ಕಾಮನ್‌ವೆಲ್ತ್‌ ಗೇಮ್ಸ್‌ಗೆ ಕ್ಷಣಗಣನೆ| ಮಹಿಳಾ ಸ್ಪರ್ಧಿಗಳ ಪಾರಮ್ಯ !

22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಗುರುವಾರ (ಜುಲೈ 28) ಚಾಲನೆ ದೊರೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶುಕ್ರವಾರದಿಂದ (ಜುಲೈ 29) ಸ್ಪರ್ಧೆಗಳು ಆರಂಭವಾಗಲಿದೆ.

72 ರಾಷ್ಟ್ರ, 5000ಕ್ಕೂ ಹೆಚ್ಚು ಸ್ಪರ್ಧಿಗಳು

ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ನಂತರದಲ್ಲಿ ಮೂರನೇ ಅತಿದೊಡ್ಡ ಕ್ರೀಡಾಕೂಟ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಈ ಬಾರಿ 72 ರಾಷ್ಟ್ರಗಳ 5,000ಕ್ಕೂ ಹೆಚ್ಚು ಕ್ರೀಡಾಪಟುಗಳು, 20 ಕ್ರೀಡೆಗಳಲ್ಲಿ  280 ವಿಭಾಗಗಳಲ್ಲಿ 1,875 ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ.  215 ಭಾರತೀಯ  ಅಥ್ಲೀಟ್‌ಗಳು ಈ ಬಾರಿಯ ಗೇಮ್ಸ್‌ನಲ್ಲಿ 15 ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ರಾಣಿ ಎಲಿಜೆಬೆತ್ ಗೈರು

ಅಲೆಕ್ಸಾಂಡರ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭಕ್ಕೆ ರಾಣಿ ಎರಡನೇ ಎಲಿಜೆಬೆತ್ ಗೈರಾಗಲಿದ್ದಾರೆ. ಬಕ್ಕಿಂಗ್‌ಹ್ಯಾಮ್‌ ಅರಮನೆಯಿಂದಲೇ ರಾಣಿ ಎಲಿಜೆಬೆತ್ ಕ್ರೀಡಾಕೂಟಕ್ಕೆ ಶುಭ ಕೋರುವ ಸಂದೇಶ ಓದುವ ಮೂಲಕ ಚಾಲನೆ ನೀಡಲಿದ್ದಾರೆ. ರಾಜಕುಮಾರ ಚಾರ್ಲ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ತಂಡಗಳ ಪಥಸಂಚಲನದಲ್ಲಿ ಒಟ್ಟು 164 ಅಥ್ಲೀಟ್‌ಗಳು ಭಾಗವಹಿಸಲಿದ್ದು, ಪಿ.ವಿ ಸಿಂಧು, ಭಾರತದ ಧ್ವಜ ಹಿಡಿದು ತಂಡವನ್ನು ಮುನ್ನಡೆಸಲಿದ್ದಾರೆ. 2018ರ ಗೋಲ್ಡ್​ ಕೋಸ್ಟ್​ ಕಾಮನ್‌ವೆಲ್ತ್‌​ ಗೇಮ್ಸ್​ನಲ್ಲೂ ಅವರು ಭಾರತದ ಧ್ವಜಧಾರಿಯಾಗಿದ್ದರು.

ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು ಮತ್ತು ಬಾಕ್ಸರ್​ ಲವ್ಲಿನಾ ಬೋಗೋರ್ಹೈನ್​ರನ್ನೂ ಧ್ವಜಧಾರಿಯಾಗಲು ಪರಿಗಣಿಸಲಾಯಿತಾದರೂ, ಅಂತಿಮವಾಗಿ ಮತ್ತೆ ಸಿಂಧುಗೆ ಅವಕಾಶ ಲಭಿಸಿದೆ. ಉದ್ಘಾಟನಾ ಸಮಾರಂಭದಲ್ಲಿ 30,000 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 2 ಗಂಟೆಗಳ ಅವಧಿಯ ಕಾರ್ಯಕ್ರಮದಲ್ಲಿ ಖ್ಯಾತ ಇಂಗ್ಲೀಷ್‌ ಸಂಗೀತಗಾರ ಡುರಾನ್‌ ಅವರ ತಂಡ ಪ್ರದರ್ಶನ ನೀಡಲಿದೆ. ಜೊತೆಗೆ ಗ್ರಾಮಿ ಪ್ರಶಸ್ತಿ ವಿಜೇತ ಕಲಾವಿದ ಟೋನಿ ಲೊಮ್ಮಿ, ಸ್ಯಾಕ್ಸಾಫೋನ್ ವಾದಕ ಸೊವೆಟೊ ಕಿಂಚ್, ವಯೋಲಿನ್ ವಾದಕರಾದ ಮಾರ್ಷಲ್ ಮತ್ತು ಗ್ಯಾಂಬಿನಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಡಿಜೆ ಔಡೆನ್ ಆ್ಯಲೆನ್ ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯವನ್ನು ಪ್ರಸ್ತುತ ಪಡಿಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ ? : ಕಾಮನ್‌ವೆಲ್ತ್‌ ಗೇಮ್ಸ್‌ | ಪಿವಿ ಸಿಂಧು ಭಾರತದ ಧ್ವಜಧಾರಿ

ಮಹಿಳಾ ಸ್ಪರ್ಧಿಗಳ ಪಾರಮ್ಯ !

ಜುಲೈ 28ರಿಂದ ಆಗಸ್ಟ್‌ 8ರವರೆಗೆ ನಡೆಯಲಿರುವ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಈ ಬಾರಿ ಪುರುಷರಿಗಿಂತ, ಮಹಿಳಾ ಸ್ಪರ್ಧಿಗಳಿಗೆ ಹೆಚ್ಚಿನ ಪದಕ ಗೆಲ್ಲುವ ಅವಕಾಶ ಸಿಗಲಿದೆ. ಪುರುಷರಿಗೆ 134 ಚಿನ್ನದ ಪದಕಗಳ ಸ್ಪರ್ಧೆಗಳಿದ್ದರೆ, ಮಹಿಳೆಯರಿಗೆ 136 ಚಿನ್ನದ ಪದಕಗಳ ಸ್ಪರ್ಧೆಗಳು ಆಯೋಜನೆಯಾಗಿದೆ. ಮಿಶ್ರ ಸ್ಪರ್ಧೆಗಳಿಗೆ 10 ಬಂಗಾರದ ಪದಕಗಳನ್ನು ಮೀಸಲಿಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್