂವರು ಕ್ರೀಡಾಪಟುಗಳು ಪದಕ ಗೆದ್ದಿದ್ದಾರೆ. ಪದಕ ವಿಜೇತರಿಗೆ ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಧನ ಘೋಷಣೆ ಮಾಡಲಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿನ ಪ್ರೋತ್ಸಾಹ ಧನ ಕಡಿಮೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ಧನ ಸಿಕ್ಕರೆ ಕರ್ನಾಟಕದ ಕ್ರೀಡಾಪಟುಗಳು ಮತ್ತಷ್ಟು ಪದಕಗಳನ್ನು ಗಳಿಸುತ್ತಾರೆ. ಕ್ರೀಡಾಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ಕೂಡ ನೀಡಬೇಕು' ಎಂದು ಮನವಿ ಮಾಡಿದ್ದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕನ್ನಡಿಗ ಗುರುರಾಜ್ ಪೂಜಾರಿ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದರು. ಪುರುಷರ ವೇಟ್‌ಲಿಫ್ಟಿಂಗ್‌ನ  61 ಕೆಜಿ ವಿಭಾಗದಲ್ಲಿ ಒಟ್ಟು 269 ಕೆಜಿ ಭಾರ ಎತ್ತುವಲ್ಲಿ ಗುರುರಾಜ್‌ ಸಫಲರಾಗಿದ್ದರು. ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ 56 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗುರುರಾಜ ಪೂಜಾರಿ, ಬೆಳ್ಳಿ ಪದಕ ಗೆದ್ದಿದ್ದರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಜೆಡ್ಡು ಮೂಲದವರಾದ  ಗುರುರಾಜ್‌ ಪೂಜಾರಿ, ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಗಳ ಪುತ್ರ. ವಾಯುಸೇನೆಯಲ್ಲಿ ಉದ್ಯೋಗಿಯಾಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್